Site icon Vistara News

Hijab Row | ಇರಾನ್ ಹಿಜಾಬ್ ವಿರೋಧಿ ಪ್ರತಿಭಟನೆಯಲ್ಲಿ 75ಕ್ಕೂ ಅಧಿಕ ಜನರ ಹತ್ಯೆ!

Iran Protest

ಟೆಹ್ರಾನ್: ಯುವತಿ ಮಹ್ಸಾ ಅಮಿನಿ ಸಾವಿನ ಬಳಿಕ ಇರಾನ್‌ನಲ್ಲಿ ಹಿಜಾಬ್ ವಿರೋಧಿ (Anti-Hijab) ಪ್ರತಿಭಟನೆಯು ತೀವ್ರಗೊಂಡಿದೆ. ಭದ್ರತಾ ಪಡೆಗಳು ಪ್ರತಿಭಟನಾಕಾರರ ನಡುವಿನ ಸಂಘರ್ಷದಲ್ಲಿ 75 ಜನರನ್ನು ಹತ್ಯೆ ಮಾಡಲಾಗಿದೆ. ಹಿಜಾಬ್ ವಿರೋಧಿಸಿ ನಡೆಯುತ್ತಿರುವ ಪ್ರತಿಭಟನೆಯು 12ನೇ ದಿನಕ್ಕೆ ಕಾಲಿಟ್ಟಿದೆ. ಮಂಗಳವಾರವು ಪ್ರತಿಭಟನಾಕಾರರು ಮತ್ತು ಪೊಲೀಸರು ಮಧ್ಯೆ ತೀವ್ರ ಸಂಘರ್ಷ ಏರ್ಪಟ್ಟಿತ್ತು. ಇತ್ತೀಚಿನ ವರ್ಷಗಳಲ್ಲಿ ಇರಾನ್ ಎದುರಿಸುತ್ತಿರುವ ಅತಿದೊಡ್ಡ ಪ್ರತಿಭಟನೆ ಇದಾಗಿದೆ. ವಿಶೇಷ ಏನೆಂದರೆ, ಈ ಪ್ರತಿಭಟನೆಯನ್ನು ಮಹಿಳೆಯರೇ ಮುನ್ನಡೆಸುತ್ತಿದ್ದಾರೆ.

ತುರ್ಕಿಸ್ ಸಿಂಗರ್ ಮೆಲೆಕ್ ಮೋಸ್ಸೋ ಅವರು ಹಿಜಾಬ್ ವಿರೋಧಿ ಪ್ರತಿಭಟನೆಗೆ ಸೇರ್ಪಡೆಯಾಗಿರುವ ಹೊಸ ಸೆಲೆಬ್ರಿಟಿಯಾಗಿದ್ದಾರೆ. ಖ್ಯಾತ ಸಿಂಗರ್ ಮೆಲೆಕ್ ಅವರು ಪ್ರದರ್ಶನ ನೀಡುತ್ತಿದ್ದ ವೇದಿಕೆಯ ಮೇಲೆ ತಮ್ಮ ಕೂದಲನ್ನು ಕತ್ತರಿಸಿಕೊಳ್ಳುವ ಮೂಲಕ ಹಿಜಾಬ್ ವಿರೋಧಿ ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಪ್ರತಿಭಟನಾಕಾರರ ಹತ್ಯೆಗಳು ನಡೆಯುತ್ತಿದ್ದರೂ ಜನರು ಹೆದರುತ್ತಿಲ್ಲ. ಬದಲಿಗೆ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಹಿಜಾಬ್ ವಿರೋಧಿ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಈ ಪ್ರತಿಭಟನೆಗಳನ್ನು ಹತ್ತಿಕ್ಕಲು ಭದ್ರತಾ ಪಡೆಗಳು ಮತ್ತು ಪೊಲೀಸರು, ಟಿಯರ್ ಗ್ಯಾಸ್ ಮತ್ತು ಶಸ್ತ್ರಾಸ್ತ್ರಗಳನ್ನು ಕೂಡ ಬಳಸುತ್ತಿದ್ದಾರೆ. ಇರಾನ್ ರಾಜಧಾನಿ ಟೆಹ್ರಾನ್, ತಬ್ರಿಜ್, ಕರಾಜ್, ಕೋಮ್, ಯಾಜ್ದ್ ಸೇರಿದಂತೆ ಬಹಳಷ್ಟು ನಗರಗಳಿಗೆ ಈ ಪ್ರತಿಭಟನೆ ವ್ಯಾಪಿಸಿಕೊಂಡಿದೆ.

ಯಾಕೆ ಪ್ರತಿಭಟನೆ?
22 ವರ್ಷದ ಮಹ್ಸಾ ಅಮಿನಿ ಎಂಬ ಯುವತಿ ಸರಿಯಾಗಿ ಹಿಜಾಬ್ ಧರಿಸಿಲ್ಲ ಎಂಬ ಕಾರಣಕ್ಕೆ ಮೊರಾಲಿಟಿ ಪೊಲೀಸರು ಹಿಗ್ಗಾಮುಗ್ಗಾ ಥಳಿಸಿದ್ದರು. ಈ ಹಲ್ಲೆಯಿಂದ ಚೇತರಿಸಿಕೊಳ್ಳದ ಆಕೆ ಸಾವಿಗೀಡಾಗಿದ್ದಳು. ಆಕೆಯ ಮೇಲೆ ಹಲ್ಲೆ ನಡೆಸಿದ ವಿಡಿಯೋ ವೀಕ್ಷಿಸಿದ ಮಹಿಳೆಯರು, ಆಕೆಯ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಬೀದಿಗಿಳಿದು ಪ್ರತಿಭಟನೆ ನಡೆಸಲಾರಂಭಿಸಿದರು. ಬಹಳಷ್ಟು ಮಹಿಳೆಯರು ತಮ್ಮ ಕೂದಲನ್ನು ಕತ್ತರಿಸುವ ಮತ್ತು ಹಿಜಾಬ್ ಅನ್ನು ಬೆಂಕಿಗೆ ಹಾಕುವ ವಿಡಿಯೋಗಳನ್ನು ಸೋಷಿಯಲ್ ಮೀಡಿಯಾಗಳಲ್ಲಿ ಷೇರ್ ಮಾಡಿದರು. ಇದರಿಂದ ಇರಾನ್‌ನಲ್ಲಿ ಹಿಜಾಬ್ ವಿರೋಧಿ ಪ್ರತಿಭಟನೆ ವಿಸ್ತಾರಗೊಂಡಿತು. ಇರಾನ್‌ನಲ್ಲಿ 7 ವರ್ಷ ಮೇಲ್ಪಟ್ಟ ಹೆಣ್ಣು ಮಕ್ಕಳು ಹಿಜಾಬ್ ಧರಿಸಬೇಕೆಂಬ ನಿಯಮವಿದೆ.

ಇದನ್ನೂ ಓದಿ | Hadis Najafi | ಇರಾನ್‌ನಲ್ಲಿ ಹಿಜಾಬ್‌ ವಿರುದ್ಧ ಹೋರಾಡಿದ್ದಕ್ಕೆ ಮತ್ತೊಬ್ಬ ಯುವತಿಯ ಹತ್ಯೆ

Exit mobile version