ವಾಷಿಂಗ್ಟನ್: ಮನುಷ್ಯನಿಗೆ ಒಮ್ಮೆ ಕೀಳರಿಮೆ ಆವರಿಸಿದರೆ, ಅದು ರೋಗದಂತೆ ಕಾಣುತ್ತದೆ. ಅವನು ಬೆಳ್ಳಗಿದ್ದಾನೆ, ನಾನು ಕಪ್ಪಿದ್ದೇನೆ, ನಾನು ಕುಳ್ಳ, ಅವನಿಗಿರುವ ಎತ್ತರ ನನಗಿದ್ದಿದ್ದರೆ, ಅವನ ತಲೆಯ ಕೂದಲಿನಲ್ಲಿ ಅರ್ಧದಷ್ಟಾದರೂ ನನ್ನ ತಲೆಯಲ್ಲಿ ಇರಬಾರದೆ ಎಂದು ಮನಸ್ಸಲ್ಲೇ ಕೊರಗುವವರ ಸಂಖ್ಯೆ ಜಾಸ್ತಿ ಇರುತ್ತದೆ. ಹೆಣ್ಣುಮಕ್ಕಳಲ್ಲೂ ಸೌಂದರ್ಯದ ಕುರಿತು ಇಂಥದ್ದೊಂದು ಕೀಳರಿಮೆ ಇದ್ದೇ ಇರುತ್ತದೆ. ಹೀಗೆ, ಕುಳ್ಳನೆಂಬ ಕೀಳರಿಮೆಗೆ ಸಿಲುಕಿ, ಗರ್ಲ್‌ಫ್ರೆಂಡ್ ಸಿಗದೆ ಒದ್ದಾಡಿದ ಅಮೆರಿಕದ ವ್ಯಕ್ತಿಯೊಬ್ಬರು ಐದು ಇಂಚು ಎತ್ತರ ಬೆಳೆಯಲು ಸರ್ಜರಿ ಮಾಡಿಸಿಕೊಂಡಿದ್ದಾರೆ. ಇದಕ್ಕಾಗಿ ಆತ 1.35 ಕೋಟಿ ರೂಪಾಯಿ ಖರ್ಚು ಮಾಡಿದ್ದಾನೆ ಎಂದರೆ ನಂಬಲೇಬೇಕು.
ಮಿನ್ನೆಸೋಟಾದ ಮಿನ್ನಿಯಾಪೋಲಿಸ್ ನಿವಾಸಿಯಾಗಿರುವ ಮೊಸೆಸ್ ಗಿಬ್ಸನ್ (41) ಅವರಿಗೆ ಹಲವು ವರ್ಷಗಳಿಂದ ತಾವು ಕುಳ್ಳ ಎಂಬ ಕೀಳರಿಮೆ ಕಾಡುತ್ತಿತ್ತು. ನಾನು ಬರೀ 5.5 ಅಡಿ ಎತ್ತರ ಇದ್ದೇನೆ, ಇನ್ನೈದು ಇಂಚು ಎತ್ತರ ಇದ್ದಿದ್ದರೆ ಎಷ್ಟು ಚೆಂದ ಎಂಬ ಭಾವನೆಯು ಮನಸ್ಸನ್ನು ಚಿವುಟುತ್ತಲೇ ಇತ್ತು. ಆದರೇನು ಮಾಡುವುದು, ಮೊಸೆಸ್ ಗಿಬ್ಸನ್ ಅಸಹಾಯಕರಾಗಿದ್ದರು. ಇದೇ ವೇಳೆ ಅವರು ಯಾರಿಗೆ ಪ್ರಪೋಸ್ ಮಾಡಿದರೂ, ಕುಳ್ಳನೆಂಬ ಕಾರಣಕ್ಕಾಗಿ ಪ್ರೇಮನಿವೇದನೆಯನ್ನು ಒಪ್ಪುತ್ತಿರಲಿಲ್ಲ. ಇದರಿಂದ ಬೇಸತ್ತ ಅವರು ಕೋಟ್ಯಂತರ ರೂ. ಖರ್ಚು ಮಾಡಿ ಸರ್ಜರಿ ಮಾಡಿಸಿಕೊಂಡಿದ್ದಾರೆ.
ಅನುಭವ ಹಂಚಿಕೊಂಡ ಗಿಬ್ಸನ್
ಹೌದು, ಎರಡು ಸರ್ಜರಿ ಮಾಡಿಸಿಕೊಂಡ ಬಳಿಕ ಗಿಬ್ಸನ್ ಅವರ ಎತ್ತರವೀಗ 5.10 ಇಂಚು ಆಗಿದೆ. ಅವರ ಮುಖದಲ್ಲಿ ನಗೆಯ ಅಲೆಯೊಂದು ಮೂಡಿದೆ. ವ್ಯಾಯಾಮ, ಧ್ಯಾನ, ಔಷಧಗಳನ್ನು ತೆಗೆದುಕೊಂಡರೂ ಎತ್ತರ ಕಾಣದ ದೇಹವೀಗ ಸರ್ಜರಿ ಮೂಲಕ 5.10 ಅಡಿ ಆಗಿದೆ. ಅವರು ಖುಷಿಯಿಂದ ಹೊರಗೆ ತಿರುಗಾಡುತ್ತಿದ್ದಾರೆ. ಗೆಳೆಯರೊಂದಿಗೆ ಯಾವುದೇ ಕೀಳರಿಮೆ ಇಲ್ಲದೆ ಮಾತನಾಡುತ್ತಿದ್ದಾರೆ. ಇನ್ನು ಇವರ ಹೈಟಿಗೆ ಮಾರುಹೋದ ಯುವತಿಯೊಬ್ಬಳು ಪ್ರೇಮ ನಿವೇದನೆಗೆ ಸಮ್ಮತಿ ಸೂಚಿಸಿದ್ದಾರೆ. ಸಿಂಗಲ್ ಲೈಫ್‌ನಿಂದ ಗಿಬ್ಸನ್ ಹೊರಬಂದಿದ್ದಾರೆ. ಸರ್ಜರಿಗಾಗಿ 1.35 ಕೋಟಿ ರೂಪಾಯಿ ಹೋದರೆ ಹೋಯಿತು, ಹೈಟ್ ನನ್ನದಾಯಿತಲ್ಲ ಎಂಬ ನೆಮ್ಮದಿಯಲ್ಲಿ ಕಾಲ ಕಳೆಯುತ್ತಿದ್ದಾರೆ.
ಇದನ್ನೂ ಓದಿ: Bunty Chor Arrested: ದೇಶದ ‘ಸೆಲೆಬ್ರಿಟಿ ಕಳ್ಳ’, ಬಿಗ್ ಬಾಸ್ ಸ್ಪರ್ಧಿ ಬಂಟಿ ಚೋರ್ ಕೊನೆಗೂ ಬಂಧನ
“ನಾನು ಶಾಲೆಯಲ್ಲಿ ಓದುತ್ತಿರುವಾಗಲೇ ನನ್ನ ಎತ್ತರದ ಬಗ್ಗೆ ದುಃಖವಾಗುತ್ತಿತ್ತು. ಗೆಳೆಯರ ಮೂದಲಿಕೆಯ ಮಾತುಗಳು ಮನಸ್ಸನ್ನು ಘಾಸಿಗೊಳಿಸುತ್ತಿದ್ದವು. ನನ್ನ ದೇಹವನ್ನೇ ನಾನು ದ್ವೇಷಿಸಲು ಶುರು ಮಾಡಿದೆ. ಕನ್ನಡಿಯಲ್ಲಿ ನನ್ನನ್ನು ನಾನು ನೋಡಿಕೊಂಡರೂ ಬೇಸರವಾಗುತ್ತಿತ್ತು. ಹಗಲಲ್ಲಿ ಎಂಜಿನಿಯರ್ ವೃತ್ತಿಯ ಜವಾಬ್ದಾರಿ ಪೂರೈಸಿ, ರಾತ್ರಿ ಕ್ಯಾಬ್ ಓಡಿಸಿ ಹಣ ಹೊಂದಿಸಿದ್ದೇನೆ. ಎಲ್ಲ ಹಣವನ್ನು ಸರ್ಜರಿಗಾಗಿಯೇ ಮೀಸಲಿಟ್ಟಿದ್ದೇನೆ. ನನ್ನ ಹೈಟ್ ಹೆಚ್ಚಾಗಿರುವುದು ಸಂತಸ ತಂದಿದೆ” ಎಂದು ಅವರು ಹೇಳಿದ್ದಾರೆ.