Site icon Vistara News

ಪಾಕಿಸ್ತಾನದಲ್ಲಿ ಮೊಬೈಲ್‌, ಅಂತರ್ಜಾಲಕ್ಕೂ ವಿದ್ಯುತ್‌ ಇಲ್ಲ

pakistan

ಕರಾಚಿ: ವಿದ್ಯುತ್‌ ಸಮಸ್ಯೆಯಿಂದಾಗಿ ಮೊಬೈಲ್‌ ಮತ್ತು ಅಂತರ್ಜಾಲ ಸಂಪರ್ಕಗಳು ದೇಶಾದ್ಯಂತ ಕಡಿತಗೊಳ್ಳುವ ಆತಂಕವನ್ನು ಪಾಕಿಸ್ತಾನದ ರಾಷ್ಟ್ರೀಯ ಮಾಹಿತಿ ತಂತ್ರಜ್ಞಾನ ಮಂಡಳಿ ವ್ಯಕ್ತಪಡಿಸಿದೆ.

ʻದೇಶಾದ್ಯಂತ ದೀರ್ಘ ಅವಧಿಯವರೆಗೆ ವಿದ್ಯುತ್‌ ಕಡಿತಗೊಳ್ಳುತ್ತಿರುವುದರಿಂದ, ಮೊಬೈಲ್‌ ಮತ್ತು ಅಂತರ್ಜಾಲ ಸಂಪರ್ಕಗಳು ಸ್ತಬ್ಧವಾಗುತ್ತವೆಂಬ ಎಚ್ಚರಿಕೆಯನ್ನು ಟೆಲೆಕಾಂ ನಿರ್ವಾಹಕರು ನೀಡಿದ್ದಾರೆ. ವಿದ್ಯುತ್‌ ಸಮಸ್ಯೆಯಿಂದಾಗಿ ಅವರ ಕೆಲಸದಲ್ಲಿ ಅಡಚಣೆಯಾಗುತ್ತಿದೆʼ ಎಂದು ಮಂಡಳಿ ಟ್ವಿಟರ್‌ನಲ್ಲಿ ತಿಳಿಸಿದೆ.

ಜುಲೈ ತಿಂಗಳಲ್ಲಿ ದೇಶದಲ್ಲಿ ವಿದ್ಯುತ್‌ ಕೊರತೆ ಹೆಚ್ಚಾಗಬಹುದು ಎಂದಿರುವ ಪಾಕ್‌ ಪ್ರಧಾನಿ ಶಾಹ್‌ಬಾಜ್‌ ಶರೀಫ್‌, ʻದೇಶದಲ್ಲಿ ಕೊರತೆಯಾಗಿರುವ ದ್ರವೀಕೃತ ನೈಸರ್ಗಿಕ ಅನಿಲವನ್ನು ಇತರೆಡೆಯಿಂದ ಪಡೆದುಕೊಳ್ಳಲು ಮೈತ್ರಿ ಸರಕಾರ ಪ್ರಯತ್ನಿಸುತ್ತಿದೆʼ ಎಂದು  ಹೇಳಿದ್ದಾರೆ. ದ್ರವೀಕೃತ ನೈಸರ್ಗಿಕ ಅನಿಲ ಒಪ್ಪಂದ ಕೈಗೂಡದ ಹಿನ್ನೆಲೆಯಲ್ಲಿ ಪಾಕಿಸ್ತಾನದಲ್ಲಿ ವಿದ್ಯುತ್‌ ಕೊರತೆ ಉದ್ಭವಿಸಿದ್ದು, ಜುಲೈ ತಿಂಗಳಿನಲ್ಲಿ ಹೆಚ್ಚಲಿರುವ ತಾಪಮಾನದಿಂದಾಗಿ ಪರಿಸ್ಥಿತಿ ಮತ್ತಷ್ಟು ಹದಗೆಡುವ ಸಂಭವವಿದೆ. ಅದಕ್ಕಾಗಿ ಕರಾಚಿ ಸೇರಿದಂತೆ ಪ್ರಮುಖ ನಗರಗಳಲ್ಲಿ ಸರಕಾರಿ ಕೆಲಸದ ಅವಧಿಯನ್ನು ಕಡಿತಗೊಳಿಸಲಾಗಿದೆ. ಶಾಪಿಂಗ್‌ ಮಾಲ್‌ಗಳ ಮತ್ತು ಉದ್ದಿಮೆಗಳ ಕೆಲಸದ ಅವಧಿಯನ್ನೂ ಸರಕಾರ ಕಿರಿದಾಗಿಸಿದೆ.

ಇತ್ತೀಚೆಗೆ, ದೇಶ ಆರ್ಥಿಕ ದುಃಸ್ಥಿತಿಯಲ್ಲಿರುವ ಕಾರಣ ಎಲ್ಲರೂ ಕಡಿಮೆ ಚಹಾ ಕುಡಿಯುವಂತೆ ಪಾಕಿಸ್ತಾನದ ಯೋಜನಾ ಸಚಿವ ಅಹ್ಸಾನ್‌ ಇಕ್ಬಾಲ್‌ ಮನವಿ ಮಾಡಿದ್ದನ್ನು ನೆನಪಿಸಿಕೊಳ್ಳಬಹುದು. ಪಾಕಿಸ್ತಾನ ಅತಿ ಹೆಚ್ಚು ಟೀ ಆಮದು ಮಾಡಿಕೊಳ್ಳುವ ದೇಶ. ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿರುವ ಪಾಕಿಸ್ತಾನ ಅವಶ್ಯಕ ವಸ್ತುಗಳಿಗೆ ತತ್ವಾರ ಎದುರಿಸುತ್ತಿದೆ.

ಇದನ್ನೂ ಓದಿ: Rajsthan murder: ಕನ್ಹಯ್ಯ ಲಾಲ್‌ ಹಂತಕರಿಗೆ ಪಾಕಿಸ್ತಾನ ಲಿಂಕ್‌, 45 ದಿನ ಜಿಹಾದಿ ಟ್ರೇನಿಂಗ್‌!

Exit mobile version