ವಾಷಿಂಗ್ಟನ್: ಅಮೆರಿಕ ಅಧ್ಯಕ್ಷೀಯ ಚುನಾವಣೆ (United States presidential election) ಸದ್ಯ ವಿಶ್ವದ ಕುತೂಹಲ ಕೆರಳಿಸಿದೆ. ನವೆಂಬರ್ 5ರಂದು ಚುನಾವಣೆ ನಡೆಯಲಿದ್ದು, ಇದಕ್ಕೆ ಸಂಬಂಧಿಸಿದ ಚಟುವಟಿಕೆ ಬಿರುಸುಗೊಂಡಿದೆ. ಈ ಮಧ್ಯೆ ಮಹತ್ವದ ಬೆಳವಣಿಗೆಯಲ್ಲಿ ರಿಪಬ್ಲಿಕನ್ ಪಕ್ಷದ ಪ್ರಬಲ ಸ್ಪರ್ಧಿ, ಭಾರತೀಯ ಮೂಲದ ನಿಕ್ಕಿ ಹ್ಯಾಲೆ (Nikki Haley) ಅವರು ವಾಷಿಂಗ್ಟನ್ ಡಿಸಿಯ ಪ್ರಾಥಮಿಕ ಚುನಾವಣೆಯಲ್ಲಿ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ವಿರುದ್ಧ ಗೆಲುವು ಸಾಧಿಸಿದ್ದಾರೆ. ಡೊನಾಲ್ಡ್ ಟ್ರಂಪ್ ವಿರುದ್ಧದ ಸ್ಪರ್ಧೆಯಲ್ಲಿ ಇದು ನಿಕ್ಕಿ ಅವರ ಮೊದಲ ಗೆಲುವು. ಸೂಪರ್ ಮಂಗಳವಾರ (Super Tuesday)ಕ್ಕೆ ಸ್ವಲ್ಪ ಮುಂಚಿತವಾಗಿ ಅವರ ಗೆಲುವು ಈ ಅತ್ಯಂತ ಪ್ರಮುಖ ಎಂದು ವಿಶ್ಲೇಷಿಸಲಾಗುತ್ತಿದೆ.
ಡೊನಾಲ್ಡ್ ಟ್ರಂಪ್ ವಿರುದ್ಧ ಉಳಿದುಕೊಂಡಿರುವ ಏಕೈಕ ಸ್ಪರ್ಧಿ ನಿಕ್ಕಿ ಹ್ಯಾಲೆ, ಶೇ 62.9 ಮತಗಳನ್ನು ಪಡೆದರು. ಟ್ರಂಪ್ ಶೇ. 33.2 ಮತ ಗಳಿಸಿದರು. ಈ ಗೆಲುವಿನ ಬಳಿಕ ಪ್ರತಿಕ್ರಿಯಿಸಿದ ನಿಕ್ಕಿ ಅವರ ವಕ್ತಾರ ಒಲಿವಿಯಾ ಪೆರೆಜ್-ಕ್ಯೂಬಾಸ್, “ರಿಪಬ್ಲಿಕನ್ ಪಕ್ಷದವರು ಡೊನಾಲ್ಡ್ ಟ್ರಂಪ್ ಮತ್ತು ಅವರ ಎಲ್ಲ ಅವ್ಯವಸ್ಥೆಯನ್ನು ತಿರಸ್ಕರಿಸುತ್ತಿರುವುದು ಇದರಿಂದ ಸ್ಪಷ್ಟವಾಗುತ್ತಿದೆʼʼ ಎಂದು ಹೇಳಿದ್ದಾರೆ.
ವಾಷಿಂಗ್ಟನ್ ಡಿಸಿ ನಗರ ಪ್ರದೇಶವಾಗಿದ್ದು ಹೆಚ್ಚಿನ ಪ್ರಮಾಣದ ನಾಗರಿಕರು ಶಿಕ್ಷಣ ಹೊಂದಿದವರು. ಇಲ್ಲಿ ನಿಕ್ಕಿ ಪ್ರಾಬಲ್ಯ ಹೊಂದಿದ್ದರೆ ಟ್ರಂಪ್ ಅವರ ಪ್ರಭಾವ ಗ್ರಾಮಿಣ ಪ್ರದೇಶದಲ್ಲಿ ಹೆಚ್ಚಿದೆ. ರಾಜಧಾನಿಯಲ್ಲಿ ಟ್ರಂಪ್ ಮುಖಭಂಗ ಅನುಭವಿಸುತ್ತಿರುವುದು ಇದೇ ಮೊದಲಲ್ಲ. 2016ರಲ್ಲಿ ಡಿಸ್ಟ್ರಿಕ್ಟ್ ಆಫ್ ಕೊಲಂಬಿಯಾದಲ್ಲಿ ನಡೆದ ಕೊನೆಯ ಸ್ಪರ್ಧಾತ್ಮಕ ರಿಪಬ್ಲಿಕನ್ ನಾಮನಿರ್ದೇಶನ ಸ್ಪರ್ಧೆಯಲ್ಲಿ ಅವರು ಶೇ. 14ಕ್ಕಿಂತ ಕಡಿಮೆ ಮತಗಳನ್ನು ಪಡೆದುಕೊಂಡಿದ್ದರು. ನಾಳೆ (ಮಾರ್ಚ್ 5) ಅಮೆರಿಕದ ಒಂದು ಭಾಗವಾದ 15 ರಾಜ್ಯಗಳಲ್ಲಿ ಅಧ್ಯಕ್ಷೀಯ ಚುನಾವಣೆಯ ಪ್ರಾಥಮಿಕ ಮತದಾನ ನಡೆಯಲಿದೆ.
ದಕ್ಷಿಣ ಕೆರೊಲಿನಾದಲ್ಲಿ ಸೋತಿದ್ದ ನಿಕ್ಕಿ
ಇತ್ತೀಚೆಗೆ ದಕ್ಷಿಣ ಕೆರೊಲಿನಾದಲ್ಲಿ ನಡೆದ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಆಯ್ಕೆಯ ಸ್ಪರ್ಧೆಯಲ್ಲಿ 51 ವರ್ಷದ ನಿಕ್ಕಿ ಹ್ಯಾಲೆ ಅವರನ್ನು 77 ವರ್ಷದ ಟ್ರಂಪ್ ಸೋಲಿಸಿದ್ದರು. ಟ್ರಂಪ್ ಕೆಲವು ದಿನಗಳ ಹಿಂದೆ ನೆವಡಾ ರಾಜ್ಯದಲ್ಲಿ ನಡೆದ ಸ್ಪರ್ಧೆಯಲ್ಲಿಯೂ ವಿಜಯ ಸಾಧಿಸಿದ್ದರು. ನೆವಡಾದಲ್ಲಿ ನಡೆದ ಚುನಾವಣೆಯಲ್ಲಿ ನಿಕ್ಕಿ ಹ್ಯಾಲೆ ಸ್ಪರ್ಧಿಸಿರಲಿಲ್ಲ.
ಗವರ್ನರ್ ಮತ್ತು ವಿಶ್ವಸಂಸ್ಥೆಯ ರಾಯಭಾರಿಯಾಗಿದ್ದ ನಿಕ್ಕಿ ಹ್ಯಾಲೆ ದಕ್ಷಿಣ ಕೆರೊಲಿನಾದ ಜಿದ್ದಾಜಿದ್ದಿನ ಹೋರಾಟದಲ್ಲಿ ಟ್ರಂಪ್ ವಿರುದ್ಧ ಸೋಲೊಪ್ಪಿಕೊಂಡಿದ್ದರು. ಆದರೆ ಕಣದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎನ್ನುವ ಮೂಲಕ ಮತ್ತೆ ಹೋರಾಟದ ಸೂಚನೆ ನೀಡಿದ್ದರು. ಅದರಂತೆ ಈ ಬಾರಿ ಗೆಲುವು ದಾಖಲಿಸಿದ್ದಾರೆ.
ಇದನ್ನೂ ಓದಿ: Nikki Haley: ಅಮೆರಿಕ ಅಧ್ಯಕ್ಷೀಯ ಅಭ್ಯರ್ಥಿ ಚುನಾವಣೆ; ಭಾರತೀಯ ಮೂಲದ ನಿಕ್ಕಿ ಹ್ಯಾಲೆ ವಿರುದ್ಧ ಗೆದ್ದ ಟ್ರಂಪ್
ನಿಕ್ಕಿ ಅವರ ತಂದೆ-ತಾಯಿ ಭಾರತೀಯ ಮೂಲದವರು. ಪಂಜಾಬ್‌ನ ಅಮೃತ್‌ಸರದ ಸಿಖ್ ಕುಟುಂಬದವರಾದ ಇವರು ಅನೇಕ ವರ್ಷಗಳ ಹಿಂದೆ ಕೆಲಡಾಕ್ಕೆ ವಲಸೆ ಹೋಗಿ ಬಳಿಕ ಅಮೆರಿಕದಲ್ಲಿ ನೆಲೆಸಿದ್ದರು. ವಿಶೇಷ ಎಂದರೆ ಅಮೆರಿಕದ ಅಧ್ಯಕ್ಷ ಸ್ಥಾನಕ್ಕೆ ಇನ್ನೊಬ್ಬ ಭಾರತೀಯ ಮೂಲದ ಬಯೋಟೆಕ್ ಉದ್ಯಮಿ ವಿವೇಕ್ ರಾಮಸ್ವಾಮಿ ಸ್ಪರ್ಧಿಸಿದ್ದರು. ಆದರೆ ಇತ್ತೀಚೆಗೆ ರೇಸ್‌ನಿಂದ ಹೊರಗೆ ಬಂದು ಟ್ರಂಪ್ ಅವರನ್ನು ಬೆಂಬಲಿಸಲು ನಿರ್ಧರಿಸಿದ್ದರು.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಮೆಂಟ್ ಮೂಲಕ ತಿಳಿಸಿ