ಇಸ್ಲಾಮಾಬಾದ್: ಉಗ್ರರ ಪೋಷಣೆ, ಉಗ್ರರಿಗೆ ಹಣಕಾಸು ನೆರವು, ಚೀನಾದ ಯೋಜನೆಗಳಿಗೆ ಹಣ ಸುರಿಯುವುದು, ಅಸಮರ್ಥ ನಾಯಕತ್ವ, ದೂರದೃಷ್ಟಿಯೇ ಇಲ್ಲದ ಆರ್ಥಿಕ ನೀತಿಗಳಿಂದಾಗಿ ಪಾಕಿಸ್ತಾನವು (Pakistan) ಸಂಪೂರ್ಣವಾಗಿ ದಿವಾಳಿ ಅಂಚಿಗೆ ಬಂದುನಿಂತಿದೆ. ಅಗತ್ಯ ವಸ್ತುಗಳ ಬೆಲೆಯು ಗಗನಕ್ಕೇರಿದ್ದು, ಬಡವರು ನಿತ್ಯ ಪರದಾಡುತ್ತಿದ್ದಾರೆ. ಜಾಗತಿಕವಾಗಿಯೂ ಪಾಕಿಸ್ತಾನಕ್ಕೆ (Pakistan Crisis) ಹಣಕಾಸು ನೆರವು ಸಿಗುತ್ತಿಲ್ಲ. ಹೆಚ್ಚಿನ ಸಾಲವೂ ಸಿಗುತ್ತಿಲ್ಲ. ಇದರ ಬೆನ್ನಲ್ಲೇ, ಪಾಕಿಸ್ತಾನದ ಸಾಲದ ಪ್ರಮಾಣವು 2025ರ ವೇಳೆಗೆ 79 ಲಕ್ಷ ಕೋಟಿ ರೂ. (ಪಾಕಿಸ್ತಾನದ ಕರೆನ್ಸಿ) (Pakistan Debt) ಆಗಲಿದೆ ಎಂದು ವರದಿಯೊಂದು ತಿಳಿಸಿದೆ.
ಹೌದು, ಪಾಕಿಸ್ತಾನವು ಮೂರು ವರ್ಷಗಳಿಗಾಗಿ ಆರ್ಥಿಕ ನೀತಿಗಳನ್ನು ರೂಪಿಸಿದ್ದು, ಬಜೆಟ್‌ನಲ್ಲಿ ಪ್ರಾಂತ್ಯಗಳ ಪಾಲನ್ನು ಶೇ.39.4ರಿಂದ ಶೇ.48.7ಕ್ಕೆ ಏರಿಕೆ ಮಾಡಲು ಚಿಂತನೆ ನಡೆಸಿದೆ. ಇದರಿಂದಾಗಿ ಪಾಕಿಸ್ತಾನದ ಆಂತರಿಕ ಹಾಗೂ ವಿದೇಶಿ ಸಾಲದ ಮೊತ್ತವು ಗಣನೀಯವಾಗಿ ಏರಿಕೆಯಾಗಲಿದೆ ಎಂದು ಹೇಳಲಾಗುತ್ತಿದೆ. ಪಾಕಿಸ್ತಾನವು ಸದ್ಯ 73 ಲಕ್ಷ ಕೋಟಿ ರೂ. ಸಾಲ ಹೊಂದಿದೆ. 2022-23ರಲ್ಲಿ 71 ಲಕ್ಷ ಕೋಟಿ ರೂ. ಸಾಲ ಹೊಂದಿತ್ತು. ಈಗ ಮತ್ತೆ ಸಾಲ ಮಾಡುವ ಮೂಲಕ ಪಾಕಿಸ್ತಾನವು ಅಪಾಯದ ಅಂಚಿಗೆ ಹೋಗುತ್ತಿದೆ ಎಂದೇ ಆರ್ಥಿಕ ತಜ್ಞರು ವಿಶ್ಲೇಷಿಸುತ್ತಿದ್ದಾರೆ.
ಲೀಟರ್ ಪೆಟ್ರೋಲ್‌ಗೆ 275 ರೂ.
ಪಾಕಿಸ್ತಾನದಲ್ಲಿ ಒಂದು ಲೀಟರ್ ಹಾಲಿನ ಬೆಲೆ 220 ರೂ. ಇದೆ. ಒಂದು ಲೀಟರ್ ಪೆಟ್ರೋಲ್‌ಗೆ 275 ರೂ., ಲೀಟರ್ ಡೀಸೆಲ್‌ಗೆ 83 ರೂ., ಮೊಟ್ಟೆಗೆ 66 ರೂ., ಲೀಟರ್ ಅಡಗೆ ಎಣ್ಣೆಗೆ 560 ರೂ., ಒಂದು ರೊಟ್ಟಿಗೆ 30 ರೂ. ಆಗಿದೆ. ಪ್ರತಿಯೊಂದು ವಸ್ತುಗಳ ಬೆಲೆಯೂ ಗಗನಕ್ಕೇರಿದೆ. ಇದರಿಂದ ಬಡವರು ಮೂರು ಹೊತ್ತು ಹೊಟ್ಟೆ ತುಂಬಿಸಿಕೊಳ್ಳಲೂ ಆಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಪಾಕಿಸ್ತಾನದ ಹಣಕಾಸು ನೀತಿಗಳ ವಿರುದ್ಧ ಬಲೂಚಿಸ್ತಾನ ಸೇರಿ ಹಲವು ಪ್ರಾಂತ್ಯಗಳಲ್ಲಿ ದಂಗೆ, ಪ್ರತಿಭಟನೆ, ಹಿಂಸಾಚಾರಗಳು ಭುಗಿಲೆದ್ದಿವೆ.
ಸರ್ಕಾರಿ ಸಂಸ್ಥೆಗಳ ಮಾರಾಟಕ್ಕೆ ತೀರ್ಮಾನ
ಸರ್ಕಾರಿ ನೌಕರರಿಗೆ ಸಂಬಳ ಕೊಡಲೂ ಆಗದ ಕಾರಣ ಪಾಕಿಸ್ತಾನವು ಕಾರ್ಯತಂತ್ರದ ಘಟಕಗಳನ್ನು ಹೊರತುಪಡಿಸಿ ಎಲ್ಲ ಸರ್ಕಾರಿ ಸ್ವಾಮ್ಯದ ಉದ್ಯಮಗಳನ್ನು ಖಾಸಗೀಕರಣಗೊಳಿಸಲು ಮುಂದಾಗಿದೆ. ಈ ಬಗ್ಗೆ ಪ್ರಧಾನ ಮಂತ್ರಿ ಶೆಹಬಾಜ್ ಷರೀಫ್ ತಿಳಿಸಿದ್ದಾರೆ. ಶೆಹಬಾಜ್ ಷರೀಫ್ ನೇತೃತ್ವದಲ್ಲಿ ನಡೆದ ಸರ್ಕಾರಿ ಉದ್ಯಮಗಳ (SOEs) ಖಾಸಗೀಕರಣ ಪ್ರಕ್ರಿಯೆಯ ಪರಿಶೀಲನಾ ಸಭೆಯ ನಂತರ ಈ ನಿರ್ಧಾರ ಪ್ರಕಟಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಇದು 2024ರಿಂದ 29ರವರೆಗೆ ಹಂತ ಹಂತವಾಗಿ ನಡೆಯಲಿರುವ ಖಾಸಗೀಕರಣದ ಮಾರ್ಗಸೂಚಿಯನ್ನು ಈ ಸಭೆಯಲ್ಲಿ ಚರ್ಚೆ ನಡೆಸಲಾಗಿದೆ.
ಇದನ್ನೂ ಓದಿ: Doda Encounter: ಜಮ್ಮು ದಾಳಿ ಹಿಂದೆ ಇದ್ಯಾ ಪಾಕ್ ಮಾಜಿ ಸೈನಿಕರ ಕೈವಾಡ? ಉಗ್ರರಿಗಿದ್ಯಾ ಸೇನಾ ತರಬೇತಿ?