ಟ್ವಿಟರ್‌ನಲ್ಲಿ ಆಗಾಗ ಒಂದೊಂದು ವಿಷಯ ಟ್ರೆಂಡ್ ಆಗುತ್ತದೆ. ಅಂದರೆ ಒಬ್ಬರು ಯಾವುದೋ ವಿಷಯದ ಬಗ್ಗೆ ಟ್ವೀಟ್ ಮಾಡಿದರೆ, ಅದು ಒಂದು ಜಾಲದಂತೆ ಹಬ್ಬುತ್ತ ಹೋಗುತ್ತದೆ. ಅನೇಕರು ಅದೇ ವಿಷಯವನ್ನು ಟ್ವೀಟ್ ಮಾಡಿ, ಪೋಸ್ಟ್ ಹಾಕುತ್ತಾರೆ. ಹಾಗೇ, ಈಗ ಟ್ವಿಟರ್‌ನಲ್ಲಿ ಟ್ರೆಂಡ್ ಆಗಿದ್ದು ‘One-Word Tweet’. ಅಂದರೆ ಒಂದೇ ಶಬ್ದವನ್ನು ಟ್ವೀಟ್ ಮಾಡಬೇಕು. ಅಂದರೆ ಯಾವುದೇ ನಿರ್ದಿಷ್ಟ ವಿಷಯದ ಬಗ್ಗೆ ವಾಕ್ಯ ರಚನೆ ಮಾಡುವುದಲ್ಲ. ವಿವರಿಸಿ ಪೋಸ್ಟ್ ಹಾಕುವುದಲ್ಲ. ಬದಲಿಗೆ ಒಂದೇ ಶಬ್ದದ ಟ್ವೀಟ್.
ಟ್ವಿಟರ್‌ನಲ್ಲಿ ಟ್ರೆಂಡ್ ಆಗುತ್ತಿರುವ ಈ ಒನ್ ವರ್ಡ್ ಟ್ವೀಟ್ಗೆ ಅಮೆರಿಕ ಅಧ್ಯಕ್ಷ ಜೋ ಬೈಡನ್, ಖ್ಯಾತ ಕ್ರಿಕೆಟರ್ ಸಚಿನ್ ತೆಂಡೂಲ್ಕರ್, ನಾಸಾ, ಐಸಿಸಿ (ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ), ವಿಶ್ವ ಪ್ರಸಿದ್ಧ ಕಾಫಿ ಹೌಸ್ ಕಂಪನಿ ಸ್ಟಾರ್ಬಕ್, ಡೊಮಿನೋಸ್ ಫಿಜ್ಜಾ ಸೇರಿ ಅನೇಕ ಗಣ್ಯರು, ಪ್ರಸಿದ್ಧ ಕಂಪನಿಗಳು ಕೈಜೋಡಿಸಿದ್ದಾರೆ/ಕೈಜೋಡಿಸಿವೆ. ಅಂದರೆ ತಮಗೆ ಯಾವುದು ಸೂಕ್ತವೆನ್ನಿಸುತ್ತದೆಯೋ ಆ ಪದವನ್ನು ಟ್ವೀಟ್ ಮಾಡಿದ್ದಾರೆ.
ಜೋ ಬೈಡನ್ ‘democracy’ ಎಂದು ಟ್ವೀಟ್ ಮಾಡಿದ್ದರೆ, ಸಚಿನ್ ತೆಂಡೂಲ್ಕರ್ ಮತ್ತು ಐಸಿಸಿ, ‘Cricket’, ಹಾಗೇ, ನಾಸಾ ‘universe’, ಡೊಮಿನೋಸ್ ಪಿಜ್ಜಾ ‘pineapple’ ಎಂದು ಟ್ವೀಟ್ ಮಾಡಿವೆ. ಅಂದಹಾಗೇ, ಇದನ್ನು ಮೊದಲು ಪ್ರಾರಂಭಿಸಿದ್ದು ಆಮ್ಟ್ರಾಕ್ ಎಂಬ ಯುಎಸ್ ಮತ್ತು ಕೆನಡಾದ ರಾಷ್ಟ್ರೀಯ ಪ್ರಯಾಣಿಕರ ರೈಲು ಸೇವಾ ಕಾರ್ಪೋರೇಶನ್. ಸೆಪ್ಟೆಂಬರ್ 1ರಂದು ಆಮ್ಟ್ರಾಕ್ Train ಎಂದು ಟ್ವೀಟ್ ಮಾಡಿತ್ತು. ಅದಾದ ಮೇಲೆ ಒಬ್ಬರ ಬಳಿಕ ಒಬ್ಬರಂತೆ ಒನ್ ವರ್ಡ್ ಟ್ವೀಟ್ ಮಾಡುತ್ತಿದ್ದಾರೆ.
ಗಮನ ಸೆಳೆಯಿತು ಉಕ್ರೇನ್ ಅಧ್ಯಕ್ಷನ ಟ್ವೀಟ್
ಉಕ್ರೇನ್ ಮೇಲೆ ರಷ್ಯಾ ಹಿಡಿತ ಸಾಧಿಸಿದೆ. ರಷ್ಯಾ ಸಾರಿದ ಯುದ್ಧದ ಪ್ರಭಾವಕ್ಕೆ ಆ ಪುಟ್ಟ ದೇಶ ಈಗಾಗಲೇ ಸಾಕಷ್ಟು ನಲುಗಿದೆ. ಅದೆಷ್ಟೋ ಮನೆಗಳು, ವಸತಿ ಕಟ್ಟಡಗಳು, ಕಚೇರಿಗಳು ಧ್ವಂಸಗೊಂಡಿವೆ. ಜನರು ಆಶ್ರಯ-ಉದ್ಯೋಗ ಕಳೆದುಕೊಂಡಿದ್ದಾರೆ. ಆಹಾರಕ್ಕೂ ಪರದಾಡುವ ಪರಿಸ್ಥಿತಿ ಬಂದಿದೆ. ತನ್ನ ದೇಶಕ್ಕೆ ಒದಗಿದ ಈ ಸ್ಥಿತಿಯನ್ನು ನೋಡುತ್ತಿರುವ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಒಂದೇ ಶಬ್ದದಲ್ಲಿ ತನ್ನ ನೋವು ಹೊರಹಾಕಿದ್ದಾರೆ. ಈ ಮೂಲಕ ಒನ್ ವರ್ಡ್ ಟ್ವೀಟ್ ಅಭಿಯಾನದಲ್ಲಿ ತಾವೂ ಪಾಲ್ಗೊಂಡಿದ್ದಾರೆ.
ಅಂದಹಾಗೇ, ವೊಲೊಡಿಮಿರ್ Freedom ಎಂದು ಟ್ವೀಟ್ ಮಾಡಿದ್ದು, ಈ ಮೂಲಕ ತಮಗೆ ಸ್ವಾತಂತ್ರ್ಯ ಬೇಕು ಎಂದು ಹೇಳಿದ್ದಾರೆ. ಇದನ್ನು ನೋಡಿದ ಅನೇಕರು ತುಂಬ ಭಾವನಾತ್ಮಕವಾಗಿ ಪ್ರತಿಕ್ರಿಯೆ ನೀಡಿದ್ದಾರೆ. ‘ಉಕ್ರೇನ್ ಜನರು ಧೈರ್ಯವಂತರು’, ‘ಆತ್ಮ ವಿಶ್ವಾಸ ಕಳೆದುಕೊಳ್ಳಬೇಡಿ, ಖಂಡಿತ ನೀವೇ ಗೆಲ್ಲುತ್ತೀರಿ’ ಎಂಬಿತ್ಯಾದಿ ಟ್ವೀಟ್ ಮೂಲಕ ಉಕ್ರೇನ್ ಅಧ್ಯಕ್ಷನಿಗೆ ಧೈರ್ಯ ತುಂಬಿದ್ದಾರೆ.
ಇದನ್ನೂ ಓದಿ: Gargi Movie | ಅಪ್ಪ- ಮಗಳ ಎಮೋಷನ್‌ಗೆ ಭಾವ ನೀಡಿದ ಸಾಯಿ ಪಲ್ಲವಿ, ಟ್ವಿಟರ್‌ನಲ್ಲಿ ಗಾರ್ಗಿ ಹವಾ