ಲಾಹೋರ್: ಪಾಕಿಸ್ತಾನದಲ್ಲಿ ರಾಜಕೀಯ, ಆರ್ಥಿಕ, ಸಾಮಾಜಿಕ ಅಸ್ಥಿರತೆಗಳು ತಾಂಡವವಾಡುತ್ತಿವೆ. ಪಾಕಿಸ್ತಾನ ಈಗಿನ ಸರ್ಕಾರದ ವಿರುದ್ಧ ಮಾಜಿ ಪ್ರಧಾನಿ ಇಮ್ರಾನ್ ಖಾನ್ ನೇತೃತ್ವದಲ್ಲಿ ದೊಡ್ಡಮಟ್ಟದಲ್ಲಿ ಪ್ರತಿಭಟನೆ ನಡೆಯುತ್ತಿದೆ. ಇದೆಲ್ಲದರ ಮಧ್ಯೆ ಪಾಕಿಸ್ತಾನದ ಮಾಜಿ ಕ್ರಿಕೆಟರ್ ಮೊಹಮ್ಮದ್ ಹಫೀಜ್ ಮಾಡಿರುವ ಒಂದು ಟ್ವೀಟ್ ಪಾಕಿಸ್ತಾನದ ಆರ್ಥಿಕ ಬಿಕ್ಕಟ್ಟಿನ ಸ್ಥಿತಿಯನ್ನು ಎತ್ತಿ ತೋರಿಸಿದೆ. ಪಾಕಿಸ್ತಾನ ಮಾಜಿ ಪ್ರಧಾನಿ ಇಮ್ರಾನ್ ಖಾನ್, ಈಗಿನ ಪ್ರಧಾನಿ ಶೆಹಬಾಜ್ ಶರೀಫ್ ಮತ್ತಿತರ ಪ್ರಮುಖ ರಾಜಕಾರಣಿಗಳನ್ನು ಟ್ಯಾಗ್ ಮಾಡಿರುವ ಮೊಹಮ್ಮದ್ ಹಫೀಜ್, ಲಾಹೋರ್‌ನ ಯಾವುದೇ ಪೆಟ್ರೋಲ್ ಸ್ಟೇಶನ್‌ಗಳಲ್ಲೂ ಇಂಧನಗಳು ಸಿಗುತ್ತಿಲ್ಲ. ಎಟಿಎಂ ಮಶಿನ್‌ಗಳಲ್ಲಿ ಹಣವಿಲ್ಲ. ರಾಜಕೀಯ ನಿರ್ಧಾರಗಳು, ಸಮಸ್ಯೆಗಳಿಂದಾಗಿ ಸಾಮಾನ್ಯ ಜನರು ಯಾಕೆ ಸಂಕಷ್ಟಪಡಬೇಕು ಎಂದು ಪ್ರಶ್ನಿಸಿದ್ದಾರೆ.
ಇಮ್ರಾನ್ ಪಾಕಿಸ್ತಾನವನ್ನು ದಿವಾಳಿ ಮಾಡುತ್ತಿದ್ದಾರೆ. ಇಲ್ಲಿನ ಆರ್ಥಿಕ ಅಭಿವೃದ್ಧಿ ಕುಂಠಿತವಾಗುತ್ತಿದೆ ಎಂದು ಆರೋಪಿಸಿದ್ದ ಪ್ರತಿಪಕ್ಷಗಳ ಸಂಸದರೆಲ್ಲ ಸೇರಿ, ಏಪ್ರಿಲ್ ಪ್ರಾರಂಭದಲ್ಲಿ ಇಮ್ರಾನ್ ಖಾನ್ ವಿರುದ್ಧ ಸಂಸತ್ತಿನಲ್ಲಿ ಅವಿಶ್ವಾಸ ನಿರ್ಣಯ ಮಂಡನೆ ಮಾಡಿದ್ದರು. ಆದರೆ ಡೆಪ್ಯೂಟಿ ಸ್ಪೀಕರ್ ಖಾಸಿಂ ಖಾನ್ ಸೂರಿ ಸಂಸತ್ತನ್ನೇ ವಿಸರ್ಜಿಸುವ ಮೂಲಕ ಇಮ್ರಾನ್ ಖಾನ್‌ರನ್ನು ಪಾರು ಮಾಡಿದ್ದರು. ಮತ್ತೆ ಕೇಸ್ ಸುಪ್ರೀಂಕೋರ್ಟ್ ಮೆಟ್ಟಿಲೇರಿತ್ತು. ಡೆಪ್ಯೂಟಿ ಸ್ಪೀಕರ್ ಸಂಸತ್ತು ವಿಸರ್ಜಿಸಿದ್ದು ಸಂವಿಧಾನ ಬಾಹಿರ ಎಂದು ಕೋರ್ಟ್ ತೀರ್ಪು ನೀಡಿದ ಬಳಿಕ ಇಮ್ರಾನ್, ಪ್ರಧಾನಿ ಹುದ್ದೆ ತ್ಯಜಿಸಿದ್ದರು.
ಇದನ್ನೂ ಓದಿ: ಛೋಟಾ ಪಾಕಿಸ್ತಾನ್ ಎಂದ ಇಬ್ಬರ ಬಂಧನ: ಎನ್‌ಕೌಂಟರ್ ಮಾಡಿ ಬಿಸಾಕಿ ಎಂದ ಪ್ರಮೋದ್ ಮುತಾಲಿಕ್
ಹೊಸ ಪ್ರಧಾನಿ ಶೆಹಬಾಜ್ ಶರೀಫ್ ಆಡಳಿತ ಬಂದು ಒಂದು ತಿಂಗಳಾಗಿದೆ. ಪಾಕಿಸ್ತಾನದ ಆರ್ಥಿಕ ಅಭಿವೃದ್ಧಿ ಇನ್ನಷ್ಟು ಕುಂಠಿತವಾಗಿದೆ ಎಂದು ಹೇಳಲಾಗುತ್ತಿದೆ. ಈಗಾಗಲೇ ದಿವಾಳಿಯಾದ ಶ್ರೀಲಂಕಾ ಚಿತ್ರಣ ನಮ್ಮ ಕಣ್ಣಮುಂದಿದೆ. ಪಾಕಿಸ್ತಾನ ಕೂಡ ಅದೇ ದಾರಿಯಲ್ಲಿ ಹೊರಟಂತಿದೆ ಎಂದು ಆರ್ಥಿಕ ತಜ್ಞರೂ ಅಭಿಪ್ರಾಯಪಟ್ಟಿದ್ದಾರೆ.
ಮೊಹಮ್ಮದ್ ಹಫೀಜ್ ಯಾರು?
ಹಫೀಜ್ ಪಾಕಿಸ್ತಾನದ ಮಾಜಿ ಕ್ರಿಕೆಟರ್. 2003-2021ರವರೆಗೆ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಮಿಂಚಿ, ಆಲ್‌ರೌಂಡರ್ ಎನಿಸಿಕೊಂಡಿದ್ದರು. ಒಟ್ಟು 55 ಟೆಸ್ಟ್‌ಗಳು, 218 ಏಕದಿನ ಪಂದ್ಯಗಳು ಮತ್ತು 119 ಟಿ20 ಮ್ಯಾಚ್‌ಗಳನ್ನು ಆಡಿದ್ದಾರೆ. ಇತ್ತೀಚೆಗೆ ಪಾಕಿಸ್ತಾನ ದೇಶೀಯ ಕ್ರಿಕೆಟ್ ಪಂದ್ಯಾವಳಿಯಲ್ಲಿ ತಂಡಗಳ ಸಂಖ್ಯೆ ಕಡಿಮೆ ಮಾಡಬೇಕು ಎಂಬ ಪಾಕಿಸ್ತಾನ ಕ್ರಿಕೆಟ್ ಮಂಡಳಿ ನಿರ್ಧಾರವನ್ನು ಪ್ರಶ್ನಿಸಿದ್ದರು. ಹಾಗೇ, ಪಾಕಿಸ್ತಾನ ಕ್ರಿಕೆಟ್ ಮಂಡಳಿ ತೆಗೆದುಕೊಳ್ಳಬಹುದಾದ ಕೆಲವು ಸುಧಾರಣಾ ನಿಯಮಗಳ ಬಗ್ಗೆಯೂ ಸಲಹೆ ನೀಡಿದ್ದರು.
ಇದನ್ನೂ ಓದಿ: ಪಾಕ್‌ನಲ್ಲಿ ಇಮ್ರಾನ್ ಖಾನ್ ಬಲಪ್ರದರ್ಶನ; ಸರ್ಕಾರಕ್ಕೆ 6 ದಿನಗಳ ಗಡುವು