Site icon Vistara News

Pakistan Army: ಬಂದೂಕು ಬಿಟ್ಟು ಸಲಿಕೆ ಹಿಡಿದ ಸೈನಿಕರು! ಪಾಕ್‌ನಲ್ಲಿ ಸೇನೆಯಿಂದಲೇ ಕೃಷಿ, 10 ಲಕ್ಷ ಎಕರೆಯಲ್ಲಿ ವ್ಯವಸಾಯ!

Pakistan Army will cultivate agriculture over 10 lakh acre farm land

ನವದೆಹಲಿ: ಆರ್ಥಿಕ ದಿವಾಳಿ ಎದ್ದಿರುವ ಪಾಕಿಸ್ತಾನದಲ್ಲಿ (Pakistan) ಈಗ ಯಾವ ವ್ಯವಸ್ಥೆಯೂ ಸರಿ ಇಲ್ಲ. ಆಹಾರಕ್ಕಾಗಿ ಹಾಹಾಕಾರವಿದೆ(Scarcity of Food Grains). ತೀರ್ಥಯಾತ್ರೆ ವೀಸಾದಲ್ಲಿ ವಿದೇಶಗಳಿಗೆ ಹೋಗುತ್ತಿರುವ ಜನರು ಭಿಕ್ಷಾಟನೆಗೆ ತೊಡಗುತ್ತಿದ್ದಾರೆ. ಈ ವಿಷಮ ಪರಿಸ್ಥಿತಿಯಲ್ಲಿ ಪಾಕಿಸ್ತಾನ ಸೇನೆ (Pakistan Army) ಮತ್ತೊಂದು ಸಾಹಸಕ್ಕೆ ಮುಂದಾಗಿದೆ. ಆಗಾಗ ನಾಗರಿಕ ಸರ್ಕಾರವನ್ನು ಕಿತ್ತೊಗೆದು ತಾನೇ ಆಡಳಿತ ನಡೆಸುವ ಶಕ್ತಿಶಾಲಿ ಪಾಕಿಸ್ತಾನ ಆರ್ಮಿ ಈಗ ಕೃಷಿ ಮಾಡಲು ಹೊರಟಿದೆ! (Agriculture By Army) ಹೌದು, ಪಾಕ್ ಯೋಧರು ಇನ್ನು ಟ್ಯಾಂಕ್ಸ್ ಬಿಟ್ಟು ಟ್ರಾಕ್ಟರ್ (Tanks to Tractor) ಹತ್ತಲಿದ್ದಾರೆ. ಸುಮಾರು 10 ಲಕ್ಷ ಎಕರೆ ಭೂಮಿಯಲ್ಲಿ ಪಾಕ್ ಆರ್ಮಿ ಕೃಷಿ ಮಾಡಲು ಹೊರಟಿದೆ. ಪಾಕಿಸ್ತಾನದ ಸೇನೆ ಈಗ ಗಡಿ ಕಾಯುವುದರ ಜತೆಗೆ ತನ್ನ ಜನರ ಹೊಟ್ಟೆಗೆ ಹಿಟ್ಟು ಕೂಡ ಒದಗಿಸುವ ಕೆಲಸಕ್ಕೆ ಮುಂದಾಗಿದೆ.

ನಿಕೈ ಏಷ್ಯಾ ವರದಿಯ ಪ್ರಕಾರ, ಬಡತನದಿಂದ ಬಳಲುತ್ತಿರುವ ಜನಸಾಮಾನ್ಯರಿಗೆ ಆಹಾರವನ್ನು ಬೆಳೆಯಲು ಪಾಕಿಸ್ತಾನದ ಸೈನ್ಯವು ಸರ್ಕಾರಿ ಸ್ವಾಮ್ಯದ ದೊಡ್ಡ ಪ್ರಮಾಣದ ಭೂಮಿಯನ್ನು ತನ್ನ ಸ್ವಾಧೀನಕ್ಕೆ ತೆಗೆದುಕೊಳ್ಳುತ್ತಿದೆ. ಆದಾಗ್ಯೂ, ಈ ಕ್ರಮವು ಆರ್ಥಿಕ ಕುಸಿತವನ್ನು ಎದುರಿಸುತ್ತಿರುವ ದೇಶದಲ್ಲಿ ಮಿಲಿಟರಿಯ “ವ್ಯಾಪಕ ಉಪಸ್ಥಿತಿ” ಬಗ್ಗೆ ಆತಂಕಕ್ಕೂ ಕಾರಣವಾಗಿದೆ.

ದಿಲ್ಲಿ ನಗರಕ್ಕಿಂತ ಮೂರು ಪಟ್ಟು ದೊಡ್ಡ ಜಮೀನು

ಸಿವಿಲ್-ಮಿಲಿಟರಿ ಜಂಟಿ ಹೂಡಿಕೆ ಸಂಸ್ಥೆಯಿಂದ ಈ ವರ್ಷದ ಆರಂಭದಲ್ಲಿ ಪ್ರಾರಂಭಿಸಲಾದ ಹೊಸ ಆಹಾರ ಭದ್ರತೆ ಕ್ರಮವು, ಗುತ್ತಿಗೆ ಪಡೆದ ಸರ್ಕಾರಿ ಭೂಮಿಯಲ್ಲಿ ಸೈನ್ಯ ನಡೆಸುವ ಕೃಷಿ ಮೂಲಕ ಬೆಳೆ ಉತ್ಪಾದನೆಯನ್ನು ಹೆಚ್ಚಿಸಲು ಯೋಜಿಸಿದೆ. ಈ ಪ್ಲ್ಯಾನ್ ಪ್ರಕಾರ, ಸೇನೆಯು ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ ಸುಮಾರು 10 ಲಕ್ಷ ಎಕರೆ ಕೃಷಿ ಭೂಮಿಯನ್ನು ತನ್ನ ವಶಕ್ಕೆ ಪಡೆದುಕೊಳ್ಳಲಿದೆ. 10 ಲಕ್ಷ ಎಕರೆ ಭೂಮಿ ಎಂದರೆ, ಭಾರತದ ರಾಜಧಾನಿ ದಿಲ್ಲಿ ಗಾತ್ರಕ್ಕಿಂತ ಮೂರು ಪಟ್ಟು ಹೆಚ್ಚು ಎಂದು ಹೇಳಬಹುದು.

ನೀರು ಉಳಿತಾಯ ಮತ್ತು ಅತ್ಯುತ್ತಮ ಇಳುವರಿಯನ್ನು ನೀಡುವ ಭರವಸೆಯನ್ನು ಈ ಪ್ಲ್ಯಾನ್ ಹೊಂದಿದೆ. ಏರುತ್ತಿರುವ ಆಹಾರ ಸಾಮಾಗ್ರಿಗಳ ಬೆಲೆ ಮತ್ತು ಕಡಿಮೆಯಾಗುತ್ತಿರುವ ವಿದೇಶಿ ವಿನಿಮಯದ ನಡುವೆ ಸೇನೆಯು ಇಂಥದೊಂದು ಕಾರ್ಯಕ್ರಮವನ್ನು ಹಾಕಿಕೊಂಡಿರುವುದು ಪಾಕಿಸ್ತಾನಿಗಳಿಗೆ ಹೊಸ ಭರವಸೆ ನೀಡಿದೆ. ದಾಖಲೆಗಳ ಪ್ರಕಾರ, ಸೇನೆಗೆ 30 ವರ್ಷಗಳ ಕಾಲ ಭೂಮಿಯನ್ನು ಲೀಸ್‌ಗೆ ನೀಡಲಾಗಿದೆ. ಈ ಭೂಮಿಯಲ್ಲಿ ಸೇನೆಯು ಗೋಧಿ, ಹತ್ತಿ, ಕಬ್ಬು ಮತ್ತು ತರಕಾರಿ, ಹಣ್ಣುಗಳನ್ನು ಬೆಳೆಯಲಿದೆ.

ಈ ಸುದ್ದಿಯನ್ನೂ ಓದಿ: ಪಾಕ್‌ನಿಂದ ಭಯೋತ್ಪಾದನೆ, ಕತ್ತೆಗಳ ಬಳಿಕ ಭಿಕ್ಷುಕರ ಎಕ್ಸ್‌ಪೋರ್ಟ್! ವಿದೇಶಿ ಜೈಲುಗಳಲ್ಲಿ ಪಾಕಿಸ್ತಾನದ ಬೆಗ್ಗರ್ಸ್

ಈ ಕೃಷಿಯಿಂದ ಬರುವ ಲಾಭದಲ್ಲಿ ಶೇ.20ರಷ್ಟು ಹಣವನ್ನು ಕೃಷಿ ಸಂಶೋಧನಾ ಮತ್ತು ಅಭಿವೃದ್ಧಿಗೆ ಬಳಸಲು ಯೋಜಿಸಲಾಗುತ್ತಿದೆ. ಉಳಿದ ಲಾಭದ ಹಣವನ್ನು ಸೇನೆ ಮತ್ತು ರಾಜ್ಯ ಸರ್ಕಾಗಳ ನಡುವೆ ಸಮನಾಗಿ ಹಂಚಲಾಗುವುದು ಎಂದು ನಿಕೈ ಏಷ್ಯಾ ಸೋರಿಕೆಯಾದ ಸರ್ಕಾರಿ ದಾಖಲೆಗಳನ್ನು ಉಲ್ಲೇಖಿಸಿ ವರದಿ ಮಾಡಿದೆ. ಆದರೆ, ಪಾಕ್ ಆರ್ಮಿಯು ಈ ಯೋಜನೆಯ ಕುರಿತು ಸಾಕಷ್ಟು ಸವಾಲುಗಳು ಮತ್ತು ಟೀಕೆಯನ್ನು ಎದುರಿಸುತ್ತಿವೆ.

ಪಾಕ್ ಆರ್ಮಿ ವಿರುದ್ಧ ಟೀಕೆ

ಪಾಕಿಸ್ತಾನದಲ್ಲಿ ಈಗಾಗಲೇ ಶಕ್ತಿಶಾಲಿಯಾಗಿರುವ ಸೇನೆಯು, ಕೃಷಿ ಮೂಲಕ ಲಾಭ ಮಾಡಿಕೊಳ್ಳುವ ಮೂಲಕ ಪಾಕಿಸ್ತಾನದ 2.5 ಕೋಟಿ ಭೂ ರಹಿತ ಕೃಷಿ ಕಾರ್ಮಿಕರು ತೊಂದರೆಗೆ ಸಿಲುಕಿಸಲಿದೆ ಎಂದು ವಿಶ್ಲೇಷಣೆ ಮಾಡಲಾಗುತ್ತಿದೆ. ಜಮೀನು ಅನ್ನು ಸೇನೆಗೆ ಹಸ್ತಾಂತರಿಸಿದರೆ, ಪಾಕಿಸ್ತಾನದ ಅತಿದೊಡ್ಡ ಜಮೀನ್ದಾರ ಸಂಸ್ಥೆಯಾಗಿ ಪಾಕಿಸ್ತಾನ ಆರ್ಮಿ ಬೆಳೆಯಲಿದೆ ಎಂದು ಕೆಲವರು ತಮ್ಮ ಆತಂಕವನ್ನು ಹೊರ ಹಾಕಿದ್ದಾರೆ. ಇದರಿಂದ ಲಾಭಕ್ಕಿಂತ ಹೆಚ್ಚು ನಷ್ಟವೇ ಉಂಟಾಗಲಿದೆ ಎಂದು ಅವರು ತಿಳಿಸಿದ್ದಾರೆ. ಇಷ್ಟಾಗಿಯೂ, ಪಾಕಿಸ್ತಾನ ಯಾವಾಗ ತನ್ನ ಕೃಷಿ ಯೋಜನೆಯನ್ನು ಜಾರಿಗೆ ತರಲಿದೆ, ಅದ ಕುರಿತಾ ರೂಪರೇಷೆಗಳಾವವು ಎಂಬುದರ ಕುರಿತು ಯಾವುದೇ ಖಚಿತ ಮಾಹಿತಿಗಳು ಇನ್ನೂ ಹೊರ ಬಿದ್ದಿಲ್ಲ.

ವಿದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version