ಹಿರೋಶಿಮಾ: ಜಪಾನ್ ಭೇಟಿಯಲ್ಲಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ (Narendra Modi) ಅವರು ಹಿರೋಶಿಮಾದಲ್ಲಿ ಮಹಾತ್ಮ ಗಾಂಧಿ (Mahatma Gandhi) ಅವರ ಪುತ್ಥಳಿಯನ್ನು ಶನಿವಾರ ಅನಾವರಣ ಮಾಡಿದರು.
ಬಳಿಕ ಈ ಫೋಟೋವನ್ನು ಅವರು ಟ್ವಿಟರ್‌ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ʼʼಹಿರೋಶಿಮಾದಲ್ಲಿರುವ ಈ ಗಾಂಧಿ ಮೂರ್ತಿ ಮುಖ್ಯ ಸಂದೇಶವನ್ನು ನೀಡುತ್ತಿದೆ. ಶಾಂಹಿ ಮತ್ತು ಸಹಬಾಳ್ವೆಗಳ ಗಾಂಧಿ ಸಂದೇಶ ಜಾಗತಿವಾಗಿ ಲಕ್ಷಾಂತರ ಮಂದಿಗೆ ಶಕ್ತಿಯನ್ನು ನೀಡುತ್ತಿದೆʼʼ ಎಂದು ಮೋದಿ ಟ್ವೀಟ್ ಮಾಡಿದ್ದಾರೆ.
ಶುಕ್ರವಾರ ಮೋದಿಯವರು ಜಪಾನ್‌ನ ಹಿರೋಶಿಮಾಗೆ ಆಗಮಿಸಿದ್ದಾರೆ. ಇಲ್ಲಿ G7 ದೇಶಗಳ ಶೃಂಗಸಭೆ ನಡೆಯುತ್ತಿದೆ. ಎರಡನೇ ಮಹಾಯುದ್ಧ ಸಂದರ್ಭದಲ್ಲಿ ಅಮೆರಿಕ ಎಸೆದ ಅಣುಬಾಂಬ್‌ಗೆ ಹಿರೋಷಿಮಾ ನಗರ ಛಿದ್ರಛಿದ್ರವಾಗಿತ್ತು. ಇಂದು ಆ ಪಟ್ಟಣವನ್ನು ಮರಳಿ ಕಟ್ಟಿರುವ ಜಪಾನ್, ಅಲ್ಲಿ ಜಿ7 ದೇಶಗಳ ಶೃಂಗ ನಡೆಸುವ ಮೂಲಕ ಶಾಂತಿ- ಅಭಿವೃದ್ಧಿಯ ಸಂದೇಶವನ್ನು ಜಗತ್ತಿಗೆ ಸಾರಿದೆ.