Site icon Vistara News

ನಾಯಿಗಳ ʼಸೌಂದರ್ಯ ಸ್ಪರ್ಧೆʼಯಲ್ಲಿ ಗೆದ್ದ ಮಿ. ಹ್ಯಾಪಿ ಫೇಸ್‌ ಹೇಗಿದೆ ನೋಡಿ!

ವಿಶ್ವದ ಅತ್ಯಂತ ಕುರೂಪಿ ನಾಯಿ

ವಿಶ್ವಸುಂದರಿ, ಭುವನ ಸುಂದರಿಗಳ ಕುರಿತೆಲ್ಲ ಕೇಳಿದ್ದೇವೆ, ನೋಡಿದ್ದೇವೆ. ಶ್ವಾನಗಳ ಸೌಂದರ್ಯ ಸ್ಪರ್ಧೆಯೂ ಗೊತ್ತು. ಆದರೆ ಇಲ್ಲೊಂದು ವಿಚಿತ್ರ ಸ್ಪರ್ಧೆ ಪ್ರತಿವರ್ಷ ನಡೆಯುತ್ತಿದೆ. ಅದು ಶ್ವಾನಗಳ ಕುರೂಪಿ ಸ್ಪರ್ಧೆ. ಈ ಸ್ಪರ್ಧೆಯಲ್ಲಿ ಅರಿಝೋನಾದ ಚಿಹ್ವವ್ವಾ ಮಿಶ್ರತಳಿಯ ನಾಯಿಯೊಂದು ಈ ಬಾರಿಯ ವಿಶ್ವದ ಅತ್ಯಂತ ಕುರೂಪಿ ನಾಯಿ ಆಗಿ ಹೊರಹೊಮ್ಮಿದೆ!

೧೭ ವರ್ಷದ ಚಿಹ್ವವ್ವಾ ತಳಿಯ ನಾಯಿಯೊಂದಕ್ಕೆ ಇದೀಗ ʻವರ್ಲ್ಡ್ಸ್ ಅಗ್ಲಿಯೆಸ್ಟ್‌ ಡಾಗ್‌ʼ ಪಟ್ಟ ದೊರಕಿದೆ. ಕ್ಯಾಲಿಫೋರ್ನಿಯಾದ ಸೋನೋಮಾ ಮಾರಿನ್‌ ಉತ್ಸವದಲ್ಲಿ ಈ ನಾಯಿ ವಿಜಯಿಯಾಗಿದೆ. ವಿಚಿತ್ರವೆಂದರೆ ಇಂಥ ಹೆಸರಿನ ಸ್ಪರ್ಧೆಯೊಂದು ನಡೆಯುತ್ತಿರುವುದು ಇಂದು ನಿನ್ನೆಯ ಕಥೆಯಲ್ಲ, ಕಳೆದ ೫೦ ವರ್ಷಗಳಿಂದ ನಡೆಯುತ್ತಾ ಬಂದಿದೆ.

ಈ ಸ್ಪರ್ಧೆಯ ವಿಜೇತ ನಾಯಿ ಮಿ. ಹ್ಯಾಪಿ ಫೇಸ್‌, ಟ್ಯೂಮರ್‌ ಹಾಗೂ ನರ ಸಂಬಂಧಿ ತೊಂದರೆಗಳಿಂದ ಬಳಲುತ್ತಿದೆ. ನಿಲ್ಲಲು ಹಾಗೂ ನಡೆಯಲು ಕಷ್ಟ ಪಡುತ್ತದೆ. ನಿತ್ಯ ಡೈಪರ್‌ನಲ್ಲೇ ಇರಬೇಕಾದ ದೈಹಿಕ ತೊಂದರೆಗಳನ್ನು ಹೊಂದಿದೆ.

ಈ ನಾಯಿ ಒಂದು ಕಾಲದಲ್ಲಿ ಅತ್ಯಂತ ನಿರ್ಲಕ್ಷ್ಯಕ್ಕೆ ಹಾಗೂ ಹಲ್ಲೆಗೂ ಒಳಗಾಗಿತ್ತು. ಈಗ ಈ ಎಲ್ಲ ಕಷ್ಟಗಳನ್ನು ಮೀರಿ ನಿಂತು ತನ್ನ ತೊಂದರೆಗಳಿಗೆ ಸಾಕಷ್ಟು ಕಾಳಜಿ, ಆರೈಕೆ ಪಡೆಯುತ್ತಿದೆ ಎನ್ನಲಾಗಿದೆ. ಮಿ. ಹ್ಯಾಪಿ ಫೇಸ್‌ ಸ್ಪರ್ಧೆಯ ತೀರ್ಪುಗಾರರನ್ನು ಒಂದೇ ನೋಟದಲ್ಲಿ ಸೆಳೆದಿದ್ದು ವಿಶೇಷ.

ಈ ಸ್ಪರ್ಧೆಯಲ್ಲಿ ಇದಕ್ಕೆ ಕಠಿಣ ಸ್ಪರ್ಧೆ ಒಡ್ಡಿದ್ದ, ಕೂದಲೇ ಇಲ್ಲದ ನಾಯಿ, ಹೈನಾ ರೂಪದ ನಾಯಿ ಹಾಗೂ ಗೊರಿಲ್ಲಾದಂತೆ ತಲೆಯನ್ನು ಹೊಂದಿದ್ದ ಇತರ ಮೂರು ನಾಯಿಗಳನ್ನು ಹಿಂದಿಕ್ಕಿದೆ. ಹ್ಯಾಪಿ ಫೇಸ್‌ನ ಒಡತಿ ಜೆನೆಡಾ ಬೆನೆಲ್ಲಿ ಹೇಳುವ ಪ್ರಕಾರ, ಈ ನಾಯಿಯನ್ನು ಆಕೆ ೨೦೨೧ರಲ್ಲಿ ಅರಿಝೋನಾದ ಶೆಲ್ಟರ್‌ ಒಂದರಿಂದ ದತ್ತು ಪಡೆಯಲಾಗಿದೆ.

ದತ್ತು ಸ್ವೀಕರಿಸಲು ಹೋದಾಗ, ಈ ನಾಯಿಗೆ ಸಾಕಷ್ಟು ವಯಸ್ಸಾಗಿದ್ದು, ಅದಕ್ಕೆ ಪ್ರೀತಿ ಹಾಗೂ ಆರೈಕೆಯ ಅಗತ್ಯ ಕಂಡಿತ್ತು. ಆದರೆ ಶೆಲ್ಟರ್‌ ಮುಖ್ಯಸ್ಥರು ಇದಕ್ಕಿರುವ ತೊಂದರೆಗಳನ್ನು ವಿವರಿಸಿ, ನೋಡಲು ಅತ್ಯಂತ ಕುರೂಪಿಯಾಗಿರುವ ಬಗ್ಗೆಯೂ ಹೇಳಿದರು.

ಆದರೂ ತನಗೆ ಮಾನವೀಯ ನೆಲೆಯಿಂದ ಇದನ್ನೇ ದತ್ತು ಪಡೆಬೇಕೆಂದು ಅನಿಸಿ, ಇದಕ್ಕೊಂದು ಎರಡನೇ ಬದುಕು ನೀಡಬೇಕೆಂದು ನಿರ್ಧರಿಸಿದೆ. ಅದಕ್ಕಾಗಿ, ನನ್ನ ಗಟ್ಟಿ ನಿಲುವನ್ನು ಹೇಳಿ ಇದೇ ನಾಯಿಯನ್ನೇ ದತ್ತು ಪಡೆದೆ ಎಂದಿದ್ದಾಳೆ ಜೆನೆಡಾ.

ನಿಜ ಹೇಳಬೇಕೆಂದರೆ, ಪಶುವೈದ್ಯರೂ ಕೂಡ “”ಮಿ. ಹ್ಯಾಪಿ ಫೇಸ್‌ ಕೆಲವೇ ದಿನಗಳಷ್ಟೆ ಬದುಕಿರಬಹುದು. ಹೆಚ್ಚೆಂದರೆ ಕೆಲವು ವಾರಗಳ ಕಾಲ ಬದುಕಿದ್ದೀತು. ಅದಕ್ಕಿರುವ ಟ್ಯೂಮರ್‌ ಹಾಗೂ ಇತರ ಆರೋಗ್ಯದ ಸಮಸ್ಯೆಗಳಿಂದ ಬದುಕುವುದು ಕಷ್ಟ ಸಾಧ್ಯʼʼ ಎಂದು ಹೇಳಿದ್ದನ್ನು ಅವರು ನೆನಪಿಸಿಕೊಂಡಿದ್ದಾರೆ.

ಆದರೆ ಪ್ರೀತಿ, ಕಾಳಜಿ, ಆರೈಕೆ ಹ್ಯಾಪಿ ಫೇಸ್‌ನನ್ನು ಇಲ್ಲಿಯವರೆಗೆ ಬದುಕುವಷ್ಟು ಧೈರ್ಯ ತುಂಬಿದೆ. ವೈದ್ಯರ ಊಹೆಗೂ ಮೀರಿ ಆರೋಗ್ಯದಲ್ಲಿ ಚೇತರಿಕೆ ಕಂಡಿದೆ. ದಿನವಿಡೀ ನಿದ್ದೆ ಮಾಡುತ್ತಾ ಖುಷಿಯಾದಾಗ, ಮಲಗಿದಾಗ ಚಿತ್ರ ವಿಚಿತ್ರ ಶಬ್ದಗಳನ್ನು ಮಾಡುತ್ತಾ ಇರುವುದಷ್ಟೆ ಇದಕ್ಕೆ ಕೆಲಸ ಎಂದಿದ್ದಾರವರು.

ನಾಯಿಗಳಿಗೆ ಬೇಕಾಗುವುದು ಮನುಷ್ಯನ ಕಾಳಜಿ, ಪ್ರೀತಿ, ಸ್ನೇಹ ತುಂಬಿದ ಆರೈಕೆ ಅಷ್ಟೇ. ಇವಿಷ್ಟಿದ್ದರೆ, ಅವಕ್ಕೆ ಬದುಕಲು ಪೂರ್ತಿ ಧೈರ್ಯ ತುಂಬಿದಂತೆ. ಮಿ. ಹ್ಯಾಪಿ ಫೇಸ್‌ ತನ್ನೆಲ್ಲ ತೊಂದರೆಗಳನ್ನು ಮೆಟ್ಟಿ ನಿಂತು, ಬದುಕುವ ಮಂದಿಗೆ ಭರವಸೆಯಾಗಿ ಕಾಣಿಸಿದೆ.

ಸ್ಪರ್ಧೆಯಲ್ಲಿ ವಿಜಯಿಯಾದ ಹ್ಯಾಪಿ ಫೇಸ್‌ ಪರವಾಗಿ ಅದರ ಒಡತಿಗೆ ೧,೫೦೦ ಡಾಲರ್‌‌ (೧,೧೮, ೨೩೬ ರೂ.) ನಗದು ಬಹುಮಾನ ಹಾಗೂ ನ್ಯೂಯಾರ್ಕ್‌ ನಗರಕ್ಕೆ ಪ್ರವಾಸವನ್ನು ಬಹುಮಾನವಾಗಿ ನೀಡಲಾಗಿದೆ. ಇತ್ತೀಚೆಗೆ ಭಾರೀ ಸದ್ದು ಮಾಡುತ್ತಿರುವ ಕನ್ನಡ ಚಿತ್ರ “ಚಾರ್ಲಿʼಯ ಕಥೆಯಂತೆ ಈ ಸ್ಪರ್ಧೆಯ ಮೂಲಕ ಹ್ಯಾಪಿ ಫೇಸ್‌ ಕೂಡಾ ಸದ್ದು ಮಾಡುತ್ತಿರುವುದು ವಿಶೇಷ.

ಇದನ್ನೂ ಓದಿ: Motivational story: ಸ್ಕೂಟರ್‌ನಡಿಗೆ ಸಿಲುಕಿದ ಪುಟಾಣಿ ನಾಯಿ ಮತ್ತು ಅವನು

Exit mobile version