ವಾಷಿಂಗ್ಟನ್: ಪಾಕಿಸ್ತಾನ ಕನಿಷ್ಠ ಒಂದು ಡಜನ್‌ಗೂ ಹೆಚ್ಚು ಭಯೋತ್ಪಾದಕರ ನೆಲೆಯಾಗಿದ್ದು, ಅಮೆರಿಕದಿಂದ ಯಾವುದೇ ಧನಸಹಾಯಕ್ಕೆ ಅರ್ಹವಾಗಿಲ್ಲ ಎಂದು ಅಮೆರಿಕ ಸಂಸದೆ, ರಿಪಬ್ಲಿಕನ್ ಪಕ್ಷದ ನಾಯಕಿ, ಭಾರತೀಯ ಮೂಲದ ನಿಕ್ಕಿ ಹ್ಯಾಲಿ ಹೇಳಿದ್ದಾರೆ.
ನಿಕ್ಕಿ ಹ್ಯಾಲಿ ಅವರು ರಿಪಬ್ಲಿಕನ್ ಪಕ್ಷದಿಂದ ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿದ್ದಾರೆ. ಸೌತ್ ಕೆರೋಲಿನಾಗೆ ಎರಡು ಬಾರಿ ಗವರ್ನರ್ ಆಗಿರುವ 51 ವರ್ಷದ ನಿಕ್ಕಿ, ವಿಶ್ವಸಂಸ್ಥೆಗೆ ಅಮೆರಿಕದ ರಾಯಭಾರಿಯೂ ಆಗಿದ್ದರು. 2024ರ ಅಧ್ಯಕ್ಷ ಚುನಾವಣೆಗೆ ಈಗಿನಿಂದಲೇ ತಮ್ಮ ಪ್ರಚಾರವನ್ನು ಆರಂಭಿಸಿದ್ದಾರೆ.
ಅಮೆರಿಕದ ವಿರೋಧಿಗಳ ಕುರಿತು ವಾಗ್ದಾಳಿಯನ್ನು ಅವರು ತೀವ್ರಗೊಳಿಸಿದ್ದಾರೆ. ಪಾಕಿಸ್ತಾನವು ಅಮೆರಿಕವಿರೋಧಿ ಉಗ್ರರಿಗೆ ನೆಲೆಯಾಗಿದೆ. ಚೀನಾ ಹಾಗೂ ರಷ್ಯಾಗೆ ಸಹಾಯ ಮಾಡುತ್ತಿರುವ, ಅವರ ಜೊತೆ ಕೈಜೋಡಿಸಿರುವ ರಾಷ್ಟ್ರಗಳಿಗೆ ಅಮೆರಿಕ ಒಂದು ಸೆಂಟ್ ಸಹಾಯವನ್ನೂ ಮಾಡಬಾರದು ಎಂದು ಅವರು ಕಿಡಿ ಕಾರಿದ್ದಾರೆ.
ತಾನು ಅಧ್ಯಕ್ಷಳಾದರೆ ಚೀನಾ, ಪಾಕಿಸ್ತಾನಗಳಿಗೆ ಹರಿಯುವ ವಿದೇಶಾಂಗ ಸಹಾಯವನ್ನು ನಿಲ್ಲಿಸಲಿದ್ದೇನೆ ಎಂದಿದ್ದಾರೆ ಆಕೆ. ಕಳೆದ ಬಾರಿ ಅಧ್ಯಕ್ಷ ಚುನಾವಣೆಯಲ್ಲಿ ತನ್ನ ಪಕ್ಷದ ಅಭ್ಯರ್ಥಿ ಡೊನಾಲ್ಡ್ ಟ್ರಂಪ್‌ಗೆ ಈಕೆ ಸಹಾಯಕಿಯಾಗಿದ್ದರು. ಪಂಜಾಬ್ ಮೂಲದ ಸಿಖ್ ದಂಪತಿಯ ಪುತ್ರಿಯಾಗಿರುವ ನಿಕ್ಕಿಯ ಮೂಲ ಹೆಸರು ನಿಮ್ರತಾ ನಿಕ್ಕಿ ರಾಂಧವ.
ಮುಂದಿನ ಚುನಾವಣೆ 2024ರ ನವೆಂಬರ್‌ನಲ್ಲಿ ನಡೆಯಲಿದೆ. ಈ ಚುನಾವಣೆಗೆ ರಿಪಬ್ಲಿಕನ್ ಪಕ್ಷದಿಂದ ಭಾರತೀಯ ಮೂಲದ ರಾಮಸ್ವಾಮಿ ಕೂಡ ಆಕಾಂಕ್ಷಿಯಾಗಿದ್ದಾರೆ. ನಿಕ್ಕಿ ಸೇರಿದರೆ ಅಧ್ಯಕ್ಷೀಯ ಚುನಾವಣೆಗೆ ಇದುವರೆಗೆ ಭಾರತೀಯ ಮೂಲದ ಮೂವರು ಸ್ಪರ್ಧಿಸಿದಂತಾಗುತ್ತದೆ. ಇನ್ನಿಬ್ಬರು ಕಮಲಾ ಹ್ಯಾರಿಸ್ ಮತ್ತು ಬಾಬ್ಬಿ ಜಿಂದಾಲ್.
ಇದನ್ನೂ ಓದಿ: 2024 United States elections: ಅಧಿಕಾರಕ್ಕೆ ಬಂದರೆ ಪಾಕಿಸ್ತಾನ, ಚೀನಾಗೆ ಅನುದಾನ ಕಡಿತ: ಅಮೆರಿಕನ್ನರಿಗೆ ನಿಕ್ಕಿ ಭರವಸೆ