Site icon Vistara News

Operation Dara-e-Bolan: 78 ಪಾಕಿಸ್ತಾನಿ ಸೈನಿಕರನ್ನು ಕೊಂದ ಬಲೂಚ್ ಲಿಬರೇಶನ್ ಆರ್ಮಿ

operation

operation

ಕರಾಚಿ: ಬಲೂಚ್ ಲಿಬರೇಶನ್ ಆರ್ಮಿ (Baloch Liberation Army-BLA) ತನ್ನ ಆಪರೇಷನ್ ದಾರಾ-ಎ-ಬೋಲನ್ (Operation Dara-e-Bolan) ಕಾರ್ಯಾಚರಣೆಯಲ್ಲಿ 78 ಪಾಕಿಸ್ತಾನಿ ಸೈನಿಕರನ್ನು ಕೊಂದಿದೆ ಎಂದು ಬಿಎಲ್ಎ ಹೇಳಿಕೊಂಡಿದೆ.

“12 ಫಿದಾಯಿನ್‌ಗಳು (ಸ್ವಯಂ ತ್ಯಾಗಿಗಳು) ಸೇರಿದಂತೆ 385 ಬಲೂಚ್ ಸ್ವಾತಂತ್ರ್ಯ ಹೋರಾಟಗಾರರು ಆಪರೇಷನ್ ದಾರಾ-ಎ-ಬೋಲನ್‌ನಲ್ಲಿ ಭಾಗವಹಿಸಿದ್ದರು. ಈ ವೇಳೆ 78 ಪಾಕಿಸ್ತಾನಿ ಸೈನಿಕರನ್ನು ನಿರ್ಮೂಲನೆ ಮಾಡಲಾಗಿದೆ. ಸಾಮಾನ್ಯ ಶತ್ರುವಿನ ವಿರುದ್ಧ ನಡೆಸುವ ಹೋರಾಟದಲ್ಲಿ ಯಾವುದೇ ರಾಷ್ಟ್ರದೊಂದಿಗೆ ಕೈ ಜೋಡಿಸಲು ಬಿಎಲ್ಎ ಸಿದ್ಧ” ಎಂದು ಬಲೂಚ್ ಲಿಬರೇಶನ್ ಆರ್ಮಿ ತಿಳಿಸಿದೆ.

ಜನವರಿ 29ರಿಂದ 31ರ ವರೆಗೆ ಎರಡು ದಿನಗಳ ಕಾಲ ನಡೆದ ಆಪರೇಷನ್ ದಾರಾ-ಇ-ಬೋಲನ್ ಯಶಸ್ವಿಯಾಗಿ ಪೂರ್ಣಗೊಂಡಿದೆ. ಈ ಕಾರ್ಯಾಚರಣೆಯಲ್ಲಿ ಮಜೀದ್ ಬ್ರಿಗೇಡ್‌ನ 12 ಫಿದಾಯಿನ್‌ಗಳು, ಫತೇಹ್ ಸ್ಕ್ವಾಡ್, ವಿಶೇಷ ಕಾರ್ಯತಂತ್ರ ಕಾರ್ಯಾಚರಣೆ ದಳ ಮತ್ತು ಗುಪ್ತಚರ ವಿಭಾಗದ ಸದಸ್ಯರು ಸೇರಿದಂತೆ ಗುಂಪಿನ ವಿವಿಧ ಘಟಕಗಳಿಂದ 385 ಬಿಎಲ್ಎ ಹೋರಾಟಗಾರರು ಭಾಗವಹಿಸಿದ್ದರು.

ಜನವರಿ 31ರ ಸಂಜೆ 7 ಗಂಟೆಗೆ ಮುಕ್ತಾಯಗೊಂಡ ಕಾರ್ಯಾಚರಣೆಯು ತನ್ನ ಎಲ್ಲ ಉದ್ದೇಶಿತ ಗುರಿಗಳನ್ನು ಸಾಧಿಸಿದೆ. ಬಿಎಲ್ಎ ಪಡೆಗಳು ಮ್ಯಾಕ್ ಪಟ್ಟಣ ಮತ್ತು ಆಯಕಟ್ಟಿನ ಪ್ರಮುಖ ಹೆದ್ದಾರಿ ಎನ್ಎಚ್ -65 ಸೇರಿದಂತೆ 70 ಕಿ.ಮೀ. ಪ್ರದೇಶದ ಮೇಲೆ ನಿಯಂತ್ರಣ ಸಾಧಿಸಿವೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ. ಕಾರ್ಯಾಚರಣೆಯ ಮೊದಲ ಮೂರು ಗಂಟೆಗಳಲ್ಲಿ 45 ಮಂದಿ ಅಸುನೀಗಿದರು. ಬೋಲನ್‌ನ ಪೀರ್ ಘೈಬ್‌ನಲ್ಲಿರುವ ಮಿಲಿಟರಿ ಶಿಬಿರದ ಮೇಲೆ ನಡೆದ ದಾಳಿಯಲ್ಲಿ 10 ಫ್ರಾಂಟಿಯರ್ ಕಾರ್ಪ್ಸ್ (ಎಫ್‌ಸಿ) ಸಿಬ್ಬಂದಿ ಮತ್ತು ಗೋಕುರ್ಟ್‌ನಲ್ಲಿ ಮಿಲಿಟರಿ ಬೆಂಗಾವಲು ಮೇಲೆ ನಡೆದ ದಾಳಿಯಲ್ಲಿ ನಾಲ್ವರು ಪಾಕಿಸ್ತಾನಿ ಸೈನಿಕರು ಸಾವನ್ನಪ್ಪಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಜನವರಿ 30ರಂದು ಬಿಎಲ್ಎ ಹೋರಾಟಗಾರರು ಎಫ್‌ಸಿ ಪ್ರಧಾನ ಕಚೇರಿಗೆ ನುಗ್ಗಿದಾಗ ಹನ್ನೆರಡು ಪಾಕಿಸ್ತಾನಿ ಮಿಲಿಟರಿ ಸಿಬ್ಬಂದಿ ಸಾವನ್ನಪ್ಪಿದ್ದಾರೆ. ಹೆಚ್ಚುವರಿಯಾಗಿ, ಐದು ಎಸ್ಎಸ್‌ಜಿ ಕಮಾಂಡೋಗಳು ಮತ್ತು ಸ್ಟೇಷನ್ ಹೌಸ್ ಆಫೀಸರ್ (ಎಸ್ಎಚ್ಒ) ಸೇರಿದಂತೆ ಇಬ್ಬರು ಪೊಲೀಸ್ ಸಿಬ್ಬಂದಿ ಪ್ರಾಣ ಕಳೆದುಕೊಂಡಿದ್ದಾರೆ.

“ಎಲ್ಲ ಫಿದಾಯಿನ್‌ಗಳು ತಾಯ್ನಾಡಿಗಾಗಿ ತಮ್ಮ ಪ್ರಾಣವನ್ನು ಅರ್ಪಿಸಲು ಯುದ್ಧ ಭೂಮಿಗೆ ಬಂದಿದ್ದರು. ಈ ನಿಸ್ವಾರ್ಥ ಯೋಧರು ಎಫ್‌ಸಿ ಪ್ರಧಾನ ಕಚೇರಿ ಒಳಕ್ಕೆ ನುಸುಳುವಲ್ಲಿ ಯಶಸ್ವಿಯಾದರು ಮತ್ತು ಎರಡು ದಿನಗಳ ಕಾಲ ಶತ್ರು ಪಡೆಗಳನ್ನು ಹಿಮ್ಮೆಟ್ಟಿಸಿದರು. ತಾಯ್ನಾಡಿನ ಈ ಮಹಾನ್ ಪುತ್ರರ ವಿವರಗಳನ್ನು ಶೀಘ್ರದಲ್ಲೇ ಮಾಧ್ಯಮಗಳಿಗೆ ಬಿಡುಗಡೆ ಮಾಡಲಾಗುವುದುʼʼ ಎಂದು ಮೂಲಗಳು ಹೇಳಿವೆ.

ಆಪರೇಷನ್‌ನ ಉದ್ದೇಶ

ಬಿಎಲ್ಎ ಪ್ರಕಾರ, ಆಪರೇಷನ್ ದಾರಾ-ಎ-ಬೋಲನ್ ಎರಡು ಪ್ರಾಥಮಿಕ ಉದ್ದೇಶಗಳನ್ನು ಹೊಂದಿತ್ತು. ಮೊದಲನೆಯದಾಗಿ, ಬಲೂಚಿಸ್ತಾನದ ನಗರವನ್ನು ಪಾಕಿಸ್ತಾನದ ‘ಆಕ್ರಮಿತ’ ಪಡೆಗಳಿಂದ ಮುಕ್ತಗೊಳಿಸುವುದು ಮತ್ತು ಎರಡು ದಿನಗಳವರೆಗೆ ನಿಯಂತ್ರಣವನ್ನು ಕಾಪಾಡಿಕೊಳ್ಳಲು ಬಿಎಲ್ಎ ಸಾಮರ್ಥ್ಯವನ್ನು ಪ್ರದರ್ಶಿಸುವುದು. ಸದ್ಯ ಈ ಎರಡು ಉದ್ದೇಶಗಳು ಈಡೇರಿವೆ ಎಂದು ಬಿಎಲ್ಎ ತಿಳಿಸಿದೆ.

ಇದನ್ನೂ ಓದಿ: Houthi Targets : ಹೌತಿ ಉಗ್ರರ ವಿರುದ್ಧ ಮುಂದುವರಿದ ಕಾರ್ಯಾಚರಣೆ, ಯೆಮೆನ್​ನಲ್ಲಿ 36 ನೆಲೆಗಳ ಮೇಲೆ ದಾಳಿ

ಬಲೂಚಿಸ್ತಾನದಲ್ಲಿ ಪಾಕಿಸ್ತಾನಿ ಪಡೆಗಳು ನಡೆಸುವ ದೌರ್ಜನ್ಯಗಳನ್ನು ಪರಿಹರಿಸಲು ಮನವಿಗಳು, ಪ್ರತಿಭಟನೆಗಳು ಮತ್ತು ಮಾನವ ಹಕ್ಕುಗಳ ಹೋರಾಟ ಸಾಕಾಗುವುದಿಲ್ಲ. ಇಂತಹ ಕ್ರಾಂತಿಕಾರಿ ನಿರ್ಧಾರ ಕೈಗೊಳ್ಳಬೇಕಾಗುತ್ತದೆ ಎಂದು ಅದು ಹೇಳಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಮೆಂಟ್ ಮೂಲಕ ತಿಳಿಸಿ

Exit mobile version