ಢಾಕಾ: ಸಬ್‌ವೇ ಸರ್ಫರ್ಸ್ (Subway Surfers) ಆನ್‌ಲೈನ್ ಗೇಮ್‌ಅನ್ನು ಬಹುತೇಕ ಜನ ಆಡಿರುತ್ತಾರೆ. ಪೊಲೀಸ್ ಅಧಿಕಾರಿ ಅಟ್ಟಿಸಿಕೊಂಡು ಬರುತ್ತಿದ್ದರೆ, ಕಳ್ಳನು ರೈಲು, ಕಟ್ಟಡಗಳ ಮೇಲೆ ಹಾರುತ್ತ ತಪ್ಪಿಸಿಕೊಳ್ಳುವ ಗೇಮ್ ತುಂಬ ಜನರಿಗೆ ಖುಷಿ ಕೊಡುತ್ತದೆ. ಆದರೆ, ಇದೇ ಗೇಮ್ ರೀತಿ ಯುವಕನೊಬ್ಬ ನಿಜ ಜೀವನದಲ್ಲೂ ಚಲಿಸುವ ರೈಲಿನ ಮೇಲೆ ಹುಚ್ಚಾಟ ಮಾಡಿದ್ದಾನೆ. ಪ್ರಾಣದ ಲೆಕ್ಕವೇ ಇಲ್ಲದೆ ಚಲಿಸುವ ರೈಲಿನ (Train) ಮೇಲೆ ಯುವಕ ಮಾಡಿದ ಹುಚ್ಚಾಟದ ವಿಡಿಯೊ ಈಗ ಭಾರಿ ವೈರಲ್ (Viral Video) ಆಗಿದ್ದು, ಜನ ಉಗಿದು ಉಪ್ಪಿನಕಾಯಿ ಹಾಕಿದ್ದಾರೆ.
ಹೌದು, ಬಾಂಗ್ಲಾದೇಶದಲ್ಲಿ ಯುವಕನು ಮಾಡಿದ ಉಪದ್ವ್ಯಾಪದ ವಿಡಿಯೊ ಭಾರಿ ವೈರಲ್ ಆಗಿದೆ. ರೈಲು ಸೇತುವೆ ಮೇಲೆ ಚಲಿಸುತ್ತಿರುತ್ತದೆ. ಆ ರೈಲಿನ ಮೇಲೆ ನಿಲ್ಲುವ ವ್ಯಕ್ತಿಯು ಅಡ್ಡ ಬರುವ ಪ್ರತಿಯೊಂದು ಕಂಬಿಯನ್ನೂ ತಪ್ಪಿಸಿಕೊಳ್ಳುತ್ತಾನೆ. ಪ್ರಾಣದ ಭಯವೇ ಇಲ್ಲದೆ ಕಂಬಿಗಳನ್ನು ತಪ್ಪಿಸಿಕೊಳ್ಳುವ, ನೋಡುಗರಿಗೇ ಭಯ ಹುಟ್ಟಿಸುವ ಈ ವಿಡಿಯೊ ಹರಿದಾಡುತ್ತಿದೆ. ಒಂದು ಕಂಬಿ ತಾಗಿದರೂ ಪ್ರಾಣಪಕ್ಷಿ ಹಾರಿಹೋಗುತ್ತದೆ ಎಂಬುದು ಗೊತ್ತಿದ್ದರೂ ಯುವಕನು ಸಾಹಸ ಹೆಸರಿನಲ್ಲಿ ಮಾಡಿರುವ ಹುಚ್ಚಾಟಕ್ಕೆ ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವ್ಯಕ್ತಿಯ ಹುಚ್ಚಾಟಕ್ಕೆ ಜನ ಪ್ರತಿಕ್ರಿಯಿಸಿದ್ದಾರೆ. “ನಿನಗೆ ಪ್ರಾಣದ ಭಯವೇ ಇಲ್ಲವಾ ಗುರು” ಎಂದು ಒಬ್ಬರು ಪ್ರತಿಕ್ರಿಯಿಸಿದರೆ, “ನಿನ್ನನ್ನೇ ನಂಬಿದ ತಂದೆ-ತಾಯಿ ಗತಿ ಏನು” ಎಂದು ಮತ್ತೊಬ್ಬರು ಎಚ್ಚರಿಸಿದ್ದಾರೆ. “ಮನೆಯಲ್ಲಿ ಹೇಳಿ ಬಂದಿದ್ದೀಯ” ಎಂದು ಇನ್ನೊಬ್ಬರು ಕುಟುಕಿದರೆ, “ಇಂತಹ ವಿಡಿಯೊಗಳನ್ನು, ಹುಚ್ಚಾಟಗಳನ್ನು ನೋಡಿ ಯಾರೂ ಪ್ರಯತ್ನ ಕೂಡ ಮಾಡಬಾರದು” ಎಂದು ಮಗದೊಬ್ಬರು ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ: Rashmika Mandanna: ಮತ್ತೊಮ್ಮೆ ಡೀಪ್‌ಫೇಕ್ ಜಾಲದಲ್ಲಿ ಸಿಲುಕಿದ ರಶ್ಮಿಕಾ; ವೈರಲ್ ವಿಡಿಯೊ ಇಲ್ಲಿದೆ
ಫೇಸ್‌ಬುಕ್, ಇನ್‌ಸ್ಟಾಗ್ರಾಂ ಸೇರಿ ಹಲವು ಸಾಮಾಜಿಕ ಜಾಲತಾಣಗಳ ರೀಲ್ಸ್‌ಗಾಗಿ ಯುವಕ-ಯುವತಿಯರು ಇತ್ತೀಚೆಗೆ ಇಂತಹ ಹುಚ್ಚಾಟ ಮಾಡುವುದು ಹೆಚ್ಚಾಗಿದೆ. ಮೆಟ್ರೋ ರೈಲುಗಳಲ್ಲಿ ಹುಚ್ಚಾಪಟ್ಟೆ ಕುಣಿಯುವುದು, ಸಾರ್ವಜನಿಕ ಪ್ರದೇಶಗಳಲ್ಲಿ ಡಾನ್ಸ್ ಮಾಡುವುದು, ಬೆಟ್ಟದ ತುದಿಯಲ್ಲಿ ನಿಂತು ವಿಡಿಯೊ ಮಾಡುವುದು, ಜಲಪಾತಗಳ ಬಳಿ ಸಾಹಸ ಪ್ರದರ್ಶಿಸುವುದು ಸೇರಿ ಹಲವು ರೀತಿಯ ಚಟುವಟಿಕೆಗಳಿಗೆ ರೀಲ್ಸ್ ಪ್ರಚೋದನೆ ನೀಡುತ್ತಿದೆ. ಇಂತಹ ಹುಚ್ಚಿಗೆ ಹಲವರು ಪ್ರಾಣವನ್ನೂ ಕಳೆದುಕೊಂಡಿದ್ದಾರೆ ಎಂಬುದು ಎಲ್ಲರಿಗೂ ನೆನಪಿರಲಿ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ