Site icon Vistara News

Monkey Pox: ಏನಿದು ಡೇಂಜರಸ್ ಮಂಕಿ ಪಾಕ್ಸ್? ಇದು ಹೇಗೆ ಹರಡುತ್ತದೆ? ಪಾರಾಗೋದು ಹೇಗೆ?

Monkey Pox

ಮಧ್ಯ ಆಫ್ರಿಕಾದ (Central Africa) ಕಾಂಗೋ ಪ್ರಜಾಸತ್ತಾತ್ಮಕ ಗಣರಾಜ್ಯ ( Democratic Republic of the Congo) ಮತ್ತು ನೆರೆಹೊರೆಯ ದೇಶಗಳಲ್ಲಿ ಮಂಕಿ ಪಾಕ್ಸ್ (Monkey Pox) ವೈರಸ್‌ನ ಹೊಸ ರೂಪಾಂತರ ಆತಂಕ ಮೂಡಿಸಿದೆ. ಸುಮಾರು ನಾಲ್ಕು ವಾರಗಳವರೆಗೆ ಕಾಡುವ ಈ ಸೋಂಕು ಕೀವು ತುಂಬಿದ ಚರ್ಮದ ದದ್ದುಗಳಿಗೆ ಕಾರಣವಾಗುತ್ತದೆ, ಇದು ತುಂಬಾ ನೋವಿನಿಂದ ಕೂಡಿರುತ್ತದೆ. ಸೋಂಕಿತರ ಮಧ್ಯೆಯೇ ಇದ್ದರೂ ಸೋಂಕಿನ ಅಪಾಯವನ್ನು ಕಡಿಮೆ ಮಾಡಲು ಹಲವು ದಾರಿಗಳಿವೆ. ಇದಕ್ಕಾಗಿ ಮಂಕಿ ಪಾಕ್ಸ್ ಎಂದರೇನು, ಇದು ಹೇಗೆ ಬರುತ್ತದೆ, ಇದರ ಲಕ್ಷಣಗಳು ಏನು ಎನ್ನುವ ಕುರಿತು ತಿಳಿದುಕೊಳ್ಳಬೇಕು.

ಮಂಕಿ ಪಾಕ್ಸ್ ಎಂದರೇನು?

ಮಂಕಿ ಪಾಕ್ಸ್ ಎಂಬುದು ವೈರಸ್‌ನಿಂದ ಹರಡುವ ಸಾಂಕ್ರಾಮಿಕ ಕಾಯಿಲೆಯಾಗಿದೆ. ಇದು ಮೊದಲ ಬಾರಿಗೆ 1958ರಲ್ಲಿ ಡೆನ್ಮಾರ್ಕ್‌ನಲ್ಲಿ ಪತ್ತೆಯಾಯಿತು. ಇದು ಸಿಡುಬು ರೋಗವನ್ನು ಹೋಲುತ್ತದೆ.

“ಮಂಕಿಪಾಕ್ಸ್ ವೈರಸ್” ಎಂದು ಕರೆಯಲಾಗಿದ್ದರೂ ಈ ವೈರಸ್‌ನ ಮೂಲವು ಇನ್ನೂ ತಿಳಿದಿಲ್ಲ. ಅಳಿಲು, ಸಸ್ತನಿಗಳಲ್ಲಿ ಈ ವೈರಸ್ ಕಂಡು ಬರುತ್ತದೆ ಎನ್ನುತ್ತಾರೆ ಸಂಶೋಧಕರು.

ಈ ವೈರಸ್ ಮಧ್ಯ ಮತ್ತು ಪಶ್ಚಿಮ ಆಫ್ರಿಕಾದಲ್ಲಿ ಹೆಚ್ಚಾಗಿ ಕಂಡು ಬಂದಿದೆ. ಕಳೆದ ಎರಡು ವರ್ಷಗಳ ಅವಧಿಯಲ್ಲಿ ವಿಶ್ವ ಆರೋಗ್ಯ ಸಂಸ್ಥೆ (WHO) ಎರಡು ಬಾರಿ ಮಂಕಿ ಪಾಕ್ಸ್ ಹರಡುವಿಕೆಯ ಬಗ್ಗೆ ಎಚ್ಚರಿಕೆಯನ್ನು ನೀಡಿತ್ತು. 2022ರಲ್ಲಿ 70 ಕ್ಕೂ ಹೆಚ್ಚು ದೇಶಗಳಿಗೆ ಮಂಕಿ ಪಾಕ್ಸ್ ಹರಡಿತ್ತು. ಈ ವರ್ಷದ ಮಂಕಿ ಪಾಕ್ಸ್ ನ ಹೊಸ ರೂಪಾಂತರವು ಕಾಂಗೋ ಮತ್ತು ನೆರೆಯ ದೇಶಗಳಲ್ಲಿ ಹೆಚ್ಚಾಗಿ ಕಾಣಿಸಿಕೊಂಡಿದ್ದು, ಸಾವಿನ ಉಲ್ಬಣಕ್ಕೆ ಕಾರಣವಾಗಿದೆ.

Monkey Pox


ಎಂಪಾಕ್ಸ್‌‌ಗೆ ಚಿಕಿತ್ಸೆ

ಇದಕ್ಕೆ ನಿರ್ದಿಷ್ಟವಾಗಿ ಯಾವುದೇ ಚಿಕಿತ್ಸೆಗಳಿಲ್ಲ. ಬಲವಾದ ಪ್ರತಿರಕ್ಷಣಾ ವ್ಯವಸ್ಥೆಯನ್ನು ಹೊಂದಿದ್ದರೆ ಮತ್ತು ಚರ್ಮ ರೋಗವನ್ನು ಹೊಂದಿಲ್ಲದಿದ್ದರೆ ನೋವು ನಿವಾರಣೆ ಸೇರಿದಂತೆ ಸೂಕ್ತವಾದ ವೃತ್ತಿಪರ ಆರೈಕೆಯಿಂದ ಚೇತರಿಸಿಕೊಳ್ಳಬಹುದು. 2022ರಲ್ಲಿ ಎಂಪಾಕ್ಸ್ ಚಿಕಿತ್ಸೆಗಾಗಿ tecovirimat ಎಂದು ಕರೆಯಲ್ಪಡುವ ಒಂದು ಆಂಟಿವೈರಲ್ ಔಷಧವನ್ನು ಅನುಮತಿಸಲಾಗಿದೆ.

ಪಾಕ್ಸ್ ಹೇಗೆ ಹರಡುತ್ತದೆ?

ಕಣ್ಣು, ಬಾಯಿ, ಚರ್ಮ, ಮೂಗಿನಿಂದ ಸ್ರವಿಸುವ ದ್ರವ ಮತ್ತು ಉಸಿರಾಟದ ಮೂಲಕ ಈ ವೈರಸ್ ಒಬ್ಬರಿಂದ ಇನ್ನೊಬ್ಬರಿಗೆ ಹರಡುತ್ತದೆ. ಎಂಪಾಕ್ಸ್ ಇರುವ ಜನರ ನಿಕಟ ಸಂಪರ್ಕಕ್ಕೆ ಬಂದಾಗ ಸೋಂಕು ಹರಡುವ ಸಾಧ್ಯತೆ ಹೆಚ್ಚಾಗಿರುತ್ತದೆ. ರೋಗಲಕ್ಷಣಗಳನ್ನು ತೋರಿಸುವ ಮೊದಲೇ ಇದು ಒಬ್ಬರಿಂದ ಇನ್ನೊಬ್ಬರಿಗೆ ಹರಡುತ್ತದೆ.

ಎಂಪಾಕ್ಸ್ ನ ಲಕ್ಷಣಗಳು ಯಾವುವು?

ಸಾಮಾನ್ಯವಾಗಿ ಈ ವೈರಲ್ ಸೋಂಕು ಗುದದ್ವಾರ, ಜನನಾಂಗ, ಎದೆ, ಮುಖ ಅಥವಾ ಬಾಯಿಯ ಮೇಲೆ ದದ್ದುಗಳಿಂದ ಪ್ರಾರಂಭವಾಗುತ್ತದೆ. ಅನಂತರ ದೇಹದ ಇತರ ಭಾಗಗಳಿಗೆ ವಿಸ್ತರಿಸಬಹುದು. ದದ್ದುಗಳು ನೋವಿನಿಂದ ಕೂಡಿರುತ್ತವೆ. ತುರಿಕೆಯು ಹೆಚ್ಚಾಗಿರುತ್ತದೆ. ಈ ದದ್ದುಗಳು ಮೊಡವೆ ಅಥವಾ ಗುಳ್ಳೆಗಳನ್ನು ಹೋಲುತ್ತವೆ. ಜ್ವರ, ತಲೆನೋವು, ಊದಿಕೊಂಡ ದುಗ್ಧರಸ ಗ್ರಂಥಿಗಳು, ಸ್ನಾಯು ನೋವು ಅಥವಾ ಶೀತ ಇತರ ರೋಗಲಕ್ಷಣಗಳಾಗಿವೆ.

ವೈರಸ್‌ಗೆ ಒಡ್ಡಿಕೊಂಡ 21 ದಿನಗಳಲ್ಲಿ ರೋಗಲಕ್ಷಣಗಳು ಸಾಮಾನ್ಯವಾಗಿ ಪ್ರಾರಂಭವಾಗುತ್ತವೆ. ಗಾಯಗಳು ಸೋಂಕಿಗೆ ಒಳಗಾದಾಗ ಅಪಾಯಕಾರಿಯಾಗಬಹುದು. ಅತಿಸಾರ, ವಾಂತಿ, ನ್ಯುಮೋನಿಯಾ, ಮೆದುಳಿನ ಉರಿಯೂತ, ನಿರ್ಜಲೀಕರಣ, ಉಸಿರಾಟದ ತೊಂದರೆಗಳೂ ಕೆಲವರಲ್ಲಿ ಕಾಣಿಸಿಕೊಳ್ಳಬಹುದು.


ಯಾರಿಗೆ ಹೆಚ್ಚು ಅಪಾಯ?

ರೋಗನಿರೋಧಕ ಶಕ್ತಿ ಹೊಂದಿಲ್ಲದವರು ಈ ಸೋಂಕಿನಿಂದ ಹೆಚ್ಚು ಅಪಾಯವನ್ನು ಎದುರಿಸಬೇಕಾಗುತ್ತದೆ. ಲೈಂಗಿಕ ಕಾರ್ಯಕರ್ತರು, ಆರೋಗ್ಯ ಕಾರ್ಯಕರ್ತರಿಗೆ ಸೋಂಕಿನ ಅಪಾಯ ಹೆಚ್ಚಾಗಿರುತ್ತದೆ. ಗರ್ಭಿಣಿಯರು, ವರ್ಷದೊಳಗಿನ ಮಕ್ಕಳು, ಎಸ್ಜಿಮಾದಂತಹ ಕಾಯಿಲೆ ಹೊಂದಿರುವವರಿಗೆ ಇದರ ಅಪಾಯ ಅಧಿಕವಾಗಿರುತ್ತದೆ.

ಇದನ್ನೂ ಓದಿ: MonkeyPox: ತೀವ್ರಗೊಳ್ಳುತ್ತಿದೆ ಮಂಕಿ ಪಾಕ್ಸ್; ಮತ್ತೊಮ್ಮೆ ಲಾಕ್‌ಡೌನ್ ಘೋಷಣೆ?

ಮಂಕಿ ಪಾಕ್ಸ್ ಬರುವುದನ್ನು ತಡೆಯುವುದು ಹೇಗೆ?

ಸೋಂಕಿತರು ಎರಡರಿಂದ ನಾಲ್ಕು ವಾರಗಳಲ್ಲಿ ಚೇತರಿಸಿಕೊಳ್ಳುತ್ತಾರೆ. ಸೋಂಕಿತರಿಂದ ದೂರವಿರುವುದು, ಹೆಚ್ಚಿನ ಮುನ್ನೆಚ್ಚರಿಕೆ ವಹಿಸಿ ಅವರ ಕಾಳಜಿ ಮಾಡುವುದರಿಂದ ಸೋಂಕು ಹರಡುವ ಅಪಾಯವನ್ನು ಕಡಿಮೆ ಮಾಡಬಹುದು. ಸೋಂಕಿತರು ಮನೆಯಲ್ಲಿ ಇದ್ದರೆ ಆದಷ್ಟು ಸ್ವಚ್ಛತೆ ಪಾಲಿಸಿ.

ಸೋಂಕು ಹರಡುವುದನ್ನು ತಡೆಯಲು ಲಸಿಕೆಯನ್ನು ಸಹ ಪಡೆಯಬಹುದು. ಅಮೆರಿಕದಲ್ಲಿ ಸೋಂಕು ಅಥವಾ ತೊಡಕುಗಳ ಹೆಚ್ಚಿನ ಅಪಾಯವನ್ನು ತಡೆಗಟ್ಟಲು ಸಿಡುಬಿನ ಲಸಿಕೆಯನ್ನು ನೀಡಲಾಗಿತ್ತು.

Exit mobile version