ಪಾಕಿಸ್ತಾನ: ಕ್ರಿಶ್ಚಿಯನ್ (Christian) ವ್ಯಕ್ತಿಯೊಬ್ಬರು ಕುರಾನ್ (Quran) ಅನ್ನು ಅಪವಿತ್ರಗೊಳಿಸಿದ್ದಾರೆ ಎಂದು ಆರೋಪಿಸಿ ಪಾಕಿಸ್ತಾನದ (Pakistan) ಸರಗೋಧದಲ್ಲಿ (Sargodha) ಅವರ ಶೂ ತಯಾರಿಸುವ ಕಾರ್ಖಾನೆಯನ್ನು ನೂರಾರು ಜನರು ಸುಟ್ಟು ಹಾಕಿರುವ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇಸ್ಲಾಂ (Islam) ಧರ್ಮವು ಪಾಕಿಸ್ತಾನದ ಅಧಿಕೃತ ಧರ್ಮವಾಗಿದ್ದರೂ ಇಲ್ಲಿ ಇತರ ಅಲ್ಪಸಂಖ್ಯಾತರೂ ಇದ್ದಾರೆ. ಪಾಕಿಸ್ತಾನದ ಪೂರ್ವ ಪಂಜಾಬ್ (eastern Punjab) ಪ್ರಾಂತ್ಯದಲ್ಲಿ ನೂರಾರು ಜನರು ಧರ್ಮನಿಂದೆಯ ಆರೋಪದ ಮೇಲೆ ಕ್ರಿಶ್ಚಿಯನ್ ಸಮುದಾಯದ ಮೇಲೆ ದಾಳಿ ನಡೆಸಿದರು.
ಸರಗೋಧ ನಗರದ ಮುಜಾಹಿದ್ ಕಾಲೋನಿ ಪ್ರದೇಶದಲ್ಲಿ ಈ ದಾಳಿ ನಡೆದಿದೆ.
ಕ್ರಿಶ್ಚಿಯನ್ ವ್ಯಕ್ತಿಯೊಬ್ಬ ಇಸ್ಲಾಂ ಧರ್ಮದ ಪವಿತ್ರ ಗ್ರಂಥವಾದ ಕುರಾನ್ ಅನ್ನು ಅಪವಿತ್ರಗೊಳಿಸಿದ್ದಾನೆ ಎಂದು ಕೆಲವರು ಆರೋಪಿಸಿದ್ದಾರೆ. ಈ ಗಲಾಟೆಯಲ್ಲಿ ಕ್ರಿಶ್ಚಿಯನ್ ವ್ಯಕ್ತಿಯ ಸಣ್ಣ ಶೂ ತಯಾರಿಸುವ ಕಾರ್ಖಾನೆ ಸುಟ್ಟು ಭಸ್ಮವಾಗಿದೆ.
ಗಲಭೆಕೋರರು ಪೊಲೀಸರ ಮೇಲೆ ಕಲ್ಲು ಮತ್ತು ಇಟ್ಟಿಗೆಗಳನ್ನು ಎಸೆದಿದ್ದಾರೆ. ಹಿಂಸಾಚಾರದ ವೇಳೆ ಕನಿಷ್ಠ ಐವರನ್ನು ಅಧಿಕಾರಿಗಳು ರಕ್ಷಿಸಿ, ಆಸ್ಪತ್ರೆಗೆ ಕರೆದೊಯ್ದಿದ್ದಾರೆ ಎಂದು ಸರಗೋಧ ಪೊಲೀಸ್ ಮುಖ್ಯಸ್ಥ ಸಾರಿಕ್ ಖಾನ್ ತಿಳಿಸಿದ್ದಾರೆ.
ಸದ್ಯ ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಜಿಲ್ಲಾ ಪೊಲೀಸ್ ಮುಖ್ಯಸ್ಥ ಇಜಾಜ್ ಮಾಲ್ಹಿ ತಿಳಿಸಿದ್ದು, ಧರ್ಮನಿಂದೆಯ ಆರೋಪಗಳ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದರು.
ಅಧಿಕಾರಿಗಳು ಗುಂಪನ್ನು ಚದುರಿಸಿದರು ಮತ್ತು ಉದ್ವಿಗ್ನತೆಯನ್ನು ಶಮನಗೊಳಿಸಲು ಧಾರ್ಮಿಕ ವಿದ್ವಾಂಸರಿಂದ ಸಹಾಯ ಪಡೆಯುತ್ತಿದ್ದಾರೆ ಎಂದು ಅವರು ಹೇಳಿದರು.
ಪಾಕಿಸ್ತಾನದಲ್ಲಿ ಹಿಂಸಾಚಾರ
ಇಸ್ಲಾಂ ಪಾಕಿಸ್ತಾನದ ಅಧಿಕೃತ ಧರ್ಮವಾಗಿದೆ ಮತ್ತು ದಕ್ಷಿಣ ಏಷ್ಯಾದ ದೇಶದ ನಿವಾಸಿಗಳಲ್ಲಿ ಶೇ. 96ಕ್ಕಿಂತ ಹೆಚ್ಚು ಜನರು ಇದನ್ನು ಪ್ರತಿಪಾದಿಸುತ್ತಾರೆ. ಕ್ರಿಶ್ಚಿಯನ್ನರು ಪಾಕಿಸ್ತಾನದ ಎರಡನೇ ಅತಿ ದೊಡ್ಡ ಅಲ್ಪಸಂಖ್ಯಾತ ಗುಂಪಾಗಿದ್ದು, ಜನಸಂಖ್ಯೆಯ ಸುಮಾರು ಶೇ. 1.3 ರಷ್ಟಿದ್ದಾರೆ.
ಪಾಕಿಸ್ತಾನದ ಧರ್ಮನಿಂದೆಯ ಕಾನೂನಿನ ಅಡಿಯಲ್ಲಿ, ಇಸ್ಲಾಂ ಧರ್ಮವನ್ನು ಅವಮಾನಿಸಿದ ಯಾರಿಗಾದರೂ ಮರಣದಂಡನೆಯನ್ನು ನೀಡಬಹುದು. ಆದರೆ ಈವರೆಗೆ ಧರ್ಮನಿಂದನೆಗಾಗಿ ಯಾರನ್ನೂ ಗಲ್ಲಿಗೇರಿಸಲಾಗಿಲ್ಲ, ಆರೋಪಗಳು ಗಲಭೆಗಳು ಮತ್ತು ಗುಂಪು ಹಿಂಸಾಚಾರಕ್ಕೆ ಕಾರಣವಾಗಿವೆ.
ಇದನ್ನೂ ಓದಿ: ಹನಿ ಟ್ರ್ಯಾಪ್ ಮಾಡಿ ಕೋಲ್ಕತಾಗೆ ಕರೆಸಿಕೊಂಡು ಬಾಂಗ್ಲಾದೇಶ ಸಂಸದನ ಕೊಲೆ; ಚರ್ಮ ಸುಲಿದು, ದೇಹ ಪೀಸ್ ಪೀಸ್
ಕಳೆದ ವರ್ಷದ ಆಗಸ್ಟ್‌ನಲ್ಲಿ ಪಂಜಾಬ್ ಪ್ರಾಂತ್ಯದ ಜರನ್‌ವಾಲಾ ಪ್ರದೇಶದಲ್ಲಿ ಕ್ರೈಸ್ತರು ಕುರಾನ್‌ನ ಪುಟಗಳನ್ನು ಹರಿದು ಹಾಕುತ್ತಿದ್ದಾರೆ ಎಂದು ವದಂತಿ ಹಬ್ಬಿಸಿ ಮುಸ್ಲಿಂ ನಿವಾಸಿಗಳು ಚರ್ಚ್‌ಗಳ ಮೇಲೆ ದಾಳಿ ನಡೆಸಿದ್ದರು.
2009ರಲ್ಲಿ ಮಧ್ಯ ಪಂಜಾಬ್‌ನ ಗೊಜ್ರಾ ಜಿಲ್ಲೆಯಲ್ಲಿ ಆರು ಕ್ರಿಶ್ಚಿಯನ್ನರು ಕೊಲ್ಲಲ್ಪಟ್ಟರು ಮತ್ತು ಹಲವಾರು ಮನೆಗಳನ್ನು ಸುಟ್ಟುಹಾಕಲಾಯಿತು.