Site icon Vistara News

Pakistan Army: ಭಾರತದ ಗಡಿಯಲ್ಲಿ ಉಗ್ರರಿಗೆ ಪಾಕ್ ಸೇನೆಯಿಂದಲೇ ತರಬೇತಿ, ಮಾರ್ಗದರ್ಶನ; ಮತ್ತೊಂದು ಕಳ್ಳಾಟ ಬಯಲು

Pakistan Army

Pakistan army seen guiding terrorists to infiltration routes in PoK

ಇಸ್ಲಾಮಾಬಾದ್:‌ ಜಮ್ಮು-ಕಾಶ್ಮೀರದಲ್ಲಿ ಇತ್ತೀಚೆಗೆ ಉಗ್ರರ ದಾಳಿಗಳು ಜಾಸ್ತಿಯಾಗಿವೆ. ಅದರಲ್ಲೂ, ನಾಗರಿಕರು ಹಾಗೂ ಸೈನಿಕರನ್ನು ಗುರಿಯಾಗಿಸಿ ಉಗ್ರರು ದಾಳಿ ನಡೆಸುತ್ತಿದ್ದಾರೆ. ಇದರ ಬೆನ್ನಲ್ಲೇ, ಉಗ್ರರಿಗೆ ನೆರವು ನೀಡುವ ಪಾಕಿಸ್ತಾನದ ಕುತಂತ್ರ ಬುದ್ಧಿಯ ಅನಾವರಣ ಆಗಿದೆ. ಹೌದು, ಜಮ್ಮು-ಕಾಶ್ಮೀರ (Jammu Kashmir) ಗಡಿ ಹಾಗೂ ಪಾಕ್‌ ಆಕ್ರಮಿತ ಕಾಶ್ಮೀರದಲ್ಲಿ ಉಗ್ರರಿಗೆ (Pakistan Terrorists) ಪಾಕಿಸ್ತಾನದ ಸೇನೆಯೇ (Pakistan Army) ತರಬೇತಿ ನೀಡುತ್ತಿದೆ. ಹಾಗೆಯೇ, ಯಾವ ಮಾರ್ಗದ ಮೂಲಕ ಭಾರತವನ್ನು ಪ್ರವೇಶಿಸಬಹುದು ಎಂಬುದರ ಬಗ್ಗೆ ಮಾರ್ಗದರ್ಶನ ನೀಡುತ್ತಿದೆ ಎಂದು ತಿಳಿದುಬಂದಿದೆ. ಹಾಗೆಯೇ, ಉಗ್ರರಿಗೆ ಪಾಕಿಸ್ತಾನದ ಸೈನಿಕರು ಮಾರ್ಗದರ್ಶನ ನೀಡುತ್ತಿರುವ ಫೋಟೊಗಳು ಕೂಡ ಲಭ್ಯವಾಗಿವೆ. ಈ ಕುರಿತು ಇಂಡಿಯಾ ಟಿವಿ ವರದಿ ಮಾಡಿದೆ.

ಹೌದು, ಪಾಕ್‌ ಆಕ್ರಮಿತ ಕಾಶ್ಮೀರದ ಗಡಿಯ ಕೊಟ್ಲಿ ಸೇರಿ ಹಲವು ಪ್ರದೇಶಗಳಲ್ಲಿ ಪಠಾಣಿ ಉಡುಪುಗಳನ್ನು ಧರಿಸಿರುವ ಉಗ್ರರಿಗೆ ಪಾಕಿಸ್ತಾನದ ಸೈನಿಕರು ತರಬೇತಿ ನೀಡುತ್ತಿರುವ, ಅವರನ್ನು ಸುರಕ್ಷಿತ ಸ್ಥಳಕ್ಕೆ ಕಳುಹಿಸುತ್ತಿರುವ ಹಾಗೂ ಭಾರತದ ಕಡೆಗೂ ನುಗ್ಗಿಸುತ್ತಿರುವ ಫೋಟೊಗಳು ಲಭ್ಯವಾಗಿವೆ. ಪಾಕ್‌ ಆಕ್ರಮಿತ ಕಾಶ್ಮೀರದಲ್ಲಿ ಉಗ್ರರಿಗೆ ಪಾಕ್‌ ಸೈನಿಕರು ತರಬೇತಿ ನೀಡುತ್ತಿರುವ ಫೋಟೊಗಳು ಲಭ್ಯವಾದ ಬೆನ್ನಲ್ಲೇ, ಅವರಿಗೆ ಮಾರ್ಗದರ್ಶನ ನೀಡುವ ಫೋಟೊಗಳು ಕೂಡ ಲಭ್ಯವಾಗಿವೆ.

“ಪಾಕಿಸ್ತಾನದ ಸೇನಾ ನೆಲೆಗಳಲ್ಲಿ, ಬಂಕರ್‌ಗಳಲ್ಲಿಯೇ ಉಗ್ರರಿಗೆ ಸೈನಿಕರು ಆಶ್ರಯ ನೀಡಿದ್ದಾರೆ. ಅವರನ್ನು ಗಡಿಯ ತನಕ ಕರೆದುಕೊಂಡು ಬಂದು, ಭಾರತದೊಳಗೆ ನುಸುಳಲು ಯಾವ ಮಾರ್ಗದ ಮೂಲಕ ತೆರಳಬೇಕು ಎಂಬುದಾಗಿ ಮಾರ್ಗದರ್ಶನ ನೀಡಿದ್ದಾರೆ” ಎಂದು ಮೂಲಗಳು ತಿಳಿಸಿವೆ. ಇನ್ನು, ಪಾಕಿಸ್ತಾನದ ಎಸ್‌ಎಸ್‌ಜಿ ಕಮಾಂಡೋಗಳೇ ಉಗ್ರರಿಗೆ ದಾರಿ ತೋರಿಸುತ್ತಿರುವ ಫೋಟೊಗಳು ಕೂಡ ಬಹಿರಂಗವಾಗಿವೆ.

ಉಗ್ರರ ಬೇಟೆಗೆ ಭಾರತದ ಸೇನೆ ಸಜ್ಜು

ಜಮ್ಮು-ಕಾಶ್ಮೀರದಲ್ಲಿ ಉಗ್ರರನ್ನು ಸದೆಬಡಿಯಲು ಭಾರತೀಯ ಸೇನೆ ಸಂಪೂರ್ಣವಾಗಿ ಸಜ್ಜಾಗಿದೆ. ಉಗ್ರರನ್ನು ಮಟ್ಟ ಹಾಕುವ ಪಣ ತೊಟ್ಟಿರುವ ಭಾರತೀಯ ಸೇನೆ 500ಕ್ಕೂ ಹೆಚ್ಚು ಪ್ಯಾರಾ ಕಮಾಂಡೋಗಳನ್ನು ಜಮ್ಮುವಿನಲ್ಲಿ ನಿಯೋಜಿಸಿದೆ. ಈ ಪ್ಯಾರಾ ಕಮಾಂಡೋಗಳು ಪಾಕಿಸ್ತಾನ ಮೂಲದ ಉಗ್ರರ ಬೇಟೆಯಲ್ಲಿ ತೊಡಗಿದ್ದಾರೆ.

ಜಮ್ಮು ಮತ್ತು ಕಾಶ್ಮೀರದ ಗಡಿ ಪ್ರದೇಶದಲ್ಲಿ ಕೆಲವು ದಿನಗಳಿಂದ ಉಗ್ರರ ಉಪಟಳ ದಿನೇ ದಿನೇ ಹೆಚ್ಚಾಗುತ್ತಿದೆ. ಒಂದರ ಹಿಂದೆ ಒಂದರಂತೆ ನಿರಂತರ ದಾಳಿಗಳು ನಡೆಯುತ್ತಲೇ ಇವೆ. ಈ ಪ್ರದೇಶದಲ್ಲಿ 50-55 ಉಗ್ರರು ಬೀಡು ಬಿಟ್ಟಿರುವ ಶಂಕೆ ವ್ಯಕ್ತವಾಗಿದೆ. ಹೀಗಾಗಿ ಈ ಪ್ರದೇಶಗಳಲ್ಲಿ ಸೇನೆ ಭದ್ರತೆಯನ್ನು ಹೆಚ್ಚಿಸಿದೆ. ಇನ್ನು ಕಳೆದ ವಾರದಿಂದ ನಡೆಯುತ್ತಿರುವ ಉಗ್ರರ ದಾಳಿ ಹಿಂದೆ ಪಾಕಿಸ್ತಾನ ನಿವೃತ ಸೈನಿಕರು ಅಥವಾ ಸೇನಾ ತರಬೇತಿ ಇರುವ ಉಗ್ರರ ಕೈವಾಡ ಇರುವ ಬಗ್ಗೆ ಭಾರತೀಯ ಗುಪ್ತಚರ ಇಲಾಖೆ ಶಂಕೆ ವ್ಯಕ್ತಪಡಿಸಿದೆ.

ಇದನ್ನೂ ಓದಿ: Pakistan Crisis: ಲೀಟರ್‌ ಪೆಟ್ರೋಲ್‌ಗೆ 275 ರೂ., ಸಾಲ 79 ಲಕ್ಷ ಕೋಟಿ ರೂ.; ಪಾಕ್‌ ಸಂಪೂರ್ಣ ದಿವಾಳಿ

Exit mobile version