Site icon Vistara News

Missing Titanic Sub: ಟೈಟಾನಿಕ್‌ ಮುಳುಗಿದ ಸ್ಥಳದಲ್ಲೇ ಇನ್ನೊಂದು ಟೈಟಾನ್‌ ಕಣ್ಮರೆ! ಆ 5 ಜನ ಬದುಕಿದ್ದಾರಾ ಅನ್ನೋದೇ ಈಗ ಪ್ರಶ್ನೆ!

Missing Titanic Sub

ಟೈಟಾನಿಕ್‌ (Titanic) ಹಡಗು ಮುಳುಗಿದ ಜಾಗದಲ್ಲಿ ಅದೇ ಹೆಸರಿನ ಸಬ್‌ಮರ್ಸಿಬಲ್‌ ಒಂದು (Missing Titanic Sub) ಮುಳುಗಿದೆ. ಸಮುದ್ರದಲ್ಲಿ 4,000 ಮೀಟರ್‌ ಅಡಿಯಲ್ಲಿ ಕಣ್ಮರೆಯಾಗಿರುವ ಈ ಮುಳುಗುಯಂತ್ರ ಏನಾಯಿತು? ಒಳಗಿರುವ 5 ಮಂದಿ ಇನ್ನೂ ಬದುಕಿದ್ದಾರಾ? ಸತ್ತಿದ್ದಾರಾ?

ಗೊತ್ತಿಲ್ಲ. ಶೋಧವಂತೂ ನಡೆಯುತ್ತಿದೆ. ಇಷ್ಟಕ್ಕೂ ಈ ಸಬ್‌ಮರ್ಸಿಬಲ್‌ ಯಂತ್ರ ಅಲ್ಲಿ ಹೋದದ್ದಾದರೂ ಯಾಕೆ? ಯಾರು ಅದರೊಳಗೆ ಇದ್ದವರು? ಟೈಟಾನಿಕ್‌ ಮುಳುಗಿದ ಜಾಗದಲ್ಲಿ ಅವರಿಗೇನು ಕೆಲಸ? ಎಲ್ಲವನ್ನೂ ವಿವರವಾಗಿ ನೋಡೋಣ.

ಜೂನ್‌ 18ರಂದು ಟೈಟಾನಿಕ್‌ ಹಡಗು ಮುಳುಗಿದ ಉತ್ತರ ಅಟ್ಲಾಂಟಿಕ್‌ ಧ್ರುವದ ಸಮೀಪದ ಅಪಾರ ಆಳದ ಸಮುದ್ರ ತಾಣದಲ್ಲಿ ಓಶಿಯನ್‌ ಅರ್ತ್‌ (Ocean Earth) ಎಂಬ ಕಂಪನಿಗೆ ಸೇರಿದ ನೌಕೆ ಹೋಗಿ ನಿಂತಿತು. ಅದರಿಂದ ʼಟೈಟಾನ್ʼ ಎಂದು ಹೆಸರಿಡಲಾಗಿರುವ ಸಬ್‌ಮರ್ಸಿಬಲ್‌ ಕೆಳಗಿಳಿಯಿತು. ಇದೇ ಜಾಗದಲ್ಲಿ ನೂರು ವರ್ಷಗಳ ಹಿಂದೆ ಟೈಟಾನಿಕ್‌ ಹೆಸರಿನ ಬೃಹತ್‌ ನೌಕೆ ಮುಳುಗಿಹೋಗಿತ್ತು. ಅಲ್ಲಿ ಕೆಳಗಿಳಿದು, ಹಳೆಯ ಟೈಟಾನಿಕ್‌ನ ಅವಶೇಷಗಳನ್ನು ನೋಡುವುದು ಇದರ ಉದ್ದೇಶ. ಇದೊಂದು ಬಗೆಯ ʼಟೈಟಾನಿಕ್‌ ಟೂರಿಂಗ್‌ʼ. ಟೈಟಾನಿಕ್‌ ಅವಶೇಷ ತೋರಿಸಿ ಥ್ರಿಲ್‌ ಆಗಿಸುವ ಪ್ರವಾಸೋದ್ಯಮ ಇದು.

ಎರಡೇ ಗಂಟೆಯ ಕಾರ್ಯಾಚರಣೆಯಿದು. ಈ ಸಬ್‌ಮರ್ಸಿಬಲ್‌ನಲ್ಲಿ ಐದು ಜನರಿದ್ದರು. ಇದ್ದವರು ಸಾಮಾನ್ಯರಲ್ಲ. ಸ್ವತಃ ಓಶಿಯನ್‌ ಅರ್ತ್‌ ಕಂಪನಿಯ ಸಿಇಒ ಸ್ಟಾಕ್ಟನ್‌ ರಷ್‌ ಒಳಗೆ ಕುಳಿತಿದ್ದ. ಜತೆಗೆ ಬ್ರಿಟಿಷ್‌ ಬಿಲಿಯನೇರ್‌ ಹಮೀಶ್‌ ಹಾರ್ಡಿಂಗ್‌, ಪಾಕಿಸ್ತಾನಿ ಉದ್ಯಮಿ ಶಹಜಾದಾ ದಾವೂದ್‌, ಆತನ ಮಗ ಸುಲೇಮಾನ್‌, ಫ್ರೆಂಚ್‌ ಸಬ್‌ಮರೀನ್‌ ಆಪರೇಟರ್‌ ಪೌಲ್‌ ಹೆನ್ರಿ ಓರ್ಗಿಯೋಲೆಟ್ ಇದ್ದರು.

ಟೈಟಾನ್‌ ಸುಮಾರು 4,000 ಮೀಟರ್‌ ಅಥವಾ ನಾಲ್ಕು ಕಿಲೋಮೀಟರ್‌ ಆಳಕ್ಕೆ ಇಳಿಯಿತು. 1.45 ಗಂಟೆಗಳ ಕಾಲ ಮೇಲಿನ ನೌಕೆಯ ಜತೆಗೆ ಇದರ ಸಂವಹನ ಇತ್ತು. ಇನ್ನೇನು ಮೇಲಕ್ಕೆ ಮರಳಬೇಕು ಅನ್ನುವಷ್ಟರಲ್ಲಿ ಸಂಪರ್ಕ ಕತ್ತರಿಸಿಹೋಯಿತು. ಅಲ್ಲಿಂದೀಚೆಗೆ ನಾಲ್ಕು ದಿನವಾಗಿದೆ. ಟೈಟಾನಿಕ್‌ ಸಂಪರ್ಕದಲ್ಲಿಲ್ಲ.

ಗಾಬರಿಗೊಳಿಸುವ ಸಂಗತಿ ಎಂದರೆ ಅದರಲ್ಲಿರುವ ಆಕ್ಸಿಜನ್‌ ಪ್ರಮಾಣ ಕಡಿಮೆಯಾಗಿದೆ. ಗುರುವಾರ ಮುಂಜಾನೆಯ ಹೊತ್ತಿಗೆ ಅದರಲ್ಲಿ 10 ಗಂಟೆಗೂ ಕಡಿಮೆ ಬಳಸಬಹುದಾದಷ್ಟು ಆಮ್ಲಜನಕ ಇದ್ದಿರಬಹುದು. ಇನ್ನಷ್ಟು ಹೊತ್ತು ಹೋದರೆ ಅದರೊಳಗೆ ಇರುವವರು ಉಸಿರುಗಟ್ಟಿ ಸತ್ತುಹೋಗುತ್ತಾರೆ- ಇನ್ನೂ ಬದುಕಿದ್ದರೆ!

ಕಷ್ಟದ ಸಂಗತಿ ಎಂದರೆ ಟೈಟಾನಿಕ್‌ ಎಲ್ಲಿದೆ ಎಂಬುದು ತಿಳಿಯುತ್ತಿಲ್ಲ. 4,000 ಮೀಟರ್‌ ಆಳಕ್ಕೆ ಇಳಿದು ಹುಡುಕಲು ಇನ್ನೊಂದು ಅಂಥದೇ ಸಬ್‌ಮರ್ಸಿಬಲ್‌ ಆಗಬೇಕು ಹೊರತು ಎಷ್ಟೇ ಪಳಗಿದ ಮುಳುಗುತಜ್ಞರಾದರೂ ಅಷ್ಟೊಂದು ಆಳಕ್ಕೆ ಹೋಗಲಾರರು. ಯಾಕೆಂದರೆ ಅಲ್ಲಿನ ನೀರಿನ ಒತ್ತಡ ಹಾಗೂ ಶೀತಲತೆ ಅಷ್ಟಿದೆ. ಹೀಗಾಗಿ ಸದ್ಯ ರೋಬೋಗಳನ್ನು ಇಳಿಸಿ ಪರಿಶೀಲಿಸಲಾಗುತ್ತಿದೆ.

ಟೈಟಾನಿಕ್‌ನ ವಿದ್ಯುತ್‌ ಉತ್ಪಾದನೆ ವ್ಯವಸ್ಥೆ ಕೈಕೊಟ್ಟಿದ್ದರೆ, ಈಗಾಗಲೇ ಅದರಲ್ಲಿರುವವರು ಸತ್ತಿರುತ್ತಾರೆ. ಯಾಕೆಂದರೆ ಆಕ್ಸಿಜನ್‌ ಉತ್ಪಾದಿಸಲು ಸಾಧ್ಯವಿಲ್ಲ. ಕ್ಷಣಕ್ಷಣಕ್ಕೂ ಆಕ್ಸಿಜನ್‌ ಕಡಿಮೆಯಾಗುತ್ತಾ ಕಾರ್ಬನ್‌ ಡಯಾಕ್ಸೈಡ್‌ ಹೆಚ್ಚುತ್ತಿರುತ್ತದೆ. ಸಬ್‌ಮರ್ಸಿಬಲ್‌ ಒಳಗೆ ಶಾಖವನ್ನು ಕಾಪಾಡುವ ವ್ಯವಸ್ಥೆಯೂ ಕೈಕೊಡುತ್ತದೆ. ಅಷ್ಟೊಂದು ಶೀತಪ್ರದೇಶದಲ್ಲಿ ಇರುವವರಿಗೆ ಹೈಪೋಥರ್ಮಿಯಾ ಆಗುವ ಸಾಧ್ಯತೆಯೂ ಹೆಚ್ಚಿದೆ.

ಸದ್ಯ ಸುಮಾರು 10,000 ಚದರ ಮೈಲು ವ್ಯಾಪ್ತಿಯಲ್ಲಿ ನೌಕೆಗಳು, ಏರ್‌ಕ್ರಾಫ್ಟ್‌ಗಳು ಈ ಸಬ್‌ಮರ್ಸಿಬಲ್‌ಗಾಗಿ ಹುಡುಕಾಡುತ್ತಿವೆ. ಇದು ಮಸಾಚುಸೆಟ್ಸ್‌ ರಾಜ್ಯದ ಗಾತ್ರ. ಬಣವೆಯಲ್ಲಿ ಸೂಜಿ ಹುಡುಕಿದಷ್ಟೇ ಕಷ್ಟವಿದು.

ಕಾಣೆಯಾದ ಸಬ್‌ಮರ್ಸಿಬಲ್‌ನ ಗಾತ್ರ 22 ಅಡಿ ಅಗಲ, ತೂಕ 10,432 ಕಿಲೋ. ಕಾರ್ಬನ್‌ ಫೈಬರ್‌ ಯಂತ್ರವಾದ ಇದರೊಳಗೆ ಓಡಾಡಲು ಹೆಚ್ಚೇನೂ ಜಾಗವಿಲ್ಲ. ಐದು ಮಂದಿ ಚಕ್ಕಳ ಮಕ್ಕಳ ಹಾಕಿ ಕುಳಿತುಕೊಳ್ಳಬೇಕಾದಷ್ಟೇ ಜಾಗವಿರುವ ಇದರಿಂದ ಹೊರಗೆ ನೋಡಲು ಸಣ್ಣದೊಂದು ಕಿಂಡಿಯಿದೆಯಷ್ಟೇ. ಆ ಭಾರೀ ಸಮುದ್ರದಾಳದ ಕೆಸರಿನಲ್ಲಿ ಅದು ಹೂತುಹೋಗಿದ್ದರೆ ಎಂದೆಂದಿಗೂ ಹೊರಜಗತ್ತಿಗೆ ಅದು ತಿಳಿಯಲಾರದು!

ಇದನ್ನೂ ಓದಿ: Titanic Film | 3ಡಿಯಲ್ಲಿ ಮರು ಬಿಡುಗಡೆಯಾಗಲಿದೆ ಸೂಪರ್ ಸಿನಿಮಾ ಟೈಟಾನಿಕ್!

Exit mobile version