ಬ್ರುಸ್ಸೆಲ್ಸ್: ಭಾರತ ಸೇರಿ ಜಗತ್ತಿನಾದ್ಯಂತ ಕೃತಕ ಬುದ್ಧಿಮತ್ತೆ (Artificial Intelligence) ಆಧಾರಿತ ಚಾಟ್‌ಬಾಟ್ ಆದ ಚಾಟ್‌ಜಿಪಿಟಿಯದ್ದೇ ಸುದ್ದಿಯಾಗುತ್ತಿದೆ. ಚಾಟ್‌ಜಿಪಿಟಿ ಚಾಟ್‌ಬಾಟ್‌ನಿಂದ ಜನರ ಉದ್ಯೋಗಕ್ಕೆ ಸಂಕಷ್ಟ ಎದುರಾಗಲಿದೆ. ಇದೇ ಜಗತ್ತನ್ನು ಆಳಲಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಹಾಗೆಯೇ, ಮೆಟಾ, ಗೂಗಲ್, ಟ್ವಿಟರ್‌ನಂತಹ ದಿಗ್ಗಜ ಸಂಸ್ಥೆಗಳು ಕೂಡ ಚಾಟ್‌ಬಾಟ್ ಅಭಿವೃದ್ಧಿಪಡಿಸುತ್ತಿವೆ. ಆದರೆ, ಬೆಲ್ಜಿಯಂನಲ್ಲಿ ಇದೇ ಚಾಟ್‌ಜಿಪಿಟಿ ಮಾದರಿಯ ಕೃತಕ ಬುದ್ಧಿಮತ್ತೆ ತಂತ್ರಜ್ಞಾನದ ಚಾಟ್‌ಬಾಟ್ ಆದ ಚೈ (Chai Chatbot)ಗೆ ಅಡಿಕ್ಟ್ ಆಗಿದ್ದ ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನನ್ನ ಪತಿಯ ಆತ್ಮಹತ್ಯೆಗೆ ಚೈ ಚಾಟ್‌ಬಾಟ್ ಕಾರಣ ಎಂಬುದಾಗಿ ಆರೋಪ ಮಾಡಿದ್ದಾರೆ.
ಚೈ ಎಂಬ App ಡೌನ್‌ಲೋಡ್ ಮಾಡಿಕೊಂಡ ನನ್ನ ಪತಿಯು ಆರು ವಾರಗಳಿಂದ ಅದನ್ನೇ ಬಳಸುತ್ತಿದ್ದರು. ಜಾಗತಿಕ ಹವಾಮಾನ ಬದಲಾವಣೆ, ಅದರಿಂದಾಗುವ ಪರಿಣಾಮ, ಮನುಕುಲಕ್ಕೆ ಎದುರಾಗುವ ಸಮಸ್ಯೆ ಕುರಿತು ಅವರಿಗೆ ಭೀತಿಯಾಗಿದೆ. ಇದೇ ಭಯದಿಂದ ಅವರು ಮಾನಸಿಕವಾಗಿ ಕುಗ್ಗಿ, ಖಿನ್ನತೆಗೊಳಗಾಗಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಮಹಿಳೆ ಆರೋಪಿಸಿದ್ದಾರೆ. ಅವರು ಆರು ವಾರದಿಂದ ನಿರಂತರವಾಗಿ ಚೈ ಚಾಟ್‌ಬಾಟ್‌ಅನ್ನು ಬಳಸುತ್ತಿದ್ದರು ಎಂಬುದಾಗಿ ತಿಳಿದುಬಂದಿದೆ. ಆದಾಗ್ಯೂ, ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ ಪಿರೆ ಎಂಬುದಾಗಿ ಹಾಗೂ ಆತನ ಪತ್ನಿಯ ಹೆಸರು ಕ್ಲೈರ್ ಎಂಬುದಾಗಿ ತಿಳಿದುಬಂದಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಪತಿಗೆ ಭೀತಿ ಇತ್ತು ಎಂದ ಮಹಿಳೆ
“ಇತ್ತೀಚೆಗೆ ನಾನು ನನ್ನ ಪತಿಯ ಜತೆ ಮಾತನಾಡಿದಾಗಲೆಲ್ಲ ಅವರು ಜಾಗತಿಕ ತಾಪಮಾನದ ಕುರಿತು ಮಾತನಾಡುತ್ತಿದ್ದರು. ಜಾಗತಿಕ ತಾಪಮಾನದ ಏರಿಕೆಯಿಂದಾಗಿ ಬೀರುವ ಪರಿಣಾಮಗಳ ಬಗ್ಗೆ ಅವರು ಆತಂಕಕ್ಕೀಡಾಗಿದ್ದರು. ತಾಪಮಾನದ ಏರಿಕೆ ಕುರಿತು ಮನುಷ್ಯರು ಕಂಡುಕೊಳ್ಳಬಹುದಾದ ಪರಿಹಾರಗಳು, ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಹೇಳುತ್ತಿದ್ದರು. ಹಾಗೊಂದು ವೇಳೆ, ಪರಿಹಾರ ಕಂಡುಕೊಳ್ಳದಿದ್ದರೆ ಏನೆಲ್ಲ ಆಗಬಹುದು ಎಂದು App ಮೂಲಕ ಮಾಹಿತಿ ಪಡೆದುಕೊಳ್ಳುತ್ತಿದ್ದರು. ಇದೇ ರೀತಿ ಅವರು ಚಾಟ್‌ಬಾಟ್‌ನಲ್ಲಿಯೇ ತಲ್ಲೀನರಾಗಿ, ಕೊನೆಗೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ” ಎಂದು ಹೇಳಿದ್ದಾರೆ.
ಇದನ್ನೂ ಓದಿ: ChatGPT Subscription: ದಕ್ಷತೆ ಹೆಚ್ಚಳ; ನೌಕರರಿಗೆ ಚಾಟ್‌ಜಿಪಿಟಿ ಉಚಿತ ಸಬ್‌ಸ್ಕ್ರಿಪ್ಶನ್ ನೀಡಿದ ಬೆಂಗಳೂರು ಕಂಪನಿ
ಆದಾಗ್ಯೂ, ಘಟನೆ ಕುರಿತು ಚಾಟ್‌ಬಾಟ್ ಸಂಸ್ಥೆ ಚೈ ಪ್ರತಿಕ್ರಿಯಿಸಿದ್ದು, “ಬಳಕೆದಾರರು ಕೇಳುವ ಪ್ರಶ್ನೆಗಳಿಗೆ ಉತ್ತರ ನೀಡಲಾಗುತ್ತದೆ. ಆದರೆ, ಆತ್ಮಹತ್ಯೆಯಂತಹ ಸೂಕ್ಷ್ಮ ಪ್ರಕರಣಗಳ ಕುರಿತು ನಾವು ಎಚ್ಚರಿಕೆ ನೀಡುತ್ತೇವೆ” ಎಂದು ಸ್ಪಷ್ಟನೆ ನೀಡಿದೆ. ಆದಾಗ್ಯೂ, ಚೈ ರಿಸರ್ಚ್‌ನ ಚಾಟ್‌ಬಾಟ್‌ಅನ್ನ ಜಗತ್ತಿನಾದ್ಯಂತ 50 ಲಕ್ಷ ಜನ ಬಳಸುತ್ತಿದ್ದಾರೆ. ಅದರಲ್ಲೂ ಭಾರತದಲ್ಲಿ ಚಾಟ್‌ಜಿಪಿಟಿ ಚಾಟ್‌ಬಾಟ್ ಖ್ಯಾತಿ ಗಳಿಸುತ್ತಿದ್ದು, ಲೇಖನ, ಪತ್ರ, ರಾಜೀನಾಮೆ ಪತ್ರ ಬರೆಯುವುದು, ಕೋಡ್ ರಚಿಸುವುದು ಸೇರಿ ಹಲವು ರೀತಿಯಲ್ಲಿ ಬಳಕೆಯಾಗುತ್ತಿದೆ. ಅಷ್ಟೇ ಅಲ್ಲ, ಇದು ಕಂಪನಿಗಳಿಗೆ ಅನುಕೂಲ ಆಗುತ್ತಿದೆ. ಕಿರಿಯ ಉದ್ಯೋಗಿಗಳು ಚಾಟ್‌ಜಿಪಿಟಿಯಿಂದ ಕೌಶಲ ಅಭಿವೃದ್ಧಿ ಮಾಡಿಕೊಳ್ಳುತ್ತಿದ್ದಾರೆ. ಬೆಂಗಳೂರಿನ ಕ್ಯಾಪಿಟಲ್ ಮೈಂಡ್ ಎಂಬ ಕಂಪನಿಯು ಉದ್ಯೋಗಿಗಳಿಗೆ ಚಾಟ್‌ಜಿಪಿಟಿಯ ನೋಂದಣಿ ಶುಲ್ಕ ನೀಡಿದೆ.