Site icon Vistara News

Pakistan Army: ಪಾಕಿಸ್ತಾನ ಸೇನೆಯಲ್ಲಿ ಅಲ್ಪಸಂಖ್ಯಾತ ಸಮುದಾಯದ ಮೊದಲ ಮಹಿಳಾ ಬ್ರಿಗೇಡಿಯರ್ ಆಗಿ ಇತಿಹಾಸ ಬರೆದ ಡಾ. ಹೆಲೆನ್ ಮೇರಿ

Pakistan Army

Pakistan Army

ಇಸ್ಲಾಮಾಬಾದ್‌: ಪಾಕಿಸ್ತಾನ ಸೈನ್ಯ (Pakistan Army)ದ ಮೆಡಿಕಲ್ ಕಾರ್ಪ್ಸ್‌ (Medical Corps)ನಲ್ಲಿ ಸೇವೆ ಸಲ್ಲಿಸುತ್ತಿರುವ ಡಾ.ಹೆಲೆನ್ ಮೇರಿ ರಾಬರ್ಟ್ಸ್ (Dr Helen Mary Roberts) ಅವರು ಮುಸ್ಲಿಂ ಬಹುಸಂಖ್ಯಾತ ದೇಶದಲ್ಲಿ ಬ್ರಿಗೇಡಿಯರ್ ಶ್ರೇಣಿಯನ್ನು ಅಲಂಕರಿಸಿದ ಕ್ರಿಶ್ಚಿಯನ್ ಮತ್ತು ಅಲ್ಪಸಂಖ್ಯಾತ ಸಮುದಾಯದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಆಯ್ಕೆ ಮಂಡಳಿಯಿಂದ ಬ್ರಿಗೇಡಿಯರ್ ಮತ್ತು ಪೂರ್ಣ ಕರ್ನಲ್‌ಗಳಾಗಿ ಬಡ್ತಿ ಪಡೆದ ಪಾಕಿಸ್ತಾನ ಸೇನಾ ಅಧಿಕಾರಿಗಳ ಪೈಕಿ ಡಾ.ಹೆಲೆನ್ ಮೇರಿ ರಾಬರ್ಟ್ಸ್ ಕೂಡ ಸೇರಿದ್ದಾರೆ ಎಂದು ವರದಿಯೊಂದು ತಿಳಿಸಿದೆ. ಪ್ರಧಾನ ಮಂತ್ರಿ ಶೆಹಬಾಜ್ ಷರೀಫ್ ಅವರು ಬ್ರಿಗೇಡಿಯರ್ ಆಗಿ ಬಡ್ತಿ ಪಡೆದ ಹೆಲೆನ್ ಅವರನ್ನು ಅಭಿನಂದಿಸಿದ್ದಾರೆ. ʼʼಇಡೀ ದೇಶವು ಅವರ ಬಗ್ಗೆ ಮತ್ತು ಅಲ್ಪಸಂಖ್ಯಾತ ಸಮುದಾಯಗಳ ಅವರಂತಹ ಸಾವಿರಾರು ಶ್ರಮಜೀವಿ ಮಹಿಳೆಯರ ಬಗ್ಗೆ ಹೆಮ್ಮೆ ಪಡುತ್ತದೆʼʼ ಎಂದು ಹೇಳಿದ್ದಾರೆ.

ಅಭಿನಂದನೆ

“ಪಾಕಿಸ್ತಾನ ಸೇನೆಯಲ್ಲಿ ಬ್ರಿಗೇಡಿಯರ್ ಆಗಿ ಬಡ್ತಿ ಪಡೆದ ಅಲ್ಪಸಂಖ್ಯಾತ ಮೂಲದ ಮೊದಲ ಮಹಿಳೆ ಎಂಬ ಗೌರವವನ್ನು ಪಡೆದ ಬ್ರಿಗೇಡಿಯರ್ ಹೆಲೆನ್ ಮೇರಿ ರಾಬರ್ಟ್ಸ್ ಅವರನ್ನು ನಾನು ಮತ್ತು ರಾಷ್ಟ್ರವು ಅಭಿನಂದಿಸುತ್ತದೆ” ಎಂದು ಅವರು ತಿಳಿಸಿದರು. ಪಾಕಿಸ್ತಾನದ ಮಹಿಳೆಯರು ಯಾವುದೇ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಬಹುದು ಮತ್ತು ಯಾರಿಗೂ ಕಡಿಮೆಯಿಲ್ಲ ಎನ್ನುವುದನ್ನು ಇವರು ಸಾಬೀತುಪಡಿಸಿದ್ದಾರೆ ಎಂದೂ ಶೆಹಬಾಜ್ ಷರೀಫ್ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ. ಬ್ರಿಗೇಡಿಯರ್ ಡಾ.ಹೆಲೆನ್ ಹಿರಿಯ ರೋಗಶಾಸ್ತ್ರಜ್ಞರಾಗಿದ್ದು, 26 ವರ್ಷಗಳಿಂದ ಪಾಕಿಸ್ತಾನ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

ಕಳೆದ ವರ್ಷ ರಾವಲ್ಪಿಂಡಿಯ ಕ್ರೈಸ್ಟ್ ಚರ್ಚ್‌ನಲ್ಲಿ ನಡೆದ ಕ್ರಿಸ್ಮಸ್ ಆಚರಣೆಯ ಸಂದರ್ಭದಲ್ಲಿ ಪಾಕಿಸ್ತಾನ ಸೇನಾ ಮುಖ್ಯಸ್ಥ ಜನರಲ್ ಅಸಿಮ್ ಮುನೀರ್ ದೇಶದ ಅಭಿವೃದ್ಧಿಯಲ್ಲಿ ಅಲ್ಪಸಂಖ್ಯಾತ ಸಮುದಾಯದ ಪಾತ್ರವನ್ನು ಶ್ಲಾಘಿಸಿದ್ದರು.

ಪಾಕಿಸ್ತಾನ ಸಶಸ್ತ್ರ ಪಡೆಗಳ ಮಾಧ್ಯಮ ಮತ್ತು ಸಾರ್ವಜನಿಕ ಸಂಪರ್ಕ ವಿಭಾಗವಾದ ಇಂಟರ್ ಸರ್ವೀಸಸ್ ಪಬ್ಲಿಕ್ ರಿಲೇಶನ್ಸ್ (ISPR) “ಅರ್ಹತೆ ಮತ್ತು ರಾಷ್ಟ್ರೀಯ ಪ್ರಾತಿನಿಧ್ಯದ ಮತ್ತೊಂದು ಜೀವಂತ ಉದಾಹರಣೆ” ಎಂದು ಉಲ್ಲೇಖಿಸಿದೆ. ಬ್ರಿಗೇಡಿಯರ್ ಡಾ.ಹೆಲೆನ್ ಮೇರಿ ರಾಬರ್ಟ್ಸ್ ಅವರ ಬಡ್ತಿಗಿಂತ ಮೊದಲು, ಮೇಜರ್ ಜನರಲ್ ನಿಗರ್ ಜೋಹರ್ ಅವರು 2020ರಲ್ಲಿ ಲೆಫ್ಟಿನೆಂಟ್ ಜನರಲ್ ಹುದ್ದೆಗೆ ಬಡ್ತಿ ಪಡೆದ ಮೊದಲ ಮಹಿಳಾ ಅಧಿಕಾರಿ ಎನಿಸಿಕೊಂಡಿದ್ದರು. ಆ ಮೂಲಕ ಪುರುಷ ಪ್ರಾಬಲ್ಯದ ಪಾಕಿಸ್ತಾನ ಸೇನೆಯಲ್ಲಿ ಲಿಂಗ ಅಸಮಾನತೆಯನ್ನು ತೊಡೆದು ಹಾಕಿದ್ದರು. ನಿಗರ್ ಜೋಹರ್ ಅವರನ್ನು ಸೈನ್ಯದ ಮೊದಲ ಮಹಿಳಾ ಸರ್ಜನ್ ಜನರಲ್ ಆಗಿ ನೇಮಿಸಲಾಗಿತ್ತು.

ಇದನ್ನೂ ಓದಿ: Pakistan Prime Minster : ಪಾಕಿಸ್ತಾನದ ನೂತನ ಪ್ರಧಾನಿಯಾಗಿ ಶೆಹಬಾಜ್ ಷರೀಫ್ ಆಯ್ಕೆ

ಜನಸಂಖ್ಯೆಯ ಅಂಕಿ-ಅಂಶ

2021ರಲ್ಲಿ ಪಾಕಿಸ್ತಾನ ಬ್ಯೂರೋ ಆಫ್ ಸ್ಟ್ಯಾಟಿಸ್ಟಿಕ್ಸ್‌ ಬಿಡುಗಡೆ ಮಾಡಿದ ಮಾಹಿತಿಯ ಪ್ರಕಾರ, ದೇಶದಲ್ಲಿ ಶೇ. 96.47ರಷ್ಟು ಮುಸ್ಲಿಮರು, ಶೇ. 2.14ರಷ್ಟು ಹಿಂದೂಗಳು, ಶೇ. 1.27ರಷ್ಟು ಕ್ರಿಶ್ಚಿಯನ್ನರು, ಶೇ. 0.09ರಷ್ಟು ಅಹ್ಮದಿ ಮುಸ್ಲಿಮರು ಮತ್ತು ಶೇ. 0.02ರಷ್ಟು ಇತರರು ಇದ್ದಾರೆ.

Exit mobile version