Site icon Vistara News

Pakistan Election: ಪಾಕಿಸ್ತಾನದ ಪ್ರಧಾನಿ ಅಭ್ಯರ್ಥಿಯಾಗಿ ಸಹೋದರ ಶೆಹಬಾಜ್ ನಾಮನಿರ್ದೇಶಿಸಿದ ನವಾಜ್ ಷರೀಫ್

Shehbaz Sharif

ಇಸ್ಲಾಮಾಬಾದ್: ಪಾಕಿಸ್ತಾನದಲ್ಲಿ (Pakistan Election) ನಡೆದ ಅಚ್ಚರಿಯ ಬೆಳವಣಿಗೆಯೊಂದರಲ್ಲಿ, ಪಾಕಿಸ್ತಾನ್ ಮುಸ್ಲಿಂ ಲೀಗ್- ನವಾಜ್ ಪಕ್ಷದ ಮುಖ್ಯಸ್ಥ ಮತ್ತು ಮೂರು ಬಾರಿಯ ಮಾಜಿ ಪ್ರಧಾನಿ ನವಾಜ್ ಷರೀಫ್ (Nawaz Sharif) ಬದಲಿಗೆ ಅದರ ಅಧ್ಯಕ್ಷ ಶೆಹಬಾಜ್ ಷರೀಫ್ (Shehbaz Sharif) ಅವರನ್ನು ಪಾಕಿಸ್ತಾನದ ಪ್ರಧಾನಿ (Pakistan Prime Minister) ಅಭ್ಯರ್ಥಿಯಾಗಿ ನಾಮನಿರ್ದೇಶನ ಮಾಡಲಾಗಿದೆ.

ಪಾಕಿಸ್ತಾನ್ ಮುಸ್ಲಿಂ ಲೀಗ್-ನವಾಜ್ ವಕ್ತಾರ ಮರಿಯುಮ್ ಔರಂಗಜೇಬ್ ಅವರು ಪಿಎಂಎಲ್-ಎನ್ ಮುಖ್ಯಸ್ಥ ನವಾಜ್ ಷರೀಫ್ (74) ತಮ್ಮ ಕಿರಿಯ ಸಹೋದರ ಶೆಹಬಾಜ್ ಷರೀಫ್ (72) ಅವರನ್ನು ಪ್ರಧಾನಿ ಸ್ಥಾನಕ್ಕೆ ಮತ್ತು ಅವರ ಪುತ್ರಿ ಮರಿಯಂ ನವಾಜ್ (50) ಅವರನ್ನು ಪಂಜಾಬ್ ಪ್ರಾಂತ್ಯದ ಮುಖ್ಯಮಂತ್ರಿ ಸ್ಥಾನಕ್ಕೆ ನಾಮನಿರ್ದೇಶನ ಮಾಡಿದ್ದಾರೆ ಎಂದು ತಿಳಿಸಿದರು.

“ನವಾಜ್ ಷರೀಫ್ ಪಿಎಂಎಲ್-ಎನ್‌ಗೆ ಬೆಂಬಲ ನೀಡಿದ ರಾಜಕೀಯ ಪಕ್ಷಗಳಿಗೆ ಧನ್ಯವಾದ ಸಲ್ಲಿಸಿದ್ದಾರೆ. ಈ ನಿರ್ಧಾರದ ಮೂಲಕ ಪಾಕಿಸ್ತಾನವು ಬಿಕ್ಕಟ್ಟಿನಿಂದ ಹೊರಬರುವ ಭರವಸೆಯನ್ನು ವ್ಯಕ್ತಪಡಿಸಿದ್ದಾರೆ” ಎಂದು ಅವರು ಹೇಳಿದರು.

ಪಾಕಿಸ್ತಾನ್ ಪೀಪಲ್ಸ್ ಪಾರ್ಟಿ (ಪಿಪಿಪಿ) ಅಧ್ಯಕ್ಷ ಬಿಲಾವಲ್ ಭುಟ್ಟೋ-ಜರ್ದಾರಿ ಅವರು ಪ್ರಧಾನಿ ಸ್ಪರ್ಧೆಯಿಂದ ಹಿಂದೆ ಸರಿದಿದ್ದಾರೆ. ಅವರ ಪಕ್ಷವು ಹೊಸ ಸರ್ಕಾರದ ಭಾಗವಾಗದೆ ಹೊರಗಿನಿಂದ ಮಾಜಿ ಪ್ರಧಾನಿ ನವಾಜ್ ಅವರನ್ನು ಬೆಂಬಲಿಸುತ್ತದೆ ಎಂದು ಹೇಳಿದ್ದಾರೆ.

ಜೈಲಿನಲ್ಲಿರುವ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರ ಪಾಕಿಸ್ತಾನ್ ತೆಹ್ರೀಕ್-ಎ-ಇನ್ಸಾಫ್ ಪಕ್ಷದ ಬೆಂಬಲಿತ ಸ್ವತಂತ್ರ ಅಭ್ಯರ್ಥಿಗಳು ಸಂಸತ್ತಿನಲ್ಲಿ ಹೆಚ್ಚಿನ ಸ್ಥಾನಗಳನ್ನು ಗೆಲ್ಲುವ ಮೂಲಕ ಅಚ್ಚರಿ ಮೂಡಿಸಿದ್ದರೂ, ಸಾರ್ವತ್ರಿಕ ಚುನಾವಣೆಯ ಐದು ದಿನಗಳ ನಂತರವೂ ಪಾಕಿಸ್ತಾನದ ಮುಂದಿನ ಸರ್ಕಾರ ಹೇಗಿರುತ್ತದೆ ಎಂಬ ಗೊಂದಲ ಬಗೆಹರಿದಿಲ್ಲ.

ಮೂರು ಪ್ರಮುಖ ಪಕ್ಷಗಳಾದ PML-N, PPP, PTI ಯಾವುದೂ ಫೆಬ್ರವರಿ 8ರ ಸಾರ್ವತ್ರಿಕ ಚುನಾವಣೆಯಲ್ಲಿ ರಾಷ್ಟ್ರೀಯ ಅಸೆಂಬ್ಲಿಯಲ್ಲಿ ಬಹುಮತವನ್ನು ಪಡೆಯಲು ಅಗತ್ಯವಾದ ಸ್ಥಾನಗಳನ್ನು ಗೆದ್ದಿಲ್ಲ. ಹೀಗಾಗಿ ಸ್ವಂತವಾಗಿ ಸರ್ಕಾರ ರಚಿಸಲು ಸಾಧ್ಯವಾಗಿಲ್ಲ. ಈ ನಡುವೆ ನವಾಜ್‌ ಅವರ ಪಿಎಂಎಲ್-ಎನ್ ಪಾಕಿಸ್ತಾನ ಸೇನೆಯ ಬೆಂಬಲವನ್ನು ಹೊಂದಿದೆ ಎಂದೂ ಹೇಳಲಾಗಿದೆ.

ಪಿಪಿಪಿಯ ಉನ್ನತಾಧಿಕಾರದ ಕೇಂದ್ರ ಕಾರ್ಯಕಾರಿ ಸಮಿತಿ (ಸಿಇಸಿ) ಸಭೆಯ ನಂತರ ಮಾತನಾಡಿದ ಬಿಲಾವಲ್, “ಫೆಡರಲ್ ಸರ್ಕಾರ ರಚಿಸಲು ತಮ್ಮ ಪಕ್ಷಕ್ಕೆ ಜನಾದೇಶವಿಲ್ಲ ಎಂಬುದು ವಾಸ್ತವ. ಇದರಿಂದಾಗಿ ನಾನು ಪ್ರಧಾನ ಮಂತ್ರಿಯ ಉಮೇದುವಾರಿಕೆಗೆ ಮುಂದಾಗುವುದಿಲ್ಲ. ಪಿಎಂಎಲ್-ಎನ್ ಮತ್ತು ಸ್ವತಂತ್ರರು ಹೆಚ್ಚಿನ ಸಂಖ್ಯೆಯನ್ನು ಹೊಂದಿದ್ದಾರೆ” ಎಂದಿದ್ದಾರೆ.

ನಿನ್ನೆ, ನವಾಜ್ ಷರೀಫ್ ದಾಖಲೆಯ ನಾಲ್ಕನೇ ಬಾರಿಗೆ ಪ್ರಧಾನಿಯಾಗುತ್ತಾರೆ ಎಂದು ಮಾಜಿ ಪ್ರಧಾನಿ ಶೆಹಬಾಜ್ ಅವರು ಹೇಳಿದ್ದರು. ಶೆಹಬಾಜ್ ಅವರು ಬಿಲಾವಲ್ ಮತ್ತು ಅವರ ತಂದೆ ಆಸಿಫ್ ಅಲಿ ಜರ್ದಾರಿ ಅವರೊಂದಿಗೆ ಮಾತುಕತೆ ನಡೆಸಿದ್ದು, ನವಾಜ್ ಷರೀಫ್ ಅವರನ್ನು ಬೆಂಬಲಿಸಿದ್ದಕ್ಕಾಗಿ ಧನ್ಯವಾದ ಅರ್ಪಿಸಿದರು.

ಪಿಎಂಎಲ್-ಎನ್ ಮತ್ತು ಮುತ್ತಹಿದಾ ಕ್ವಾಮಿ ಮೂವ್‌ಮೆಂಟ್-ಪಾಕಿಸ್ತಾನ (ಎಂಕ್ಯೂಎಂ-ಪಿ) ಸರ್ಕಾರ ರಚನೆ ಕುರಿತು ಮಂಗಳವಾರ ಸಭೆ ನಡೆಸಿವೆ. ಎರಡೂ ಪಕ್ಷಗಳು ಪರಸ್ಪರ ಸಹಕಾರದೊಂದಿಗೆ ಮುಂದುವರಿಯಲು ಒಪ್ಪಿಕೊಂಡಿವೆ. ಎಂಕ್ಯೂಎಂ-ಪಿ ಸಂಸತ್ತಿನಲ್ಲಿ 17 ಶಾಸಕರನ್ನು ಹೊಂದಿದೆ. ಇಮ್ರಾನ್ ಖಾನ್ ಅವರ ಪಿಟಿಐ, ಪಿಪಿಪಿಯೊಂದಿಗೆ ಮೈತ್ರಿಕೂಟವನ್ನು ರಚಿಸಲು ನಿರಾಕರಿಸಿದೆ.

266 ಸದಸ್ಯರ ರಾಷ್ಟ್ರೀಯ ಅಸೆಂಬ್ಲಿಯಲ್ಲಿ ಸರ್ಕಾರ ರಚಿಸಲು ಯಾವುದೇ ಪಕ್ಷ 133 ಸ್ಥಾನಬಲ ಹೊಂದಿರಬೇಕು. ಪಾಕಿಸ್ತಾನದ ಚುನಾವಣಾ ಆಯೋಗವು ಸ್ವತಂತ್ರ ಅಭ್ಯರ್ಥಿಗಳು 101 ಸ್ಥಾನಗಳನ್ನು ಪಡೆದುಕೊಂಡಿದ್ದಾರೆ ಎಂದು ಘೋಷಿಸಿತು. ಇವರಲ್ಲಿ ಬಹುಪಾಲು ಮಂದಿ ಪಿಟಿಐ ಬೆಂಬಲಿತರು. ನಂತರದ ಸ್ಥಾನದಲ್ಲಿ ಪಾಕಿಸ್ತಾನ್ ಮುಸ್ಲಿಂ ಲೀಗ್-ನವಾಜ್ (ಪಿಎಂಎಲ್-ಎನ್) 75 ಸ್ಥಾನಗಳನ್ನು, ಪಾಕಿಸ್ತಾನ್ ಪೀಪಲ್ಸ್ ಪಾರ್ಟಿ (ಪಿಪಿಪಿ) 54 ಸ್ಥಾನಗಳನ್ನು ಮತ್ತು ಮುತ್ತಹಿದಾ ಕ್ವಾಮಿ ಮೂವ್‌ಮೆಂಟ್-ಪಾಕಿಸ್ತಾನ 17 ಸ್ಥಾನಗಳನ್ನು ಪಡೆದುಕೊಂಡಿವೆ. ಇತರ ಪಕ್ಷಗಳು 17 ಸ್ಥಾನಗಳನ್ನು ಪಡೆದರೆ ಒಂದು ಕ್ಷೇತ್ರದ ಫಲಿತಾಂಶವನ್ನು ತಡೆಹಿಡಿಯಲಾಗಿದೆ.

ಇದನ್ನೂ ಓದಿ: Pakistan Election: ಪಾಕಿಸ್ತಾನದಲ್ಲಿ ಅತಂತ್ರ ಫಲಿತಾಂಶ; ಇಮ್ರಾನ್ ಖಾನ್ ಬೆಂಬಲಿಗರ ಮೇಲುಗೈ

Exit mobile version