ನೆರೆರಾಷ್ಟ್ರ ಪಾಕಿಸ್ತಾನ ಸದ್ಯ ತೀವ್ರ ಆರ್ಥಿಕ ಸಂಕಷ್ಟಕ್ಕೀಡಾಗಿದೆ. ಆ ದೇಶದ ಸಾಲದ ಹೊರೆ ಹೆಚ್ಚುತ್ತಲೇ ಇದೆ. ಫ್ಯಾನ್, ಬಲ್ಬ್ಗಳ ಉತ್ಪಾದನೆಯನ್ನೂ ನಿಲ್ಲಿಸುವುದಾಗಿ ಪಾಕ್ ಸರ್ಕಾರ ಹೇಳಿದೆ. ಆದರೆ ಅಲ್ಲಿನ ಜನ ‘ಮಕ್ಕಳ ಉತ್ಪಾದನೆ’ಯನ್ನು ಮಾತ್ರ ನಿಲ್ಲಿಸುತ್ತಿಲ್ಲ. ಹೆಚ್ಚುವ ಜನಸಂಖ್ಯೆ ಕೂಡ ಆರ್ಥಿಕತೆಗೆ ಹೊರೆಯಾಗುತ್ತದೆ ಎಂಬ ಕನಿಷ್ಠ ಪರಿಜ್ಞಾನವೂ ಅವರಿಗೆ ಇಲ್ಲ. ಅವರಿಗೆ ಬಿಡಿ, ಸರ್ಕಾರದ ಉನ್ನತ ಹುದ್ದೆಯಲ್ಲಿರುವವರಿಗೂ ಇಲ್ಲ. ಹೀಗಾಗಿ ಜನಸಂಖ್ಯಾ ನಿಯಂತ್ರಣದ ಕ್ರಮಗಳೆಲ್ಲ ಪಾಕಿಸ್ತಾನದಲ್ಲಿ ದೂರದ ಮಾತು. ಒಬ್ಬೊಬ್ಬರು ಐದಾರು ಮದುವೆಯಾಗಿ, 10-20ಮಕ್ಕಳನ್ನು ಹೆತ್ತರೂ ಯಾರೂ ಪ್ರಶ್ನಿಸುವುದಿಲ್ಲ.
ಉದಾಹರಣೆಗೆ ಪಾಕಿಸ್ತಾನದ ಈ ವ್ಯಕ್ತಿಯನ್ನೇ ನೋಡಿ. ಇವನಿಗೆ 50ವರ್ಷ. ಮೂರು ಮದುವೆಯಾಗಿದ್ದಾನೆ. 60 ಮಕ್ಕಳಿಗೆ ಅಪ್ಪನಾಗಿದ್ದಾನೆ. ಆದರೂ ಸಮಾಧಾನ ಇಲ್ಲ. ಇವನು ಇನ್ನಷ್ಟು ಮಕ್ಕಳನ್ನು ಹೊಂದಬೇಕಂತೆ, ಹಾಗಾಗಿ ಇನ್ನೊಬ್ಬಳು ಹೆಂಡತಿ ಅರ್ಜೆಂಟ್ ಆಗಿ ಬೇಕಂತೆ !, ಅಂದಹಾಗೇ ಇವೇನೂ ಶಿಕ್ಷಣ ಇಲ್ಲದವನಲ್ಲ. ವೃತ್ತಿಯಲ್ಲಿ ಡಾಕ್ಟರ್ ಬೇರೆ..!
ಬಲೂಚಿಸ್ತಾನ್ದ ಕ್ವೆಟ್ಟಾ ನಿವಾಸಿಯಾಗಿರುವ ಸರ್ದಾರ್ ಜನ್ ಮೊಹಮ್ಮದ್ ಖಾನ್ ಖಿಲ್ಜಿ ಎಂಬ 50 ವರ್ಷದ ವೈದ್ಯ ಇತ್ತೀಚೆಗಷ್ಟೇ 60ನೇ ಮಗುವಿನ ತಂದೆಯಾಗಿದ್ದಾನೆ. ಈ ಗಂಡುಮಗುವಿಗೆ ಹಾಜಿ ಖುಶಲ್ ಖಾನ್ ಎಂದು ಹೆಸರಿಟ್ಟಿದ್ದಾನೆ. ಹೀಗೆ ಸಾಲುಸಾಲು ಮಕ್ಕಳನ್ನು ಪಡೆಯುವ ಮೂಲಕವೇ ಫೇಮಸ್ ಆದ ಖಿಲ್ಜಿ, ಈಗ ಮತ್ತೊಂದು ಮದುವೆಯಾಗಿ, ಇನ್ನಷ್ಟು ಮಕ್ಕಳನ್ನು ಪಡೆಯುವ ಅದರಲ್ಲೂ ಹೆಣ್ಣುಮಕ್ಕಳನ್ನು ಪಡೆಯುವ ಆಶಯ ವ್ಯಕ್ತಪಡಿಸಿದ್ದಾನೆ. ‘ನಾನು ನಾಲ್ಕನೇ ಮದುವೆಯಾಗಲು ಒಬ್ಬಳು ಯುವತಿಯನ್ನು ಹುಡುಕಿಕೊಡಿ’ ಎಂದು ಸ್ನೇಹಿತರಿಗೆ ಹೇಳಿದ್ದಾಗಿಯೂ ತಿಳಿಸಿದ್ದಾನೆ.
ವೈದ್ಯ ಖಿಲ್ಜಿ ತನ್ನೆಲ್ಲ ಹೆಂಡತಿ-ಮಕ್ಕಳನ್ನೂ ಒಂದೇ ಮನೆಯಲ್ಲಿ ಇಟ್ಟಿದ್ದಾನೆ. ಬೇರೆ ಮನೆ ಮಾಡುವ ಅವಕಾಶ ಇದ್ದರೂ ಸದ್ಯ ಆರ್ಥಿಕ ಸಮಸ್ಯೆ ಇರುವುದರಿಂದ ಎರಡು-ಮೂರು ಮನೆ ಬೇಡ ಎಂದು ಆತ ಹೇಳಿಕೊಂಡಿದ್ದಾನೆ. ‘ಪಾಕಿಸ್ತಾನದಲ್ಲಿ ವ್ಯಾಪಾರ-ವಹಿವಾಟು ಸ್ಥಗಿತಗೊಂಡಿದೆ. ವಿವಿಧ ಹಿಟ್ಟುಗಳು, ಸಕ್ಕರೆ, ತುಪ್ಪ ಮತ್ತಿತರ ದಿನಬಳಕೆ ವಸ್ತುಗಳ ಬೆಲೆ ಕಳೆದ ಮೂರು ವರ್ಷಗಳಲ್ಲಿ ದುಪ್ಪಟ್ಟು-ಮೂರು ಪಟ್ಟು ಹೆಚ್ಚಾಗಿದೆ. ನನ್ನನ್ನೂ ಸೇರಿಸಿ ಪಾಕಿಸ್ತಾನದ ಪ್ರತಿಯೊಬ್ಬ ವ್ಯಕ್ತಿಯೂ ಕಷ್ಟಪಡುತ್ತಿದ್ದಾನೆ’ ಎಂದೂ ಖಿಲ್ಜಿ ಹೇಳಿದ್ದಾನೆ. ಆದರೂ ಮಕ್ಕಳು ಸಾಕು ಎಂದು ಅನ್ನಿಸುತ್ತಿಲ್ಲ ಇವನಿಗೆ..!
‘ನನಗೆ ನನ್ನ ಕುಟುಂಬದ ಜತೆ ಪ್ರವಾಸ ಹೋಗುವ ಆಸೆ ಇದೆ. ಆದರೆ ಮೂರ್ನಾಲ್ಕು ವಾಹನಗಳು ಬೇಕಾಗುತ್ತವೆ. ಸರ್ಕಾರವೇ ಒಂದು ಬಸ್ ಕೊಟ್ಟರೆ ನಾವೆಲ್ಲರೂ ಸೇರಿ ಪ್ರವಾಸ ಹೋಗಬಹುದು ಎಂಬ ಮಹದಾಸೆಯನ್ನೂ ವ್ಯಕ್ತಪಡಿಸಿದ್ದಾನೆ.
ಇದನ್ನೂ ಓದಿ: Pakistan | ಸಾಲದ ಸುಳಿಯಲ್ಲಿ ಪಾಕಿಸ್ತಾನ, ಫ್ಯಾನ್- ಬಲ್ಬ್ ಉತ್ಪಾದನೆಯೂ ಸ್ಥಗಿತ!