ಇಸ್ಲಾಮಾಬಾದ್: ರಾಷ್ಟ್ರೀಯ ಭದ್ರತೆಯ ಹೆಸರಿನಲ್ಲಿ ದೂರವಾಣಿ ಕರೆಗಳನ್ನು ಕದ್ದಾಲಿಸುವ, ತಡೆ ಹಿಡಿಯುವ ಮತ್ತು ಪತ್ತೆಹಚ್ಚುವ ಅಧಿಕಾರವನ್ನು ಇಂಟರ್-ಸರ್ವೀಸಸ್ ಇಂಟೆಲಿಜೆನ್ಸ್ (ISI)ಗೆ ನೀಡುವ ವಿವಾದಾತ್ಮಕ ಆದೇಶವನ್ನು ಪಾಕಿಸ್ತಾನ ಸರ್ಕಾರ (Pak Govt) ಹೊರಡಿಸಿದೆ. ಇದು ಆ ದೇಶದ ಕುಖ್ಯಾತ ಗೂಢಚಾರ ಸಂಸ್ಥೆಗೆ ಅನಿಯಂತ್ರಿತ ಅಧಿಕಾರವನ್ನು ನೀಡುವ ಸಾಧ್ಯತೆಯಿದೆ ಎನ್ನುವ ಆತಂಕ ತಲೆದೋರಿದೆ.
ಈ ಆದೇಶವು ಐಎಸ್ಐ ಸಿಬ್ಬಂದಿಗೆ ವಿವಿಧ ದೂರಸಂಪರ್ಕ ವ್ಯವಸ್ಥೆಗಳಲ್ಲಿನ ಸಂವಹನಗಳನ್ನು ಮೇಲ್ವಿಚಾರಣೆ ಮಾಡಲು ಅನುವು ಮಾಡಿಕೊಡುತ್ತದೆ. ಪಾಕಿಸ್ತಾನದ ಮಾಹಿತಿ ತಂತ್ರಜ್ಞಾನ ಮತ್ತು ದೂರಸಂಪರ್ಕ ಸಚಿವಾಲಯವು 1996ರ ಪಾಕಿಸ್ತಾನ ದೂರಸಂಪರ್ಕ (ಮರುಸಂಘಟನೆ) ಕಾಯ್ದೆಯ ಅಡಿಯಲ್ಲಿ ಅಧಿಸೂಚನೆ ಹೊರಡಿಸಿದೆ.
ಅಧಿಸೂಚನೆಯಲ್ಲಿ ಏನಿದೆ?
“ಫೆಡರಲ್ ಸರ್ಕಾರವು ರಾಷ್ಟ್ರೀಯ ಭದ್ರತೆಯ ಹಿತದೃಷ್ಟಿಯಿಂದ ಮತ್ತು ಅಪರಾಧ ಚಟುವಟಿಕೆಗಳನ್ನು ನಿಯಂತ್ರಿಸುವ ಉದ್ದೇಶದಿಂದ ದೂರವಾಣಿ ಕರೆಗಳು ಮತ್ತು ಸಂದೇಶಗಳನ್ನು ತಡೆಹಿಡಿಯುವ ಅಥವಾ ಕಾಯ್ದೆಯ ಸೆಕ್ಷನ್ 54ರ ಅಡಿಯಲ್ಲಿ ಸೂಚಿಸಲಾದ ಯಾವುದೇ ದೂರಸಂಪರ್ಕ ವ್ಯವಸ್ಥೆಯ ಕರೆಗಳನ್ನು ಆಲಿಸುವ ಅಧಿಕಾರವನ್ನು ಇಂಟರ್-ಸರ್ವೀಸಸ್ ಇಂಟೆಲಿಜೆನ್ಸ್‌ನ 18ನೇ ಶ್ರೇಣಿಗಿಂತ ಕಡಿಮೆಯಿಲ್ಲದ ಅಧಿಕಾರಿಗಳಿಗೆ ನೀಡುತ್ತಿದ್ದೇವೆʼʼ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
2023ರ ಇಸ್ಲಾಮಾಬಾದ್ ನ್ಯಾಯಾಲಯದ ತೀರ್ಪಿನ ಹಿನ್ನಲೆಯಲ್ಲಿ ಈ ಆದೇಶವನ್ನು ಹೊರಡಿಸಲಾಗಿದೆ. ಬುಶ್ರಾ ಬೀಬಿ ಅವರ ಅರ್ಜಿಯ ವಿಚಾರಣೆಯ ಸಂದರ್ಭದಲ್ಲಿ ಅಟಾರ್ನಿ ಜನರಲ್ ಮನ್ಸೂರ್ ಉಸ್ಮಾನ್ ಅವಾನ್ ಈ ತೀರ್ಮಾನವನ್ನು ಪ್ರಕಟಿಸಿದರು. ಈ ಕ್ರಮಗಳನ್ನು ಕಾನೂನುಬದ್ಧಗೊಳಿಸಲು ಪಾಕಿಸ್ತಾನ ಸರ್ಕಾರ ಗೆಜೆಟ್ ಅಧಿಸೂಚನೆಯನ್ನೂ ಹೊರಡಿಸಿದೆ. ಈ ಆದೇಶಕ್ಕೆ ಈಗಾಗಲೇ ಆಕ್ರೋಶ ವ್ಯಕ್ತವಾಗಿದೆ.
ಐಎಸ್ಐ ಮತ್ತು ಮಿಲಿಟರಿಗೆ ಅನಿಯಂತ್ರಿತ ಅಧಿಕಾರವನ್ನು ನೀಡುವುದು ಪ್ರಜಾಪ್ರಭುತ್ವದ ಬೇರನ್ನು ದುರ್ಬಲಗೊಳಿಸುತ್ತದೆ ಮತ್ತು ಭವಿಷ್ಯದ ಸರ್ಕಾರಗಳಿಗೆ ಹೆಚ್ಚು ಸವಾಲುಗಳನ್ನು ಒಡ್ಡುವ ಸಾಧ್ಯತೆ ಇರುತ್ತದೆ ಎಂದು ಹಲವರು ವಾದಿಸುತ್ತಾರೆ. ಪಿಎಂಎಲ್ಎನ್ (Pakistan Muslim League-Nawaz) ಕಾನೂನುಬದ್ಧಗೊಳಿಸಿದ ಈ ನಿಯಮ ಕಾನೂನುಬಾಹಿರ ಕೃತ್ಯ. ಸರ್ಕಾರ ಐಎಸ್ಐ ಮತ್ತು ಸೈನ್ಯದಿಂದ ನಿರ್ಬಂಧಿಸಲ್ಪಟ್ಟಿದೆ. ಇದೇ ಕಾರಣಕ್ಕೆ ಇಂತಹ ನಿಯಮ ಜಾರಿಗೊಳಿಸಲಾಗುತ್ತಿದೆ. ಇದು ಭವಿಷ್ಯದಲ್ಲಿ ಯಾವುದೇ ಪ್ರಜಾಪ್ರಭುತ್ವ ಸರ್ಕಾರಕ್ಕೆ ಹೆಚ್ಚಿನ ಸಮಸ್ಯೆಗಳನ್ನು ಸೃಷ್ಟಿಸುತ್ತದೆ ಎಂದು ಕೆಲವರು ಟೀಕಿಸಿದ್ದಾರೆ.
ನಾಯಕರು ಹೇಳಿದ್ದೇನು?
ಐಎಸ್ಐಗೆ ನೀಡಲಾಗುತ್ತಿರುವ ಅಧಿಕಾರದ ಬಗ್ಗೆ ಪ್ರತಿಕ್ರಿಯಿಸಿದ ಪಿಟಿಐ (Pakistan Tehreek-e-Insaf) ನಾಯಕ ಒಮರ್ ಅಯೂಬ್ ಖಾನ್ ಈ ನಡೆಯನ್ನು ತೀವ್ರವಾಗಿ ಟೀಕಿಸಿದ್ದಾರೆ. ಅಧಿಕಾರದಿಂದ ಹೊರಬಂದ ನಂತರ ತಮ್ಮ ನಾಯಕರ ವಿರುದ್ಧ ಅದೇ ಕ್ರಮ ಕೈಗೊಳ್ಳಲಾಗುವುದ ಎಂದು ಸರ್ಕಾರ ಮತ್ತು ಮಿತ್ರಪಕ್ಷಗಳು ತಿಳಿದುಕೊಳ್ಳಬೇಕು ಎಂದು ಹೇಳಿದ್ದಾರೆ.
ಇದನ್ನೂ ಓದಿ: Breast Milk Bank: ಪಾಕಿಸ್ತಾನದಲ್ಲಿ ಸ್ಥಾಪನೆಯಾದ ಎದೆ ಹಾಲಿನ ಬ್ಯಾಂಕ್ ಮುಚ್ಚಿಸಿದ ಮುಸ್ಲಿಂ ಧರ್ಮ ಗುರುಗಳು!
ಈ ವರ್ಷದ ಮಾರ್ಚ್‌ನಲ್ಲಿ ಆರು ಹೈಕೋರ್ಟ್ ನ್ಯಾಯಾಧೀಶರು ಬೇಹುಗಾರಿಕೆ ಸಂಸ್ಥೆ ಐಎಸ್‌ಐ ನ್ಯಾಯಾಂಗ ವಿಷಯಗಳಲ್ಲಿ ಹಸ್ತಕ್ಷೇಪ ಮಾಡುತ್ತಿದೆ ಮತ್ತು ರಹಸ್ಯ ಕಣ್ಗಾವಲು, ಅಪಹರಣ, ಮಲಗುವ ಕೋಣೆಗಳಲ್ಲಿ ಕ್ಯಾಮೆರಾಗಳನ್ನು ಸ್ಥಾಪಿಸುವುದು ಮತ್ತು ಅವರ ಕುಟುಂಬ ಸದಸ್ಯರಿಗೆ ಚಿತ್ರಹಿಂಸೆಯಂತಹ ಅನಾಗರಿಕ ತಂತ್ರಗಳನ್ನು ಆಶ್ರಯಿಸುತ್ತಿದೆ ಎಂದು ಆರೋಪಿಸಿದ್ದರು. ಈ ಮಧ್ಯೆ ಹೊಸ ಆದೇಶ ಹೊರ ಬಿದ್ದಿದೆ.