Site icon Vistara News

ಇಮ್ರಾನ್‌ ವಿರುದ್ಧ ಭಯೋತ್ಪಾದನೆ ವಿರೋಧಿ ಕಾನೂನಿನಡಿ ಕೇಸ್‌, ಬಂಧನ ಸಾಧ್ಯತೆ

Imran Khan

ಇಸ್ಲಾಮಾಬಾದ್‌: ಪಾಕಿಸ್ತಾನದ ಮಾಜಿ ಪ್ರಧಾನಿ, ಮಾಜಿ ಕ್ರಿಕೆಟಿಗ ಇಮ್ರಾನ್‌ ಖಾನ್‌ ವಿರುದ್ಧ ಭಯೋತ್ಪಾದನೆ ವಿರೋಧಿ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಸದ್ಯವೇ ಬಂಧಿಸುವ ಸಾಧ್ಯತೆಗಳಿವೆ.

ಆಗಸ್ಟ್‌ 20 ರಂದು ನಡೆದ ಸಾರ್ವಜನಿಕ ರ‍್ಯಾಲಿಯಲ್ಲಿ ಮಾತನಾಡುತ್ತಾ, ಇಬ್ಬರು ಹಿರಿಯ ಪೊಲೀಸ್‌ ಅಧಿಕಾರಿಗಳಿಗೆ ಹಾಗೂ ನ್ಯಾಯಾಧೀಶರಿಗೆ ಜೀವ ಬೆದರಿಕೆಯೊಡ್ಡಿದ್ದಾರೆ ಎಂದು ಆರೋಪಿಸಿ ಈ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಯಾವುದೇ ಕ್ಷಣದಲ್ಲಿಯಾದರೂ ಅವರನ್ನು ಬಂಧಿಸುವ ಸಾಧ್ಯತೆಗಳಿವೆ.

ಇತ್ತೀಚೆಗೆ ಭಾರತವನ್ನು ಹೊಗಳಿದ ಅವರನ್ನು ಬಂಧಿಸಲು ಪಾಕ್‌ ಸರ್ಕಾರ ಹೊಂಚು ಹಾಕುತ್ತಲೇ ಇತ್ತು. ಈಗಾಗಲೇ ನಿಷೇಧಿತ ನಿಧಿ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಅವರಿಗೆ ನೋಟಿಸ್‌ ನೀಡಿದೆ. ಅವರು ಅದಕ್ಕೆ ಉತ್ತರ ನೀಡಿಲ್ಲವೆಂದು ಬಂಧಿಸಲು ಸಿದ್ಧತೆ ಕೂಡ ನಡೆಸಿದೆ. ಇದರ ಬೆನ್ನಲ್ಲೇ ಭಾನುವಾರ ಭಯೋತ್ಪಾದನೆ ವಿರೋಧಿ ಕಾನೂನಿನ ಅಡಿಯಲ್ಲಿ (ಎಟಿಎ) ಎಫ್ಐ‌ಆರ್‌ ದಾಖಲಿಸಿಕೊಳ್ಳಲಾಗಿದೆ. ಅವರ ಭಾಷಣದ ನೇರ ಪ್ರಸಾರವನ್ನು ನಿರ್ಬಂಧಿಸಲಾಗಿದೆ.

ಪಿಟಿಐ ಪಕ್ಷದ ಮುಖ್ಯಸ್ಥರಾಗಿರುವ ಇಮ್ರಾನ್‌ ಖಾನ್‌ ವ್ಯವಸ್ಥೆಯನ್ನು ಬುಡಮೇಲು ಮಾಡಲು ಹೊರಟಿದ್ದಾರೆ. ಬೆದರಿಕೆಯೊಡ್ಡುವ ಮಾತುಗಳನ್ನಾಡುತ್ತಾ ಜನರನ್ನು ಎತ್ತಿಕಟ್ಟುತ್ತಿದ್ದಾರೆ. ಅವರ ವಿರುದ್ಧ ಕ್ರಮ ತೆಗೆದುಕೊಳ್ಳಲು ನಿರ್ಧರಿಸಲಾಗಿದೆ ಎಂದು ಪಾಕ್‌ ಗೃಹ ಸಚಿವ ರಾಣ ಸನವುಲ್ಲಾ ಭಾನುವಾರ ಹೇಳಿಕೆ ನೀಡಿದ ಬೆನ್ನಲ್ಲೇ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ತಮ್ಮ ಬೆಂಬಲಿಗ, ಪಿಟಿಐ ಪಕ್ಷದ ಶಹಭಾಜ್‌ ಗಿಲ್‌ ಅವರನ್ನು ದೇಶದ್ರೋಹದ ಪ್ರಕರಣದಲ್ಲಿ ಬಂಧಿಸಿರುವುದರ ವಿರುದ್ಧ ಮಾತನಾಡಿದ್ದ ಇಮ್ರಾನ್‌ ಖಾನ್‌, ಇಬ್ಬರು ಹಿರಿಯ ಪೊಲೀಸ್‌ ಅಧಿಕಾರಿ, ಮಹಿಳಾ ನ್ಯಾಯಾಧೀಶೆ ಹಾಗೂ ಚುನಾವಣಾ ಆಯೋಗದ ವಿರುದ್ಧ ಕಾನೂನು ಸಮರ ನಡೆಸಲಾಗುವುದು ಎಂದು ಘೋಷಿಸಿದ್ದರು. ಇಮ್ರಾನ್‌ ಖಾನ್‌ ನಿರಂತರವಾಗಿ ಸೇನೆ ಮತ್ತು ವ್ಯವಸ್ಥೆಯ ವಿರುದ್ಧ ಮಾತನಾಡುತ್ತಿದ್ದಾರೆ. ಅವರ ವಿರುದ್ಧ ಕಾನೂನು ಕ್ರಮ ಅನಿವಾರ್ಯವಾಗಿದೆ ಎಂದು ಸರ್ಕಾರ ಹೇಳಿದೆ.

ಇದನ್ನೂ ಓದಿ| Amrit Mahotsav | ತಾಯ್ನಾಡನ್ನು ತೆಗಳಿ ಭಾರತವನ್ನು ಹೊಗಳಿದ ಪಾಕ್‌ ಮಾಜಿ ಪ್ರಧಾನಿ ಇಮ್ರಾನ್‌ ಖಾನ್!

Exit mobile version