Site icon Vistara News

Maldives: ಇಸ್ರೇಲಿಗರ ಪ್ರವೇಶವನ್ನು ನಿಷೇಧಿಸಿದ ಮಾಲ್ಡೀವ್ಸ್‌; ಭಾರತದ ಬೀಚ್‌ಗೆ ತೆರಳಿ ಎಂದು ತಿರುಗೇಟು ನೀಡಿದ ಇಸ್ರೇಲ್‌

Maldives

Maldives

ನವದೆಹಲಿ: ಇಸ್ರೇಲ್‌-ಪ್ಯಾಲೆಸ್ತೀನ್‌ ನಡುವಿನ ಸಂಘರ್ಷ ಇನ್ನೂ ಮುಂದುವರಿದಿದೆ. ಗಾಜಾದಲ್ಲಿ ನಡೆಯುತ್ತಿರುವ ಯುದ್ಧದ ಬಗ್ಗೆ ಜಗತ್ತಿನಾದ್ಯಂತ ಆಕ್ರೋಶ ವ್ಯಕ್ತವಾಗುತ್ತಿರುವ ಮಧ್ಯೆ ಮಾಲ್ಡೀವ್ಸ್‌ (Maldives) ಸರ್ಕಾರ ಇಸ್ರೇಲ್‌ (Israel) ಪಾಸ್‌ಪೋರ್ಟ್‌ ಹೊಂದಿರುವವರ ಪ್ರವೇಶವನ್ನು ನಿಷೇಧಿಸಿದೆ. ಇದಕ್ಕೆ ತಿರುಗೇಟು ನೀಡಿರುವ ಇಸ್ರೇಲ್‌ ಇದೀಗ ತನ್ನ ದೇಶದ ಪ್ರವಾಸಿಗರಿಗೆ ಮಾಲ್ಡೀವ್ಸ್‌ಗೆ ತೆರಳುವ ಬದಲು ಭಾರತಕ್ಕೆ ತೆರಳಿ ಎಂದು ಕರೆ ನೀಡಿದೆ. ಭಾರತದ ವಿವಿಧ ಪ್ರವಾಸೋದ್ಯಮ ಸ್ಥಳಗಳನ್ನು ಉಲ್ಲೇಖಿಸಿ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್‌ ಹಂಚಿಕೊಂಡಿದೆ.

ಮಾಲ್ಡೀವ್ಸ್‌ ತನ್ನಲ್ಲಿರುವ ಮನಮೋಹಕ ಬೀಚ್‌ಗಳಿಗೆ ಹೆಸರುವಾಸಿ. ಹೀಗಾಗಿ ಈ ದ್ವೀಪ ರಾಷ್ಟ್ರಕ್ಕೆ ಪ್ರತಿ ದಿನ ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರು ಭೇಟಿ ನೀಡುತ್ತಾರೆ. ಇದೀಗ ಮಾಲ್ಡೀವ್ಸ್‌ ಸರ್ಕಾರ ಇಸ್ರೇಲಿಗರನ್ನು ನಿಷೇಧಿಸಿದ್ದು, ಇದಕ್ಕೆ ಭಾರತದಲ್ಲಿರುವ ಇಸ್ರೇಲ್‌ ರಾಯಭಾರ ಕಚೇರಿ ಠಕ್ಕರ್‌ ನೀಡಿದೆ. ಲಕ್ಷ ದ್ವೀಪ, ಗೋವಾ, ಕೇರಳ ಮುಂತಾದೆಡೆಗಳ ಸುಂದರ ಕಡಲ ತೀರಗಳ ಫೋಟೊವನ್ನು ಹಂಚಿಕೊಂಡಿದೆ.

ʼʼಮಾಲ್ಡೀವ್ಸ್‌ ಇನ್ನು ಮುಂದೆ ಇಸ್ರೇಲಿಗರನ್ನು ಸ್ವಾಗತಿಸುವುದಿಲ್ಲ. ಹೀಗಾಗಿ ಇಸ್ರೇಲಿ ಪ್ರವಾಸಿಗರು, ಆತ್ಮೀಯವಾಗಿ ಸ್ವಾಗತಿಸುವ, ಅತ್ಯುತ್ತಮ ಆತಿಥ್ಯ ನೀಡುವ ಸುಂದರ ಮತ್ತು ಅದ್ಭುತ ಕಡಲ ತೀರಗಳಿರುವ ಭಾರತಕ್ಕೆ ಭೇಟಿ ನೀಡಿ. ಲಕ್ಷ ದ್ವೀಪ, ಗೋವಾ, ಅಂಡಾಮಾನ್‌ & ನಿಕೋಬಾರ್‌ ಮತ್ತು ಕೇರಳದ ಸುಂದರ ಕಡಲ ತೀರಗಳನ್ನು ಸಂದರ್ಶಿಸಿʼʼ ಎಂದು ರಾಯಭಾರ ಕಚೇರಿ ಪ್ರವಾಸಿಗರಿಗೆ ಶಿಫಾರಸ್ಸು ಮಾಡಿದೆ.

ಇಸ್ರೇಲಿ ಪಾಸ್‌ಪೋರ್ಟ್‌ ಹೊಂದಿರುವ ವ್ಯಕ್ತಿಗಳು ಮಾಲ್ಡೀವ್ಸ್‌ಗೆ ಪ್ರವೇಶಿಸುವುದನ್ನು ನಿಷೇಧಿಸುವ ನಿರ್ಧಾರವನ್ನು ಮಾಲ್ಡೀವ್ಸ್ ಭಾನುವಾರ (ಜೂನ್‌ 2) ಪ್ರಕಟಿಸಿದೆ. ಮಾಲ್ಡೀವ್ಸ್ ಅಧ್ಯಕ್ಷರ ಕಚೇರಿಯಲ್ಲಿ ಮಾತನಾಡಿದ ಸಚಿವ ಅಲಿ ಇಹ್ಸಾನ್ ಈ ನಿರ್ಧಾರವನ್ನು ಪ್ರಕಟಿಸಿದರು. ಇಸ್ರೇಲ್‌ ಪಾಸ್‌ಪೋರ್ಟ್‌ ಹೊಂದಿರುವವರು ಮಾಲ್ಡೀವ್ಸ್‌ ಪ್ರವೇಶಿಸುವುದನ್ನು ತಡೆಯಲು ಅಗತ್ಯವಾದ ಕಾನೂನುಗಳನ್ನು ಜಾರಿಗೆ ಸರಲು ಸರ್ಕಾರ ಸಿದ್ಧತೆ ನಡೆಸುತ್ತಿದೆ. ಇದರ ಮೇಲ್ವಿಚಾರಣೆಯನ್ನು ನಡೆಸಲು ಉಪಸಮಿತಿ ರಚಿಸಲೂ ನಿರ್ಧರಿಸಲಾಗಿದೆ.

ಭಾರತವನ್ನು ಕೆಣಕಿ ಪೆಟ್ಟುತಿಂದ ಮಾಲ್ಡೀವ್ಸ್‌

ಕೆಲವು ತಿಂಗಳ ಹಿಂದೆ ಪ್ರಧಾನಿ ನರೇಂದ್ರ ಮೋದಿ ಅವರು ಲಕ್ಷದ್ವೀಪಕ್ಕೆ ತೆರಳಿ, ಅಲ್ಲಿನ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಬೇಕು ಎಂದಿದ್ದಕ್ಕೇ ತಗಾದೆ ತೆಗೆದಿದ್ದ ಮಾಲ್ಡೀವ್ಸ್‌ನ ಪ್ರವಾಸೋದ್ಯಮಕ್ಕೆ ಭಾರಿ ಹೊಡೆತ ಬಿದ್ದಿದೆ. ಭಾರತ ಹಾಗೂ ಮೋದಿ ಕುರಿತು ಮಾಲ್ಡೀವ್ಸ್‌ ಅಸಮಾಧಾನದ ಹೇಳಿಕೆ ನೀಡಿದ ಬಳಿಕ ದೇಶದಲ್ಲಿ ಬಾಯ್ಕಾಟ್‌ ಮಾಲ್ಡೀವ್ಸ್‌ ಅಭಿಯಾನ ಶುರುವಾದ ಕಾರಣ ಆಾಲ್ಲಿಗೆ ತೆರಳುವವರ ಸಂಖ್ಯೆ ಭಾರಿ ಪ್ರಮಾಣದಲ್ಲಿ ಕುಸಿದಿದೆ.

ಇದನ್ನೂ ಓದಿ: Maldives Tourism: ಪರಿಣಾಮ ಬೀರಿದ ಮಾಲ್ಡೀವ್ಸ್ ಬಹಿಷ್ಕಾರದ ಕೂಗು; ಭೇಟಿ ನೀಡುವ ಭಾರತೀಯರ ಸಂಖ್ಯೆಯಲ್ಲಿ ಭಾರೀ ಕುಸಿತ

ಭಾರತೀಯರ ಭೇಟಿ ಕುಸಿತ

ಮಾಲ್ಡೀವ್ಸ್‌ಗೆ ತೆರಳುವ ಪ್ರವಾಸಿಗರಲ್ಲಿ ಭಾರತೀಯರ ಸಂಖ್ಯೆಯೇ ಹೆಚ್ಚಿತ್ತು. ಆದರೆ ಬಾಯ್ಕಾಟ್‌ ಅಭಿಯಾನದ ಬಳಿಕ ಪ್ರವಾಸಿಗರ ಸಂಖ್ಯೆ ಗಣನೀಯವಾಗಿ ಕುಸಿದಿದೆ. 2024ರ ಏಪ್ರಿಲ್‌ 10ರವರೆಗೆ ಮಾಲ್ಡೀವ್ಸ್‌ಗೆ 6.63 ಲಕ್ಷ ಪ್ರವಾಸಿಗರು ಭೇಟಿ ನೀಡಿದ್ದಾರೆ. ಚೀನಾದ 71 ಸಾವಿರ ಪ್ರವಾಸಿಗರು ಭೇಟಿ ನೀಡಿದ್ದು, ಮೊದಲ ಸ್ಥಾನದಲ್ಲಿದ್ದಾರೆ. ನಂತರದ ಸ್ಥಾನದಲ್ಲಿ ಬ್ರಿಟನ್‌, ರಷ್ಯಾ, ಇಟಲಿ, ಜರ್ಮನಿ ಹಾಗೂ ಭಾರತದ ಪ್ರವಾಸಿಗರಿದ್ದಾರೆ. ಇದೀಗ ಮತ್ತೆ ದ್ವೀಪ ರಾಷ್ಟ್ರಕ್ಕೆ ಮತ್ತೊಂದು ಸುತ್ತಿನ ಹೊಡೆತ ಬೀಳುವ ಸಾಧ್ಯತೆ ಇದೆ ಎಂದು ವಿಶ್ಲೇಷಿಲಾಗುತ್ತಿದೆ.

Exit mobile version