Site icon Vistara News

Mass Shooting: ಗುಂಡಿನ ದಾಳಿ ನಡೆಸಿದ ಬಂಧೂಕುದಾರಿಯನ್ನೇ ನೆಲಕ್ಕೆ ಕೆಡವಿದರು; ವಿಡಿಯೊ ಇಲ್ಲಿದೆ

usa

usa

ವಾಷಿಂಗ್ಟನ್‌: ಅಮೆರಿಕದಲ್ಲಿ ಮತ್ತೊಂದು ಸಾಮೂಹಿಕ ಗುಂಡಿನ ದಾಳಿ (Mass Shooting)ಯ ಪ್ರಕರಣ ನಡೆದಿದ್ದು, ಓರ್ವ ಮಹಿಳೆ ಮೃತಪಟ್ಟು 21 ಮಂದಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಬುಧವಾರ (ಫೆಬ್ರವರಿ 14) ನಡೆದಿದೆ. ಮಿಸ್ಸೌರಿy ಕಾನ್ಸಾಸ್​ ಸಿಟಿಯಲ್ಲಿ (Kansas City) ಆಯೋಜಿಸಿದ್ದ ಸೂಪರ್​ ಬೌಲ್ ವಿಕ್ಟರಿ ರ‍್ಯಾಲಿ ಸಂದರ್ಭದಲ್ಲಿ ಈ ದುರಂತ ಸಂಭವಿಸಿದೆ. ಈ ಮಧ್ಯೆ ಕಾನ್ಸಾಸ್ ಸಿಟಿ ಚೀಫ್ಸ್ (Kansas City Chiefs) ಅಭಿಮಾನಿಗಳು ಗುಂಡು ಹಾರಿಸಿದ ಶಂಕಿತನನ್ನು ಎದುರಿಸುತ್ತಿರುವ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸದ್ಯ ವೈರಲ್‌ (Viral Video) ಆಗುತ್ತಿದೆ.

ʼʼಕಾನ್ಸಾಸ್​ ನಗರದ ಅಮೆರಿಕನ್‌ ಫುಟ್‌ಬಾಲ್‌ ಟೀಮ್‌ ‘ಕಾನ್ಸಾಸ್ ಸಿಟಿ ಚೀಫ್ಸ್’ ನಗರದಲ್ಲಿ ಸೂಪರ್ ಬೌಲ್ ವಿಜಯೋತ್ಸವವನ್ನು ಆಯೋಜಿಸಿತ್ತು. ಈ ವೇಳೆ ಇದ್ದಕ್ಕಿದ್ದಂತೆ ಬಂಧೂಕುಧಾರಿಗಳು ದಾಳಿ ನಡೆಸಿದ್ದರು. ಗಾಯಗೊಂಡಿರುವವರ ಪೈಕಿ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳಿದ್ದು ಅವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆಯ ನಂತರ ಮೂವರನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಆದರೆ ಗುಂಡಿನ ದಾಳಿಯ ಹಿಂದಿನ ಉದ್ದೇಶ ಸ್ಪಷ್ಟವಾಗಿಲ್ಲ, ಇನ್ನೂ ತನಿಖೆ ನಡೆಯುತ್ತಿದೆʼʼ ಎಂದು ಪೊಲೀಸರು ತಿಳಿಸಿದ್ದಾರೆ.

ವಿಡಿಯೊದಲ್ಲೇನಿದೆ?

ಗುಂಡಿನ ದಾಳಿಯಿಂದ ಆತಂಕದ ವಾತಾವರಣ ಸೃಷ್ಟಿಯಾಗಿತ್ತು. ನೆರೆದವರೆಲ್ಲ ಜಾಗ ಖಾಲಿ ಮಾಡಲು ಪ್ರಯತ್ನಿಸುತ್ತಿದ್ದರು. ಈ ಮಧ್ಯೆ ಓಡಿ ಹೋಗುತ್ತಿದ್ದ ಶಂಕಿತನ ಮೇಲೆ ದಾಳಿ ನಡೆಸಿದ ಕಾನ್ಸಾಸ್ ಸಿಟಿ ಚೀಫ್ಸ್ ಅಭಿಮಾನಿಯೊಬ್ಬ ಆತನನ್ನು ನೆಲಕ್ಕೆ ಕೆಡವಿದ. ಶಂಕಿತ ತಪ್ಪಿಸಿಕೊಳ್ಳಲು ಪ್ರಯತ್ನಿಸಿದಾಗ ಇನ್ನೊಬ್ಬ ಚೀಫ್ಸ್ ಅಭಿಮಾನಿ ಧಾವಿಸಿ ಅವನನ್ನು ಹಿಡಿದಿಡುವುಡು ವಿಡಿಯೊದಲ್ಲಿ ಕಂಡು ಬಂದಿದೆ. ಬಳಿಕ ಪೊಲೀಸರು ಸ್ಥಳಕ್ಕೆ ಆಗಮಿಸಿ ಶಂಕಿತನನ್ನು ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ʼʼಇಬ್ಬರು ಮಕ್ಕಳ ತಾಯಿ, ಡಿಜೆಯಾಗಿದ್ದ ಲಿಸಾ ಲೋಪೆಜ್ ಗಾಲ್ವಾನ್ ಗುಂಡಿನ ದಾಳಿಯಲ್ಲಿ ಮೃತಪಟ್ಟಿದ್ದಾರೆ. ಗಂಭೀರ ಗಾಯಗೊಂಡಿದ್ದ ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟರು. ಆಕೆಯ ಹೊಟ್ಟೆಗೆ ಗಾಯವಾಗಿತ್ತುʼʼ ಎಂದು ಪೊಲೀಸರು ತಿಳಿಸಿದ್ದಾರೆ. ʼʼಇದು ಭಯೋತ್ಪಾದನೆಗೆ ಸಂಬಂಧಿಸಿದ ಗುಂಡಿನ ದಾಳಿಯಲ್ಲʼʼ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ರ‍್ಯಾಲಿ ಹಿನ್ನೆಲೆಯಲ್ಲಿ ಸ್ಥಳದಲ್ಲಿ 800ಕ್ಕಿಂತಲೂ ಅಧಿಕ ಪೊಲೀಸರನ್ನು ನಿಯೋಜಿಸಲಾಗಿತ್ತು. ಹೀಗಿದ್ದರೂ ದಾಳಿ ನಡೆದಿದೆ ಎಂದು ಮೂಲಗಳು ತಿಳಿಸಿವೆ.

ಕಳವಳ ವ್ಯಕ್ತಪಡಿಸಿದ ಅಮೆರಿಕ ಅಧ್ಯಕ್ಷ

ಕಾನ್ಸಾಸ್ ನಗರದಲ್ಲಿ ಈ ಮಾರಣಾಂತಿಕ ಗುಂಡಿನ ದಾಳಿಯನ್ನು ಅಮೆರಿಕ ಅಧ್ಯಕ್ಷ ಜೋ ಬೈಡನ್ ಖಂಡಿಸಿದ್ದಾರೆ. “ಇಂದಿನ ಈ ಘಟನೆ ಆಘಾತವನ್ನುಂಟು ಮಾಡಿದೆ. ಇಂತಹ ಘಟನೆಗಳಿಗೆ ಕಡಿವಾಣ ಹಾಕಲೇ ಬೇಕಿದೆ. ಹೀಗಾಗಿ ಶಸ್ತ್ರಾಸ್ತ್ರಗಳನ್ನು ನಿಷೇಧಿಸುವ ಕರೆಗೆ ಬೆಂಬಲ ನೀಡಿʼʼ ಎಂದು ಕರೆ ನೀಡಿದ್ದಾರೆ.

ಇದನ್ನೂ ಓದಿ: Gun Violence: ಅಮೆರಿಕದಲ್ಲಿ ಅಪರಿಚಿತನಿಂದ ಭೀಕರ ಗುಂಡಿನ ದಾಳಿ, ಕನಿಷ್ಠ 16 ಸಾವು

ಹಿಂದೆಯೂ ನಡೆದಿತ್ತು

ಅಮೆರಿಕದ ಮೈನ್‌ ಪ್ರದೇಶದ ಲೆವಿಸ್ಟನ್‌ ಎಂಬಲ್ಲಿ ಕಳೆದ ಅಕ್ಟೋಬರ್‌ನಲ್ಲಿ ಅಪರಿಚಿತ ದುಷ್ಕರ್ಮಿಯೊಬ್ಬ ನಡೆಸಿದ ಸಾಮೂಹಿಕ ಗುಂಡಿನ ದಾಳಿಯಲ್ಲಿ ಕನಿಷ್ಠ 16 ಮಂದಿ ಮೃತಪಟ್ಟಿದ್ದರು. ಸುಮಾರು 60 ಜನರು ಗಾಯಗೊಂಡಿದ್ದರು. ಈ ವೇಳೆ ಬಾರ್‌ ಮತ್ತು ರೆಸ್ಟೋರೆಂಟ್‌ನ ಎರಡು ಕಡೆ ದಾಳಿ ನಡೆದಿತ್ತು. ಬಂದೂಕು ಸಂಸ್ಕೃತಿ ವ್ಯಾಪಕವಾಗಿರುವ ಅಮೆರಿಕದಲ್ಲಿ ಕಳೆದ ವರ್ಷ 500ಕ್ಕೂ ಹೆಚ್ಚು ಸಾಮೂಹಿಕ ಗುಂಡಿನ ದಾಳಿ ನಡೆದಿತ್ತು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version