ಲಂಡನ್: ಬ್ರಿಟನ್‌ನಲ್ಲಿ ತುರ್ತು ಸಂದರ್ಭಗಳನ್ನು ನಿಭಾಯಿಸಲು ಇರುವಂಥ ಸಹಾಯವಾಣಿ 999ಕ್ಕೆ ಇತ್ತೀಚೆಗೆ ವಿಚಿತ್ರವಾದ ಕರೆಯೊಂದು ಬಂತು. ಅದು ಯಾವುದೋ ಅಪಘಾತ ವರದಿ ಮಾಡಲು ಅಥವಾ ನೆರವನ್ನು ಕೋರಿ ಬಂದ ಕರೆಯಾಗಿರಲಿಲ್ಲ. ಬದಲಿಗೆ, ಆರ್ಡರ್ ಕೊಟ್ಟು ಅರ್ಧ ಗಂಟೆಯಾದರೂ ತನ್ನ ಪಿಜ್ಜಾ ಬರಲಿಲ್ಲ ಎಂಬ ದೂರಿನ ಕರೆಯಾಗಿತ್ತು!
ವ್ಯಕ್ತಿಯೊಬ್ಬ ಪಿಜ್ಜಾ ಅಂಗಡಿಗೆ ಹೋಗಿ ಆರ್ಡರ್ ಮಾಡಿ ಕುಳಿತಿದ್ದ. ಆದರೆ ಅರ್ಧಗಂಟೆಯಾದರೂ ಆತನ ಪಿಜ್ಜಾ ತಯಾರಾಗಿ ಬಾರದೆ ಇದ್ದಾಗ ಇವನು ಎಸ್ಸೆಕ್ಸ್ ಪೊಲೀಸ್ ಸಹಾಯವಾಣಿಗೆ ಕರೆ ಮಾಡಿದ್ದಾನೆ. ಈತ ನಿಜವಾಗಿ ಹಸಿವಿನಿಂದ ಕಂಗಾಲಾಗಿ ಹೀಗೆ ಕರೆ ಮಾಡಿದನೋ ಅಥವಾ ಚೇಷ್ಟೆಗಾಗಿ ಮಾಡಿದ ಕರೆಯೋ ಎಂಬುದು ಸ್ಪಷ್ಟವಾಗಿಲ್ಲ. ತುರ್ತು ಸಂದರ್ಭಗಳಲ್ಲಿ ಜನರಿಗೆ ನೆರವಾಗಲಿ ಎಂದು ಇರುವಂಥ ಸಹಾಯವಾಣಿಗಳಿಗೆ ಇಂಥ ಕಿರಿಕಿರಿ ಕರೆಗಳು ಬರುವುದು ಹೆಚ್ಚುತ್ತಿವೆಯಂತೆ. ಒಬ್ಬ ಪುಣ್ಯಾತ್ಮನಂತೂ ಕರೆ ಮಾಡಿ, ʻಗಂಟೆ ಎಷ್ಟು?ʼ ಎಂದು ಕೇಳಿದ್ದನಂತೆ. ಸುಖದ ದುಃಖ ಎಂದರೆ ಬಹುಶಃ ಇದೇ ಇರಬೇಕು!
ಇದನ್ನೂ ಓದಿ: ಪುಟ್ಟ ಮಗನಿಗೆ ಈಜು ಕಲಿಸಲು ಯತ್ನಿಸಿದ ತಾಯಿಗೆ ಏನಾಯ್ತು?-ಫನ್ನಿ ವಿಡಿಯೋ ವೈರಲ್
ಹೀಗೆ ನಿರಂತರವಾಗಿ ಬರುತ್ತಿರುವ ಚೇಷ್ಟೆ ಕರೆಗಳಿಂದ ಪೊಲೀಸರು ಬೇಸತ್ತು ಹೋಗಿದ್ದಾರೆ. ಈ ಮಧ್ಯೆ ಎಸೆಕ್ಸ್ ಪೊಲೀಸ್ ಇಲಾಖೆ ಸಾರ್ವಜನಿಕರಲ್ಲಿ ಮನವಿ ಮಾಡಿದ್ದು, ತುರ್ತು ಸಂದರ್ಭಗಳಲ್ಲಿ ಮಾತ್ರ ಸಹಾಯವಾಣಿಗೆ ಕರೆಮಾಡುವಂತೆ ಕೋರಿದೆ. ಹೀಗೆ ಅನಗತ್ಯ ವಿಷಯಕ್ಕೆ ಕರೆ ಮಾಡುತ್ತಿದ್ದರೆ, ಅಗತ್ಯವಿರುವವರಿಗೆ ತಮ್ಮ ನೆರವು ದೊರೆಯದೆ ತೊಂದರೆಯಾದೀತು. ಸಹಾಯವಾಣಿಯ ಉದ್ದೇಶವನ್ನು ವ್ಯರ್ಥಮಾಡದೆ ಅರ್ಥ ಮಾಡಿಕೊಳ್ಳಿ ಎಂದು ಇಲಾಖೆ ಒತ್ತಿ ಹೇಳಿದೆ. ʻನಿನ್ನೆಯ ದಿನ ಅಗತ್ಯ ವಿಷಯಗಳಿಗಾಗಿ ಮಾತ್ರವೇ ನಮ್ಮನ್ನು ಸಂಪರ್ಕಿಸಿ ಕರೆಮಾಡಿದವರಿಗೆ ನಮ್ಮ ಧನ್ಯವಾದಗಳುʼ ಎಂದು ಎಸ್ಸೆಕ್ಸ್ ನ ಮುಖ್ಯ ಪೊಲೀಸ್ ಪರಿಷ್ಠಾಧಿಕಾರಿ ಸ್ಟುವರ್ಟ್ ಹೂಪರ್ ತಿಳಿಸಿದ್ದಾರೆ. ದಿನವೊಂದಕ್ಕೆ ಸುಮಾರು ಒಂದು ಸಾವಿರ ದೂರವಾಣಿ ಕರೆಗಳು 999 ಸಹಾಯವಾಣಿಗೆ ನೆರವು ಕೋರಿ ದಾಖಲಾಗುತ್ತವೆ. ಸುಮಾರು 720 ಸಿಬ್ಬಂದಿ ಇದಕ್ಕಾಗಿ ಹಗಲಿರುಳು ಶ್ರಮಿಸುತ್ತಾರೆ.
ಇದನ್ನೂ ಓದಿ: ಬಸ್ ಹತ್ತಿದ ಪ್ರಯಾಣಿಕರಿಗೆ ಈ ಕಂಡಕ್ಟರ್ ಮೊದಲು ಕೊಡೋದು ಏನನ್ನ? ನೆಟ್ಟಿಗರ ಮನ ಗೆದ್ದವರಿವರು!