ಕಾಬೂಲ್: ರಷ್ಯಾ-ಉಕ್ರೇನ್ ಮಧ್ಯೆ ಭೀಕರ ಕಾಳಗ (Russia Ukraine War) ನಡೆಯುತ್ತಿದ್ದು, ಸಾವಿರಾರು ಜನ ಮೃತಪಟ್ಟಿದ್ದಾರೆ. ಲಕ್ಷಾಂತರ ಜನ ಗಾಯಗೊಂಡಿದ್ದು, ಇಷ್ಟೇ ಸಂಖ್ಯೆಯಲ್ಲಿ ನಾಗರಿಕರು ನಿರಾಶ್ರಿತರಾಗಿದ್ದಾರೆ. ಇಸ್ರೇಲ್ ಹಾಗೂ ಪ್ಯಾಲೆಸ್ತೀನ್ ಸಮರದಲ್ಲೂ (Israel Palestine War) ಸಾವಿರಾರು ಜನ ಮೃತಪಟ್ಟಿದ್ದಾರೆ. ಇನ್ನು, ರಷ್ಯಾ ಅಧ್ಯಕ್ಷೀಯ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಬೆನ್ನಲ್ಲೇ, ಮೂರನೇ ಮಹಾಯುದ್ಧ ನಿಶ್ಚಿತ ಎಂದು ವ್ಲಾಡಿಮಿರ್ ಪುಟಿನ್ (Vladimir Putin) ಎಚ್ಚರಿಕೆ ನೀಡಿದ್ದಾರೆ. ಜಗತ್ತಿನಲ್ಲಿ ಇಷ್ಟೆಲ್ಲ ಬಿಕ್ಕಟ್ಟು ಸೃಷ್ಟಿಯಾಗಿರುವ ಬೆನ್ನಲ್ಲೇ, ಅಫಘಾನಿಸ್ತಾನದ ಮೇಲೆ ಪಾಕಿಸ್ತಾನವು ಎರಡು ವಾಯುದಾಳಿ (Pakistan Air Strikes) ಮಾಡಿದ್ದು, ಎಂಟು ಜನ ಮೃತಪಟ್ಟಿದ್ದಾರೆ. ಇದು ಮತ್ತೆರಡು ರಾಷ್ಟ್ರಗಳ ನಡುವಿನ ಸಮರಕ್ಕೆ ಕಾರಣವಾಗುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.
“ಅಫಘಾನಿಸ್ತಾನದ ಖೋಸ್ಟ್ ಹಾಗೂ ಪಕ್ತಿಕಾ ಪ್ರಾಂತ್ಯಗಳ ಮೇಲೆ ಪಾಕಿಸ್ತಾನವು ಎರಡು ವಾಯುದಾಳಿ ನಡೆಸಿದೆ. ಐವರು ಮಹಿಳೆಯರು, ಮೂವರು ಮಕ್ಕಳು ಸೇರಿ ಎಂಟು ಮಂದಿ ದಾಳಿಯಲ್ಲಿ ಮೃತಪಟ್ಟಿದ್ದಾರೆ. ಅಪಘಾನಿಸ್ತಾನದ ಪ್ರದೇಶದ ಮೇಲೆ ಬೇರೆ ಯಾರೂ ಹಕ್ಕು ಚಲಾಯಿಸುವುದು, ದಾಳಿ ಮಾಡುವುದನ್ನು ನಾವು ಸಹಿಸುವುದಿಲ್ಲ. ಪಾಕಿಸ್ತಾನದ ದಾಳಿಯನ್ನು ನಾವು ಖಂಡಿಸುತ್ತೇವೆ ಹಾಗೂ ಅಫಘಾನಿಸ್ತಾನದ ಭದ್ರತೆಯ ವಿಚಾರದಲ್ಲಿ ನಾವು ಎಂದಿಗೂ ರಾಜಿ ಆಗುವುದಿಲ್ಲ” ಎಂದು ತಾಲಿಬಾನ್ ಆಡಳಿತ ತಿಳಿಸಿದೆ. ಹಾಗೆಯೇ, ಇದರ ಪರಿಣಾಮವನ್ನು ಪಾಕಿಸ್ತಾನ ಎದುರಿಸಲಿದೆ ಎಂದು ತಾಲಿಬಾನ್ ಆಡಳಿತವು ಎಚ್ಚರಿಕೆ ನೀಡಿದೆ.
Taliban Ministry Of Defence Says Its Forces Targeted Pakistani Military Centres Along The Border Areas Following Pakistan's Airstrikes
— CGTN Europe (@CGTNEurope) March 18, 2024
ಆಫ್ಘನ್ ದಾಳಿಗೆ ಪಾಕ್ ಪ್ರತಿದಾಳಿ?
ಪಾಕಿಸ್ತಾನ ಹಾಗೂ ಅಫಘಾನಿಸ್ತಾನದ ಮಧ್ಯೆ ಮೊದಲಿನಿಂದಲೂ ಬಿಕ್ಕಟ್ಟಿದೆ. ಕಳೆದ ಶನಿವಾರ (ಮಾರ್ಚ್ 16) ಪಾಕಿಸ್ತಾನದಲ್ಲಿರುವ ಸೇನಾ ನೆಲೆಯ ಮೇಲೆ ದಾಳಿ ನಡೆದಿತ್ತು. ಅಪರಿಚಿತರು ನಡೆಸಿದ ದಾಳಿಯಲ್ಲಿ ಪಾಕಿಸ್ತಾನದ 7 ಸೈನಿಕರು ಮೃತಪಟ್ಟಿದ್ದರು. ಇದರ ಹಿಂದೆ ಅಫಘಾನಿಸ್ತಾನದ ಕೈವಾಡ ಇದೆ ಎಂಬುದರ ಕುರಿತು ಮಾಹಿತಿ ಪಡೆದ ಪಾಕಿಸ್ತಾನವು ದಾಳಿಗೆ ಪ್ರತಿಯಾಗಿ ಅಫಘಾನಿಸ್ತಾನದ ಮೇಲೆ ವಾಯುದಾಳಿ ನಡೆಸಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಮೊದಲು, ಸೇನಾ ನೆಲೆಯ ಮೇಲೆ ನಡೆದ ದಾಳಿ ಕುರಿತು ಪಾಕಿಸ್ತಾನವು ಅಧಿಕೃತ ಮಾಹಿತಿ ನೀಡಿರಲಿಲ್ಲ.
ಇದನ್ನೂ ಓದಿ: Hollywoodgate: ಅಫಘಾನಿಸ್ತಾನದಲ್ಲಿ ತಾಲಿಬಾನ್ ಆಡಳಿತದ ಮೇಲೆ ಬೆಳಕು ಚೆಲ್ಲುವ ʼಹಾಲಿವುಡ್ ಗೇಟ್ʼ
ದಾಳಿ ನಿರಾಕರಿಸಿದ್ದ ತಾಲಿಬಾನ್
ಪಾಕಿಸ್ತಾನ ಹಾಗೂ ಅಫಘಾನಿಸ್ತಾನದ ಮಧ್ಯೆ ಆಗಾಗ ಸಂಘರ್ಷಗಳು ನಡೆಯುತ್ತಲೇ ಇರುತ್ತವೆ. ಪಾಕಿಸ್ತಾನದಲ್ಲಿರುವ ಉಗ್ರರು ಆಫ್ಘನ್ ಮೇಲೆ, ಆಫ್ಘನ್‌ನಲ್ಲಿರುವ ತಾಲಿಬಾನಿಗಳು ಪಾಕಿಸ್ತಾನದ ಮೇಲೆ ದಾಳಿ ನಡೆಸುತ್ತವೆ. ಇದರ ಭಾಗವಾಗಿಯೇ ಅಫಘಾನಿಸ್ತಾನದಲ್ಲಿರುವ ಪಾಕಿಸ್ತಾನಿ ತಾಲಿಬಾನಿಗಳು (TTP) ಪಾಕ್ ಸೇನಾ ನೆಲೆಗಳ ಮೇಲೆ ದಾಳಿ ನಡೆಸಿದ್ದಾರೆ ಎಂಬ ಆರೋಪ ಕೇಳಿಬಂದಿದ್ದವು. ಆದರೆ, ಅಫಘಾನಿಸ್ತಾನವು ಇದನ್ನು ನಿರಾಕರಿಸಿತ್ತು. “ತನ್ನ ದೇಶವನ್ನು ನಿಯಂತ್ರಿಸಿಕೊಳ್ಳಲು ಆಗದ ಪಾಕಿಸ್ತಾನ ಸುಖಾಸುಮ್ಮನೆ ನಮ್ಮ ಮೇಲೆ ಆರೋಪ ಮಾಡುವುದು ಸರಿಯಲ್ಲ” ಎಂದು ತಾಲಿಬಾನ್ ಆಡಳಿತ ಸ್ಪಷ್ಟಪಡಿಸಿತ್ತು.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ