ವಿಯೆಟ್ನಾಂ: ಉತ್ತಮ ಆರೋಗ್ಯಕ್ಕೆ ಸರಿಯಾದ, ಪೋಷಕಾಂಶಯುಕ್ತ ಆಹಾರ ಮುಖ್ಯ ಎನ್ನುತ್ತದೆ ವೈದ್ಯ ಲೋಕ. ಅದಕ್ಕಾಗಿ ದ್ರವ ರೂಪದ ಆಹಾರದ ಜತೆಗೆ ಘನ ಆಹಾರವನ್ನೂ ಸೇವಿಸಬೇಕು ಎಂದು ಸಲಹೆ ನೀಡಲಾಗುತ್ತದೆ. ಆದರೆ ವೈದ್ಯಲೋಕವನ್ನೇ ಅಚ್ಚರಿಗೆ ದೂಡಿ ಇಲ್ಲೊಬ್ಬರು ಸುಮಾರು 50 ವರ್ಷಗಳಿಂದ ಕೇವಲ ನೀರು ಮತ್ತು ತಂಪು ಪಾನೀಯ (Cold drinks) ಕುಡಿದೇ ಬದುಕುತ್ತಿದ್ದಾರೆ. ಅದೂ ಅವರು ಈ 75ರ ಇಳಿವಯಸ್ಸಿನಲ್ಲೂ ಆರೋಗ್ಯವಂತರಾಗಿದ್ದಾರೆ ಎನ್ನುವುದು ವಿಶೇಷ (Medical Miracle). ಯಾರು ಈ ವೃದ್ಧೆ? ಏನಿವರ ಹಿನ್ನೆಲೆ ಎನ್ನುವುದರ ವಿವರ ಇಲ್ಲಿದೆ.
ವಿಯಟ್ನಾಂನ ಬುಯಿ ಲೋಯಿ ಎಂಬ 75ರ ಹರೆಯದ ಅಜ್ಜಿಯೇ ವೈದ್ಯ ಲೋಕಕ್ಕೆ ಸವಾಲಾಗಿರುವವರು. ಅವರಿಗೆ ಯಾವುದೇ ಘನ ಆಹಾರ ತಿನ್ನಬೇಕೆಂದು ಅನಿಸುವುದೇ ಇಲ್ಲವಂತೆ. ಬರೀ ನೀರು, ಸಕ್ಕರೆಯಂಶವಿರುವ ತಂಪು ಪಾನೀಯವಷ್ಟೇ ಅವರ ಆಹಾರ.
ಕಾರಣವೇನು?
ಬುಯಿ ಲೋಯಿ ಅವರ ಈ ವಿಚಿತ್ರ ವರ್ತನೆಯ ಹಿಂದೆ ಬಲವಾದ ಕಾರಣವಿದೆ. ಆಗ ಬುಯಿ ಲೋಯಿ ಅವರಿಗೆ ಸುಮಾರು 25 ವರ್ಷವಾಗಿತ್ತು. 50 ವರ್ಷಗಳ ಹಿಂದೆ ಅವರು ಹಾಗೂ ಮತ್ತೊಬ್ಬ ಮಹಿಳೆ ಗಾಯವಾದ ಸೈನಿಕರಿಗೆ ಚಿಕಿತ್ಸೆ ನೀಡಲು ಬೆಟ್ಟ ಹತ್ತುತ್ತಿದ್ದರು. ಆಗ ಸಿಡಿಲು ಬಡಿದು ಬುಯಿ ಲೋಯಿ ಪ್ರಜ್ಞೆ ತಪ್ಪಿತ್ತು. ಕೆಲವು ಸಮಯದ ಬಳಿಕ ಎಚ್ಚರವಾದ ಮೇಲೆ ಗೆಳತಿ ಜ್ಯೂಸ್ ಕುಡಿಸಿದ್ದರು. ಆ ಬಳಿಕ ಬುಯಿ ಲೋಯಿ ಅವರ ಜೀವನ ಶೈಲಿಯೇ ಬದಲಾಯಿತು. ನಂತರ ಅವರಿಗೆ ಯಾವುದೇ ಘನ ಆಹಾರ ತಿನ್ನಲು ಅಷ್ಟು ಇಷ್ಟವಾಗುತ್ತಿರಲಿಲ್ಲವಂತೆ. ಸ್ವಲ್ಪ ಸಮಯ ಹಣ್ಣು, ಮತ್ತಿತರ ಆಹಾರ ಸೇವಿಸಿದರು. ಆದರೆ 1970ರಿಂದ ಹಣ್ಣು ಹಾಗೂ ಇತರ ಘನ ಆಹಾರ ಸೇವಿಸುವುದನ್ನು ಸಹ ಸಂಪೂರ್ಣ ನಿಲ್ಲಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಇದೀಗ ಅವರ ಮನೆಯ ಫ್ರಿಡ್ಜ್ ತುಂಬಾ ಬರೀ ನೀರು ಹಾಗೂ ಜ್ಯೂಸ್‌ಗಳಿವೆ. ಅದರಲ್ಲೂ ತಂಪು ಪಾನೀಯಗಳನ್ನು ಹೆಚ್ಚಾಗಿ ಸೇವಿಸುತ್ತಾರೆ. ಈ ಡಯಟ್‌ನಿಂದಾಗಿ ಹೆರಿಗೆಯಾದಾಗ ಮಕ್ಕಳಿಗೆ ಹಾಲುಣಿಸಲು ಕೂಡ ಅವರಿಗೆ ಸಾಧ್ಯವಾಗಲಿಲ್ಲ ಎಂದು ಅವರ ಆಪ್ತರು ಹೇಳಿದ್ದಾರೆ. ಸದ್ಯ ಈ ಬಗ್ಗೆ ವೈದ್ಯರು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಕೇವಲ ದ್ರವ ಆಹಾರದಿಂದಲೇ ಆರೋಗ್ಯವಾಗಿರುವುದು ಹೇಗೆ ಎನ್ನುವುದು ಬಹು ದೊಡ್ಡ ಪ್ರಶ್ನೆಯಾಗಿ ಕಾಡುತ್ತಿದೆ.
ಇದನ್ನೂ ಓದಿ: Viral video : ಶಾಲೆಗೆ ಹೊರಟಿದ್ದ ಟೀಚರ್ ಸಿನಿಮಾ ಸ್ಟೈಲ್‌ನಲ್ಲಿ ಕಿಡ್ನಾಪ್
ಕೇವಲ ಬೆಲ್ಲ, ಹಾಲು, ನೀರು ಸೇವಿಸುವ ಬಾಲಕಿ
ಇದೇ ಮಾದರಿಯ ಘಟನೆಯೊಂದು ಇತ್ತೀಚೆಗೆ ನಮ್ಮ ರಾಜ್ಯದಲ್ಲೂ ವರದಿಯಾಗಿತ್ತು. ಯಾದಗಿರಿ ಜಿಲ್ಲೆಯ ಸುರಪುರ ಪಟ್ಟಣದ ರಂಗಂಪೇಟೆಯ ರೇಣುಕಮ್ಮ ಎಂಬ ಬಾಲಕಿ 14 ವರ್ಷಗಳಿಂದ ಕೇವಲ ಬೆಲ್ಲ, ಹಾಲು ಹಾಗೂ ನೀರು ಸೇವಿಸುತ್ತಿದ್ದಾಳೆ. ಮನೆಯಲ್ಲಿ ಅವಳ ತಂದೆ-ತಾಯಿ, ಸಹೋದರರು ಹಾಗೂ ಸಹಪಾಠಿಗಳು ಎಷ್ಟೇ ಒತ್ತಾಯ ಮಾಡಿದರೂ ಊಟ ಮಾತ್ರ ಮಾಡೋದಿಲ್ಲ. ಊಟ ಮಾಡಿದರೆ ವಾಂತಿ ಆಗುತ್ತದೆಯಂತೆ. ಹೀಗಾಗಿ ಈ 14 ವರ್ಷದ ಬಾಲಕಿ ರೇಣುಕಮ್ಮ ಹುಟ್ಟಿದಾಗಿನಿಂದಲೂ ಕೇವಲ ಬೆಲ್ಲ, ಹಾಲು ಮಾತ್ರ ಸೇವಿಸುತ್ತಾ ಬಂದಿದ್ದಾಳೆ. ವೈದ್ಯರು ತಪಾಸಣೆ ಮಾಡಿದ್ದರೂ ಪರಿಹಾರ ಹುಡುಕುವುದು ಸಾಧ್ಯವಾಗಿಲ್ಲ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಮೆಂಟ್ ಮೂಲಕ ತಿಳಿಸಿ