ನ್ಯೂಯಾರ್ಕ್: ಅಮೆರಿಕದ ನ್ಯೂಜೆರ್ಸಿಯಲ್ಲಿ ನಡೆದ ವಾರ್ಷಿಕ ಸ್ಪರ್ಧೆಯಲ್ಲಿ ಮಿಚಿಗನ್‌ನ ವೈದ್ಯಕೀಯ ವಿದ್ಯಾರ್ಥಿನಿ ರಿಜುಲ್ ಮೈನಿ (Rijul Maini) ಮಿಸ್ ಇಂಡಿಯಾ ಯುಎಸ್ಎ 2023 (Miss India USA 2023) ಕಿರೀಟ ಗೆದ್ದುಕೊಂಡಿದ್ದಾರೆ. 24 ವರ್ಷದ ಭಾರತೀಯ ಮೂಲದ ಅಮೆರಿಕ ನಿವಾಸಿ ರಿಜುಲ್ ಮೈನಿ ವೈದ್ಯಕೀಯ ವಿದ್ಯಾರ್ಥಿನಿ ಮತ್ತು ರೂಪದರ್ಶಿ. ಅದೇ ರೀತಿ ಮಿಸೆಸ್ ಇಂಡಿಯಾ ಯುಎಸ್ಎ (Mrs India USA) ಆಗಿ ಮ್ಯಾಸಚೂಸೆಟ್ಸ್‌ನ ಸ್ನೇಹಾ ನಂಬಿಯಾರ್ ಮತ್ತು ಮಿಸ್ ಟೀನ್ ಇಂಡಿಯಾ ಯುಎಸ್ಎ (Miss Teen India USA) ಆಗಿ ಪೆನ್ಸಿಲ್ವೇನಿಯಾದ ಸಲೋನಿ ರಾಮ್ ಮೋಹನ್ ಆಯ್ಕೆಯಾಗಿದ್ದಾರೆ.
“ನಾನು ಮಿಸ್ ಇಂಡಿಯಾ ಯುಎಸ್ಎ 2023 ಆಗಿ ಆಯೆಯಾಗಿದ್ದೇನೆ ಎಂದು ಹೇಳಲು ಹೆಮ್ಮೆ ಪಡುತ್ತೇನೆ. ಪೋಷಕರು ಮತ್ತು ಕುಟುಂಬದ ಬೆಂಬಲವಿಲ್ಲದೆ ಇದು ಸಾಧ್ಯವಾಗುತ್ತಿರಲಿಲ್ಲ. ಬೆಂಬಲಿಸಿದ ಎಲ್ಲರಿಗೂ ಧನ್ಯವಾದಗಳುʼʼ ಎಂದು ರಿಜುಲ್ ಮೈನಿ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ಜತೆಗೆ ಸ್ಪರ್ಧೆಗಾಗಿ ತನ್ನ ಉಡುಗೆ ತಯಾರಿಸಲು ಸಹಾಯ ಮಾಡಿದ್ದ ತಾಯಿಗೆ ವಿಶೇಷ ಕೃತಜ್ಞತೆ ಸಮರ್ಪಿಸಿದ್ದಾರೆ. “ವೇದಿಕೆಯ ಮೇಲೆ ನಡೆಯಲು ನನಗೆ ಅತ್ಯಂತ ಸುಂದರವಾದ ಉಡುಗೆಗಳನ್ನು ಸಿದ್ಧಪಡಿಸಿದ ನನ್ನ ಪ್ರೀತಿಯ ಅಮ್ಮನಿಗೆ ಧನ್ಯವಾದಗಳು. ನಿನ್ನನ್ನು ತುಂಬಾ ಪ್ರೀತಿಸುತ್ತೇನೆʼʼ ಭಾವುಕರಾಗಿ ಪೋಸ್ಟ್ ಮಾಡಿದ್ದಾರೆ.
ಇತರ ವಿಜೇತರು
ವರ್ಜೀನಿಯಾದ ಗ್ರೀಷ್ಮಾ ಭಟ್ ಮೊದಲ ರನ್ನರ್ ಅಪ್ ಮತ್ತು ಉತ್ತರ ಕೆರೊಲಿನಾದ ಇಶಿತಾ ಪೈ ರಾಯ್ಕರ್ ಎರಡನೇ ರನ್ನರ್ ಅಪ್ ಆಗಿ ಹೊರ ಹೊಮ್ಮಿದ್ದಾರೆ. ಮಿಸ್ ಇಂಡಿಯಾ ಯುಎಸ್ಎ, ಮಿಸೆಸ್ ಇಂಡಿಯಾ ಯುಎಸ್ಎ ಮತ್ತು ಮಿಸ್ ಟೀನ್ ಇಂಡಿಯಾ ಯುಎಸ್ಎ ಎಂಬ ಮೂರು ವಿಭಿನ್ನ ವಿಭಾಗಗಳಲ್ಲಿ ಸ್ಪರ್ಧೆ ಏರ್ಪಡಿಸಲಾಗಿತ್ತು. 25ಕ್ಕೂ ಹೆಚ್ಚು ರಾಜ್ಯಗಳ ಸುಮಾರು 57 ಸ್ಪರ್ಧಿಗಳು ಭಾಗವಹಿಸಿದ್ದರು.
ರೋಲ್ ಮಾಡೆಲ್ ಆಗುವ ಗುರಿ
ಮಿಸ್ ಇಂಡಿಯಾ ಯುಎಸ್ಎ 2023 ಕಿರೀಟ ತೊಟ್ಟ ಮಾಡೆಲ್ ರಿಜುಲ್ ಮೈನಿ ಶಸ್ತ್ರಚಿಕಿತ್ಸಕರಾಗುವ ಗುರಿ ಹೊಂದಿದ್ದಾರೆ. ಅಲ್ಲದೆ ಮಹಿಳೆಯರಿಗೆ ರೋಲ್ ಮಾಡೆಲ್ ಆಗಿ ಎಲ್ಲ ವರ್ಗದವರ ಸೇವೆ ಸಲ್ಲಿಸುವುದಾಗಿ ತಿಳಿಸಿದ್ದಾರೆ. ಈಗಾಗಲೇ ಮಾಡೆಲ್ ಆಗಿ ಗುರುತಿಸಿಕೊಂಡಿರುವ ರಿಜುಲ್ ಮೈನಿ ಮುಂದೆ ಸಾಕಷ್ಟು ಅವಕಾಶ ಸಿಗುವ ಭರವಸೆ ವ್ಯಕ್ತಪಡಿಸಿದ್ದಾರೆ.
ಇದು 41ನೇ ವರ್ಷದ ಸ್ಪರ್ಧೆಯಾಗಿತ್ತು. ಭಾರತದ ಹೊರಗೆ ದೀರ್ಘಕಾಲದಿಂದ ನಡೆಯುವ ಭಾರತೀಯ ಸೌಂದರ್ಯ ಸ್ಪರ್ಧೆ ಇದಾಗಿದೆ. ಇದನ್ನು ನ್ಯೂಯಾರ್ಕ್ ಮೂಲದ ಭಾರತೀಯ-ಅಮೆರಿಕನ್ ಧರ್ಮಾತ್ಮ ಮತ್ತು ನೀಲಂ ಸರನ್ ಅವರು ವರ್ಲ್ಡ್ ವೈಡ್ ಪೇಜೆಂಟ್ಸ್ (Worldwide Pageants) ಬ್ಯಾನರ್ ಅಡಿಯಲ್ಲಿ ಪ್ರಾರಂಭಿಸಿದ್ದರು.
ವಿಜೇತರು ಅದೇ ಗುಂಪು ಆಯೋಜಿಸುವ ಮಿಸ್-ಮಿಸೆಸ್-ಟೀನ್ ಇಂಡಿಯಾ ವರ್ಲ್ಡ್ ವೈಡ್ (Miss- Mrs-Teen India Worldwide) ಸ್ಪರ್ಧೆಯಲ್ಲಿ ಭಾಗವಹಿಸಲು ಅರ್ಹತೆ ಪಡೆಯುತ್ತಾರೆ. ಸ್ಪರ್ಧೆಗಳ ಸ್ಥಾಪಕ ಮತ್ತು ಅಧ್ಯಕ್ಷ ಧರ್ಮಾತ್ಮ ಸರನ್ ಮಾತನಾಡಿ, “ವಿಶ್ವಾದ್ಯಂತ ಇರುವ ಭಾರತೀಯ ಸಮುದಾಯವು ವರ್ಷಗಳಿಂದ ನೀಡಿದ ಬೆಂಬಲಕ್ಕಾಗಿ ನಾನು ತುಂಬಾ ಕೃತಜ್ಞನಾಗಿದ್ದೇನೆ” ಎಂದು ಹೇಳಿದ್ದಾರೆ.
ಇದನ್ನೂ ಓದಿ: Miss Universe 2023: ನಿಕಾರಗುವಾದ ಶೆಯ್‌ನ್ನಿಸ್ ಪಲಾಸಿಯೋಸ್‌ಗೆ ಭುವನ ಸುಂದರಿ ಕಿರೀಟ!