ವಾಷಿಂಗ್ಟನ್: ಚಂದಿರನ ಅಂಗಳಕ್ಕೆ ಮನುಷ್ಯನನ್ನು ಕಳುಹಿಸುವ ಮೂಲಕ ಮತ್ತೆ ಇತಿಹಾಸ ಸೃಷ್ಟಿಸುವ ಅಮೆರಿಕ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ನಾಸಾ) ಕನಸಿಗೆ ಮತ್ತೊಮ್ಮೆ ತಾಂತ್ರಿಕ ದೋಷ ಅಡ್ಡಿಯಾಗಿದೆ. ಆರ್ಟೆಮಿಸ್ 1 (NASA Artemis-1) ಯೋಜನೆಯ ಭಾಗವಾಗಿ ರಾಕೆಟ್ ಉಡಾವಣೆ ಮಾಡಲು ಅಂತಿಮ ಸಿದ್ಧತೆ ನಡೆಸುತ್ತಿರುವಾಗಲೇ ಇಂಧನ ಸೋರಿಕೆ ಉಂಟಾದ ಕಾರಣ ಚಂದ್ರಯಾನವನ್ನು ಮತ್ತೆ ಮುಂದೂಡಲಾಗಿದೆ.
ಭಾರತೀಯ ಕಾಲಮಾನ 11.57ಕ್ಕೆ ನಾಸಾದ ಸ್ಪೇಸ್ ಲಾಂಚ್ ಸಿಸ್ಟಮ್ ರಾಕೆಟ್ ಉಡಾವಣೆ ಆಗಬೇಕಿತ್ತು. ವಿಜ್ಞಾನಿಗಳು ಕೊನೆಯ ಹಂತದ ಸಿದ್ಧತೆಯಲ್ಲಿರುವಾಗಲೇ ಹೈಡ್ರೋಜನ್ ಸೋರಿಕೆಯಾಗಿದೆ. ಸತತ ಪ್ರಯತ್ನದ ಮಧ್ಯೆಯೂ ವಿಜ್ಞಾನಿಗಳು ಹೈಡ್ರೋಜನ್ ಸೋರಿಕೆಯನ್ನು ತಡೆಯುವಲ್ಲಿ ವಿಫಲವಾದ ಕಾರಣ ತಾತ್ಕಾಲಿಕವಾಗಿ ಚಂದ್ರಯಾನ ಮಿಷನ್‌ಅನ್ನು ಮುಂದೂಡಲಾಗಿದೆ.
ಆಗಸ್ಟ್ 29ರಂದು ಕೂಡ ತಾಂತ್ರಿಕ ದೋಷ ಹಾಗೂ ಇಂಧನ ಸೋರಿಕೆಯ ಕಾರಣದಿಂದಾಗಿ ಕೊನೆಯ ಕ್ಷಣದಲ್ಲಿ ರಾಕೆಟ್ ಉಡಾವಣೆಯನ್ನು ರದ್ದುಗೊಳಿಸಲಾಗಿತ್ತು. ಕೊನೆಗೆ ಸೆಪ್ಟೆಂಬರ್ 3ರಂದು ಉಡಾವಣೆ ಮಾಡಲು ತೀರ್ಮಾನಿಸಲಾಗಿತ್ತು. ಈಗ ಸತತ ಎರಡನೇ ಬಾರಿಗೂ ತಾಂತ್ರಿಕ ದೋಷ ಉಂಟಾಗಿದೆ. ಈಗಾಗಲೇ ಅಪೋಲೊ ಯೋಜನೆ ಅಡಿ ಚಂದಿರನ ಅಂಗಳಕ್ಕೆ ಕಾಲಿಟ್ಟು ಇತಿಹಾಸ ಸೃಷ್ಟಿಸಿರುವ ನಾಸಾ, ಸುಮಾರು 50 ವರ್ಷಗಳ ಬಳಿಕ ಮತ್ತೆ ಚಂದಿರನ ಅಂಗಳಕ್ಕೆ ಕಾಲಿಡಲು ಸಜ್ಜಾಗಿದೆ. ಆದರೆ, ಇದಕ್ಕೆ ತಾಂತ್ರಿಕ ದೋಷ ಕಾಡುತ್ತಿದೆ.
ಇದನ್ನೂ ಓದಿ | NASA Artemis-1 | ತಾಂತ್ರಿಕ ಅಡಚಣೆ, ರದ್ದಾದ ನಾಸಾ ಆರ್ಟೆಮಿಸ್ 1 ಮೂನ್ ಮಿಷನ್