ಹಟೇ, ಟರ್ಕಿ: ಸೋಮವಾರ ಸಂಭವಿಸಿದ ಸರಣಿ ಭೂಕಂಪಕ್ಕೆ ಟರ್ಕಿ ಹಾಗೂ ಸಿರಿಯಾ ರಾಷ್ಟ್ರಗಳೆರಡೂ ತತ್ತರಿಸಿವೆ(Turkey Earthquake). ಈ ನೈಸರ್ಗಿಕ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ ಈಗ 5000 ದಾಟಿದೆ. ಏತನ್ಮಧ್ಯೆ, ಪರಿಹಾರ ಕಾರ್ಯಾಚರಣೆ ಭರದಿಂದ ನಡೆದೆಯಾದರೂ, ಹಿಮದಿಂದಾಗಿ ತೊಡಕಾಗುತ್ತಿದೆ. ಭಾರತವು ಸೇರಿದಂತೆ ಅಂತಾರಾಷ್ಟ್ರೀಯ ಸಮುದಾಯವು ಟರ್ಕಿಗೆ ನೆರವಿಗೆ ಧಾವಿಸಿದೆ. ಭಾರತದಿಂದ ಸೇನಾ ವೈದ್ಯಕೀಯ ತಂಡವನ್ನು ಹೊತ್ತ ವಿಮಾನ ಟರ್ಕಿಗೆ ಹೋಗಿದೆ.
ಟರ್ಕಿ, ಸಿರಿಯಾದ ಬಹುತೇಕ ಕಡೆ ನೆಲಸಮವಾದ ಕಟ್ಟಡಗಳೇ ಕಾಣಿಸುತ್ತಿವೆ. ಅವಶೇಷಗಳನ್ನು ಬಗೆದಷ್ಟು ಶವಗಳು, ಗಾಯಗೊಂಡವರು ಸಿಗುತ್ತಿದ್ದಾರೆ. ಗಡಿ ಪ್ರದೇಶದ ನಗರಗಳಲ್ಲಿ ಹಲವಾರು ಕಟ್ಟಡಗಳು ನೆಲಸಮವಾಗಿವೆ ಎಂದು ವಿಪತ್ತ ನಿರ್ವಹಣಾ ಸಂಸ್ಥೆಗಳು ಹೇಳಿವೆ. ಈಗಾಗಲೇ ಯುದ್ಧ, ದಂಗೆ, ನಿರಾಶ್ರಿತರ ಬಿಕ್ಕಟ್ಟುಗಳು ಮತ್ತು ಇತ್ತೀಚಿನ ಕಾಲರಾದಿಂದ ತತ್ತರಿಸಿದ್ದ ಈ ಪ್ರದೇಶದಲ್ಲಿ ಭೂಕಂಪವು ಗಾಯದ ಮೇಲೆ ಉಪ್ಪ ಸವರಿದಂತಾಗಿದೆ.
ಸೋಮವಾರ ಬೆಳಗಿನಿಂದ ರಾತ್ರಿಯವರೆಗೆ ನಾಲ್ಕಾರು ಬಾರಿ ಭೂಮಿ ಕಂಪಿಸಿದೆ. ಪರಿಣಾಮ ಟರ್ಕಿ, ಸಿರಿಯಾ ಮಾತ್ರವಲ್ಲದೇ ಪಕ್ಕದ ಸೈಪ್ರಸ್ ಮತ್ತು ಈಜಿಪ್ಟ್‌ನಲ್ಲಿ ಭೂಮಿ ಕಂಪಿಸಿದೆ.
ರಕ್ಷಣಾ ಕಾರ್ಯಾಚರಣೆಗಳು ಮುಂದುವರಿದಿವೆ. ಆದರೆ ತೀವ್ರ ಚಳಿಗಾಲದ ಹವಾಮಾನ ರಾತ್ರಿಯ ರಕ್ಷಣಾ ಕಾರ್ಯಾಚರಣೆಗೆ ಅಡ್ಡಿಯಾಗಿದೆ. ರಾತ್ರಿ ಶೂನ್ಯ ತಾಪಮಾನ ಇದ್ದುದರಿಂದ ಅವಶೇಷಗಳಡಿಯಲ್ಲಿ ಸಿಲುಕಿರುವ ಅಥವಾ ನಿರಾಶ್ರಿತರಾದ ಜನರ ಪರಿಸ್ಥಿತಿ ಮತ್ತಷ್ಟು ಹದಗೆಟ್ಟಿದೆ. 2021ರ ಆಗಸ್ಟ್‌ನಲ್ಲಿ ದೂರದ ದಕ್ಷಿಣ ಅಟ್ಲಾಂಟಿಕ್‌ನಲ್ಲಿ ನಡೆದ ಭೂಕಂಪನದ ನಂತರ ವಿಶ್ವದಾದ್ಯಂತ ದಾಖಲಾಗಿರುವ ಭೂಕಂಪಗಳಲ್ಲೆಲ್ಲ ಇದು ದಾರುಣವಾಗಿದೆ.
ಭಾರತದ ನೆರವು
ವಿಶ್ವಸಂಸ್ಥೆ ಹಾಗೂ ಹಲವು ದೇಶಗಳ ರಕ್ಷಣಾ ಹಾಗೂ ಪರಿಹಾರ ನೆರವು ಟರ್ಕಿ ಹಾಗೂ ಸಿರಿಯಾದತ್ತ ಧಾವಿಸುತ್ತಿದ್ದು, ಭಾರತದ ಮೊದಲ ರಕ್ಷಣಾ ತಂಡ ಅಲ್ಲಿಗೆ ಹೊರಟಿದೆ. ಎನ್‌ಡಿಆರ್‌ಎಫ್ ಶೋಧ ಮತ್ತು ಸುರಕ್ಷತಾ ದಳಗಳು, ವಿಶೇಷ ತರಬೇತಿ ಪಡೆದ ಶ್ವಾನದಳಗಳು, ವೈದ್ಯಕೀಯ ಸಾಮಗ್ರಿಗಳು, ಡ್ರಿಲ್ಲಿಂಗ್ ಮಷಿನ್‌ಗಳು ಮತ್ತು ಇತರ ಅಗತ್ಯ ಉಪಕರಣಗಳನ್ನು ಒಳಗೊಂಡ ಭಾರತದ ಮೊದಲ ಬ್ಯಾಚ್ ಮಂಗಳವಾರ ಮುಂಜಾನೆ ಟರ್ಕಿಗೆ ಹೊರಟಿದೆ.