ವೀರ್ಯ ದಾನ ಮಾಡುವದನ್ನೇ ಕಾಯಕ ಮಾಡಿಕೊಂಡಿದ್ದವನಿಗೆ (Sperm Donor) ಕೋರ್ಟ್ ಖಡಕ್ ಎಚ್ಚರಿಕೆ ನೀಡಿದೆ. ಇನ್ನು ಮುಂದೆ ವೀರ್ಯ ದಾನ ಮಾಡುವ ಹಾಗಿಲ್ಲ, ಹಾಗೊಮ್ಮೆ ಮಾಡಿದ್ದೇ ಆದರೆ 100,000 ಯುರೋ (90,41,657 ರೂಪಾಯಿ) ದಂಡ ವಿಧಿಸಲಾಗುವುದು ಎಂದು ನ್ಯಾಯಾಧೀಶರು ತಿಳಿಸಿದ್ದಾರೆ. ಇದು ನಮ್ಮ ದೇಶದಲ್ಲಿ ನಡೆದಿದ್ದಲ್ಲ, ನೆದರ್ಲ್ಯಾಂಡ್ನಲ್ಲಿ ಆಗಿದ್ದು. ಜೊನಾಥನ್ ಜಾಕೋಬ್ ಮೈಜರ್ ಎಂಬ 41 ವರ್ಷದ ವ್ಯಕ್ತಿ ಕಳೆದ ಕೆಲವು ವರ್ಷಗಳಿಂದಲೂ ವೀರ್ಯ ದಾನ ಮಾಡಿ ಹಣ ಸಂಪಾದನೆ ಮಾಡುತ್ತಿದ್ದ. ಹೀಗೆ ಮಾಡಿ ಆತ ಸುಮಾರು 550 ಮಕ್ಕಳಿಗೆ ತಂದೆಯಾಗಿದ್ದಾನೆ ಎಂಬ ಆಘಾತಕಾರಿ ಮಾಹಿತಿ ಹೊರಬಿದ್ದ ಬಳಿಕ, ಮಹಿಳೆಯೊಬ್ಬರು ಕೋರ್ಟ್ ಮೆಟ್ಟಿಲೇರಿದ್ದರು. ಆ ಮಹಿಳೆಯೂ ಕೂಡ ಜೊನಾಥನ್ ಜಾಕೋಬ್ ಮೈಜರ್ನಿಂದ ವೀರ್ಯ ಪಡೆದೇ ಮಗುವನ್ನು ಪಡೆದಿದ್ದರು. ಆದರೆ ಹೀಗೆ ನೂರಾರು ಮಕ್ಕಳಿಗೆ ತಂದೆಯಾಗುವುದು ಕಾನೂನು ಪ್ರಕಾರ ತಪ್ಪು ಎಂದು ಅರಿತಿದ್ದ ಆಕೆ, ದೂರು ದಾಖಲಿಸಿದ್ದರು. ಇಷ್ಟೇ ಅಲ್ಲ, ಇನ್ನೊಂದು ಸಂಸ್ಥೆ ಕೂಡ ಜೊನಾಥನ್ ಜಾಕೋಬ್ ಮೈಜರ್ ವಿರುದ್ಧ ಕೋರ್ಟ್ನಲ್ಲಿ ಮೊಕದ್ದಮೆ ಹೂಡಿತ್ತು.
ಜೊನಾಥನ್ ಜಾಕೋಬ್ ಮೈಜರ್ 2007ರಿಂದ ವೀರ್ಯದಾನದಲ್ಲಿ ತೊಡಗಿಸಿಕೊಂಡಿದ್ದಾನೆ. 2017ರ ಹೊತ್ತಿಗೆ ಆತ 100 ಮಕ್ಕಳಿಗೆ ತಂದೆಯಾಗಿದ್ದ. ಆಗಲೇ ಕೆಲವು ಕ್ಲಿನಿಕ್ಗಳು ಅವನಿಗೆ ನಿಷೇಧ ಹೇರಿದ್ದವು. ಆದರೆ ಅವನೇನೂ ಬಿಟ್ಟಿರಲಿಲ್ಲ. ನೆದರ್ಲ್ಯಾಂಡ್ನಿಂದ ಬೇರೆ ದೇಶಗಳಿಗೆ ಹೋಗಿ ವೀರ್ಯದಾನ ಮಾಡಲು ಶುರು ಮಾಡಿದ್ದ. ಆತ ತನ್ನ ಬಗ್ಗೆ ತಾನು ಮಾಹಿತಿ ನೀಡುವಾಗ ಕೆಲವು ಸುಳ್ಳು ಮಾಹಿತಿಗಳನ್ನು ನೀಡಿದ್ದ. ಹೀಗೆ ನೂರಾರು ಜನರಿಗೆ ವೀರ್ಯದಾನ ಮಾಡಿದ್ದನ್ನು ಯಾರಿಗೂ ಹೇಳಿರಲಿಲ್ಲ. ಇದುವರೆಗೆ ಅವನು 13 ಕ್ಲಿನಿಕ್ಗಳಲ್ಲಿ ವೀರ್ಯದಾನ ಮಾಡಿದ್ದು, ಅದರಲ್ಲಿ 11 ನೆದರ್ಲ್ಯಾಂಡ್ನಲ್ಲಿಯೇ ಇವೆ. ಅಂತಿಮವಾಗಿ ಅವನ ಕಳ್ಳಾಟಕ್ಕೆ ತೆರೆಬಿದ್ದಿದೆ.
ಇದನ್ನೂ ಓದಿ: ಅಜ್ಞಾತ ದಾನಿಗೆ ಬದಲಾಗಿ ತನ್ನದೇ ವೀರ್ಯ ಬಳಸಿ 12 ಮಕ್ಕಳಿಗೆ ತಂದೆಯಾದ ಡಾಕ್ಟರ್!
ವಿಚಾರಣೆ ನಡೆಸಿದ ಡಚ್ ಕೋರ್ಟ್ ನ್ಯಾಯಾಧೀಶರು ‘ಒಬ್ಬ ಪುರುಷ 12 ಮಹಿಳೆಯರು/ದಂಪತಿಗೆ ಮಾತ್ರ ವೀರ್ಯದಾನ ಮಾಡಬಹುದು. 25 ಮಕ್ಕಳಿಗೆ ಮಾತ್ರ ತಂದೆಯಾಗಬಹುದು. ಜೊನಾಥನ್ ಜಾಕೋಬ್ ಮೈಜರ್ ಈ ನಿಯಮವನ್ನು ಉಲ್ಲಂಘನೆ ಮಾಡಿದ್ದಾನೆ’ ಎಂದು ಹೇಳಿದ್ದಾರೆ. ‘ಈ ವ್ಯಕ್ತಿಯಿಂದ ವೀರ್ಯ ದಾನ ಪಡೆದು ಮಕ್ಕಳನ್ನು ಹೊಂದಿದವರೆಲ್ಲರೂ ಪರಿತಪಿಸುತ್ತಿದ್ದಾರೆ. ತಮ್ಮ ಮನೆಯಲ್ಲಿರುವ ಮಗುವಿಗೆ ನೂರಾರು ಅಣ್ಣ/ತಮ್ಮ/ಅಕ್ಕ/ತಂಗಿಯರಿದ್ದಾರೆ ಎಂದು ಒಪ್ಪಿಕೊಂಡಿದ್ದಾರೆ ಎಂದು ಹೇಳಿರುವ ಜಡ್ಜ್ ‘ಒಂದೇ ವೀರ್ಯದಿಂದ ಹುಟ್ಟುವ ನೂರಾರು ಮಕ್ಕಳಿಗೆ ದೈಹಿಕ ತೊಂದರೆಗಳು ಬರಬಹುದು. ಸಾಮಾಜಿಕವಾಗಿಯೂ ಕೆಲವು ಸಮಸ್ಯೆಯಲ್ಲಿ ಸಿಲುಕಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ.