Site icon Vistara News

ಅಮೆರಿಕದಲ್ಲಿ ಸ್ಮಶಾನ-ಚರ್ಚ್‌ನಲ್ಲಿ ಗುಂಡಿನ ದಾಳಿ; ಇಬ್ಬರು ಸಾವು, ಇಬ್ಬರಿಗೆ ಗಾಯ

US Shootout

ವಾಷಿಂಗ್ಟನ್‌: ಅಮೆರಿಕದಲ್ಲಿ ಏನಾಗ್ತಿದೆ? ಸಾಲುಸಾಲು ಗುಂಡಿನ ದಾಳಿಗಳು ನಡೆಯುತ್ತಿವೆ (America Shootout). ನಿನ್ನೆಯಷ್ಟೇ (ಜೂ.2) ಓಕ್ಲಹಾಮಾದ ಟುಲ್ಸಾ ಮೆಡಿಕಲ್‌ ಕಟ್ಟಡದಲ್ಲಿ ಗುಂಡಿನ ದಾಳಿಯಾಗಿ ಐವರು ಮೃತಪಟ್ಟಿದ್ದರು. ಅದರ ಬೆನ್ನಲ್ಲೇ ಇಂದು ಚರ್ಚ್‌ ಮತ್ತು ಸ್ಮಶಾನದಲ್ಲಿ ಶೂಟೌಟ್‌ ಆಗಿದೆ. ಚರ್ಚ್‌ನಲ್ಲಿ ಗುಂಡಿನ ದಾಳಿಗೆ ಒಳಗಾದವರು ಇಬ್ಬರೂ ಮೃತಪಟ್ಟಿದ್ದಾರೆ. ಸ್ಮಶಾನದಲ್ಲಿ ನಡೆದ ಶೌಟೌಟ್‌ನಲ್ಲಿ ಇಬ್ಬರು ಗಾಯಗೊಂಡಿದ್ದಾರೆ. ಯುಎಸ್‌ನ ಮಧ್ಯಪಶ್ಚಿಮ ಭಾಗದಲ್ಲಿರುವ ಅಯೋವಾದಲ್ಲಿನ ಕಾರ್ನರ್‌ ಸ್ಟೋನ್‌ ಚರ್ಚ್‌ನಲ್ಲಿ ವ್ಯಕ್ತಿಯೊಬ್ಬ ಇಬ್ಬರು ಮಹಿಳೆಯರಿಗೆ ಗುಂಡು ಹಾರಿಸಿ ಕೊಂದಿದ್ದಾನೆ. ಬಳಿಕ ಪಾರ್ಕಿಂಗ್‌ ಸ್ಥಳಕ್ಕೆ ಹೋಗಿ ತನಗೂ ತಾನು ಶೂಟ್‌ ಮಾಡಿಕೊಂಡು ಮೃತನಾಗಿದ್ದಾನೆ ಎಂದು ಪೊಲೀಸ್‌ ಅಧಿಕಾರಿ ನೀಕೋಲಾಸ್‌ ಲೆನ್ನಿ ತಿಳಿಸಿದ್ದಾಗಿ ಯುಎಸ್‌ ಮೀಡಿಯಾಗಳು ವರದಿ ಮಾಡಿವೆ.

ಸ್ಮಶಾನವೊಂದರಲ್ಲಿ ಶೂಟೌಟ್
ಇನ್ನೊಂದೆಡೆ ಮಿಲ್ವಾಕಿಯ ದಕ್ಷಿಣದಲ್ಲಿ ರೇಸಿನ್‌ ಎಂಬ ಪ್ರದೇಶದಲ್ಲಿರುವ ಸ್ಮಶಾನವೊಂದರಲ್ಲಿ ಕೂಡ ಶೂಟೌಟ್‌ ಆಗಿದೆ. ಈ ಘಟನೆಯಲ್ಲಿ ಇಬ್ಬರು ಗಾಯಗೊಂಡಿದ್ದಾರೆ. ಇಲ್ಲಿ ಮೃತದೇಹವೊಂದರ ಅಂತ್ಯಕ್ರಿಯೆ ನಡೆಯುತ್ತಿತ್ತು. ಒಂದೇ ಕುಟುಂಬದವರು ಐದಾರು ಮಂದಿ ಇದ್ದರು. ಅದಾಗಲೇ ಒಂದು ಜೀವವನ್ನು ಕಳೆದುಕೊಂಡು ನೋವಿನಲ್ಲಿ ಇದ್ದ ಇವರಿಗೆ ಗುಂಡಿನ ದಾಳಿ ಇನ್ನಷ್ಟು ಆಘಾತ ನೀಡಿದೆ. ಇಲ್ಲಿ ಫೈರಿಂಗ್‌ ನಡೆಸಿದ್ದು ಯಾರು ಎಂಬುದು ಗೊತ್ತಿಲ್ಲ. ಆದರೆ ಗಾಯಗೊಂಡವರಲ್ಲಿ ಒಬ್ಬಾತ ಅಪ್ರಾಪ್ತನಾಗಿದ್ದು, ಆತನಿಗೆ ಚಿಕಿತ್ಸೆ ನೀಡಿ ಡಿಸ್‌ಚಾರ್ಜ್‌ ಮಾಡಲಾಗಿದೆ. ಮತ್ತೊಬ್ಬಾತನ ಸ್ಥಿತಿ ಗಂಭೀರವಾಗಿದೆ. ಈ ಸ್ಮಶಾನದ ಪಕ್ಕದಲ್ಲೇ ಅಸೆನ್ಷನ್‌ ಆಲ್ ಸೇಂಟ್ಸ್ ಆಸ್ಪತ್ರೆಯೂ ಇದೆ ಎಂದು ರೇಸಿನ್ ಪೊಲೀಸ್ ತಿಳಿಸಿದ್ದಾರೆ.

ಯುಎಸ್‌ನ ಟೆಕ್ಸಾಸ್‌ನಲ್ಲಿ ಕೆಲವು ದಿನಗಳ ಹಿಂದೆ ಶಾಲೆಯೊಂದರಲ್ಲಿ ಶೂಟೌಟ್‌ ಆಗಿ, 19 ವಿದ್ಯಾರ್ಥಿಗಳು, ಮೂವರು ಶಿಕ್ಷಕರ ಪ್ರಾಣ ಹೋಗಿತ್ತು. ಆ ಘಟನೆ ನೆನಪು ಮಾಸುವ ಮುನ್ನವೇ ಆಸ್ಪತ್ರೆಯಲ್ಲಿ ಗುಂಡಿನ ದಾಳಿಯಾಗಿ ಸರ್ಜನ್‌ ಒಬ್ಬರನ್ನು ಸೇರಿ ಒಟ್ಟು ಐವರ ಹತ್ಯೆಯಾಗಿತ್ತು. ಒಂದರ ಬೆನ್ನಿಗೆ ಒಂದರಂತೆ ಶೂಟೌಟ್‌ಗಳು ನಡೆಯುತ್ತಿರುವ ಬೆನ್ನಲ್ಲೇ ಸ್ಥಳೀಯರಲ್ಲಿ ಆತಂಕ ಮನೆ ಮಾಡಿದೆ.

ಇದನ್ನೂ ಓದಿ: ಟೆಕ್ಸಾಸ್‌ ಶೂಟೌಟ್‌; ಮಕ್ಕಳು ಬೇಡಿ ಕೊಳ್ಳುತ್ತಿದ್ದರೂ 45 ನಿಮಿಷ ಹೊರಗೇ ನಿಂತಿದ್ದರು ಪೊಲೀಸ್‌

Exit mobile version