ಕರಾಚಿ: ಪಾಕಿಸ್ತಾನದ ಮಾಜಿ ಪ್ರಧಾನಿಗಳು ಮತ್ತು ಕಟು ಪ್ರತಿಸ್ಪರ್ಧಿಗಳಾದ ನವಾಜ್ ಷರೀಫ್ (Nawaz sharif) ಮತ್ತು ಇಮ್ರಾನ್ ಖಾನ್ (Imran Khan) ಅವರಿಬ್ಬರೂ ಚುನಾವಣೆಯಲ್ಲಿ (Pakistan Election) ಗೆಲುವು ತಮ್ಮದೇ ಎಂದು ಘೋಷಿಸಿಕೊಳ್ಳುವ ಮೂಲಕ ದೇಶವನ್ನು ಮತ್ತಷ್ಟು ಅನಿಶ್ಚಿತತೆ, ರಾಜಕೀಯ ಪ್ರಕ್ಷುಬ್ಧತೆಗೆ ತಳ್ಳಿದ್ದಾರೆ.
ಗುರುವಾರ ನಡೆದ ಚುನಾವಣೆಯಲ್ಲಿ ಷರೀಫ್ ಅವರ ಪಕ್ಷವು ಹೆಚ್ಚಿನ ಸ್ಥಾನಗಳನ್ನು ಗಳಿಸಿದ ಪಕ್ಷವಾಗಿ ಹೊರಹೊಮ್ಮಿದೆ. ಆದರೆ ಜೈಲಿನಲ್ಲಿರುವ ಇಮ್ರಾನ್ ಖಾನ್ ಅವರ ಪಕ್ಷದಿಂದ ಬೆಂಬಲಿಸಲ್ಪಟ್ಟ ಅಭ್ಯರ್ಥಿಗಳು ಸ್ವತಂತ್ರವಾಗಿ ಸ್ಪರ್ಧಿಸಿದ್ದು, ಒಟ್ಟಾರೆಯಾಗಿ ಹೆಚ್ಚಿನ ಸ್ಥಾನಗಳನ್ನು ಗೆದ್ದಿದ್ದಾರೆ. ಅವರ ಪಕ್ಷವನ್ನು ಚುನಾವಣೆಯಲ್ಲಿ ಸ್ಪರ್ಧೆಯಿಂದ ನಿರ್ಬಂಧಿಸಲಾಗಿದೆ.
ಇದುವರೆಗೆ 245 ಸ್ಥಾನಗಳ ಫಲಿತಾಂಶ ಪ್ರಕಟವಾಗಿದೆ. ಅದರಲ್ಲಿ 98 ಸ್ಥಾನಗಳನ್ನು ಇಮ್ರಾನ್ ಬೆಂಬಲಿತ ಸ್ವತಂತ್ರರು ಗೆದ್ದಿದ್ದಾರೆ. ಷರೀಫ್ ಅವರ ಪಾಕಿಸ್ತಾನ್ ಮುಸ್ಲಿಂ ಲೀಗ್-ನವಾಜ್ (ಪಿಎಂಎಲ್-ಎನ್) 69 ಮತ್ತು ಹತ್ಯೆಗೀಡಾದ ಪ್ರಧಾನಿ ಬೆನಜೀರ್ ಭುಟ್ಟೊ ಅವರ ಪುತ್ರ ಬಿಲಾವಲ್ ಭುಟ್ಟೊ ಜರ್ದಾರಿ ಅವರ ಪಾಕಿಸ್ತಾನ ಪೀಪಲ್ಸ್ ಪಾರ್ಟಿ 51 ಸ್ಥಾನಗಳನ್ನು ಗಳಿಸಿವೆ. ಉಳಿದವುಗಳನ್ನು ಸಣ್ಣ ಪಕ್ಷಗಳು ಮತ್ತು ಇತರ ಸ್ವತಂತ್ರರು ಗೆದ್ದಿದ್ದಾರೆ.
ಸ್ವಂತ ಬಲದಿಂದ ಸ್ಪಷ್ಟ ಬಹುಮತ ಗಳಿಸಲು ವಿಫಲವಾಗಿರುವ ಕಾರಣ ಸಮ್ಮಿಶ್ರ ಸರ್ಕಾರ ರಚಿಸಲು ತಮ್ಮ ಪಕ್ಷವು ಇತರ ಗುಂಪುಗಳೊಂದಿಗೆ ಮಾತನಾಡಲಿದೆ ಎಂದು ಷರೀಫ್ ಹೇಳಿದ್ದಾರೆ. 265 ಸೀಟುಗಳಲ್ಲಿ ಮುಕ್ಕಾಲು ಪಾಲು ಫಲಿತಾಂಶಗಳನ್ನು ಪ್ರಕಟಿಸಿದ ನಂತರ ಷರೀಫ್ ಅವರ ಘೋಷಣೆ ಹೊರಬಿದ್ದಿದೆ.
ಭಯೋತ್ಪಾದಕ ದಾಳಿಗಳು ಮುಂದುವರಿದಿದ್ದು, ಗುರುವಾರ ಮತದಾನ ಮುಗಿದ 24 ಗಂಟೆಗಳ ಅವಧಿಯಲ್ಲಿ ಉಗ್ರರ ದಾಳಿಯಲ್ಲಿ 28 ಜನರು ಸಾವನ್ನಪ್ಪಿದ್ದಾರೆ. ಧ್ರುವೀಕರಣಗೊಂಡ ಹಾಗೂ ಅರಾಜಕ ರಾಜಕೀಯ ವಾತಾವರಣ, ಏರುತ್ತಿರುವ ಉಗ್ರಗಾಮಿಗಳ ಪ್ರಭಾವ, ಆರ್ಥಿಕ ಬಿಕ್ಕಟ್ಟಿನಿಂದ ಚೇತರಿಸಿಕೊಳ್ಳಲು ಹೆಣಗಾಡುತ್ತಿರುವ ದೇಶಕ್ಕೆ ಸ್ಪಷ್ಟ ಫಲಿತಾಂಶ ಇಲ್ಲದಿರುವುದು ಇನ್ನಷ್ಟು ದಾರುಣ ಆಗಬಹುದು ಎಂದು ವಿಶ್ಲೇಷಕರು ಭವಿಷ್ಯ ನುಡಿದಿದ್ದಾರೆ. ಮತದಾನದ ಫಲಿತಾಂಶ ಅಸಾಧಾರಣ ರೀತಿಯಲ್ಲಿ ವಿಳಂಬಗೊಂಡಿದೆ. ಉಸ್ತುವಾರಿ ಸರ್ಕಾರ ಮೊಬೈಲ್ ಫೋನ್ ಸೇವೆಗಳನ್ನು ಸ್ಥಗಿತಗೊಳಿಸಿದೆ.
“ಪಾಕಿಸ್ತಾನ ಮುಸ್ಲಿಂ ಲೀಗ್ ಚುನಾವಣೆಯ ನಂತರ ಇಂದು ದೇಶದಲ್ಲಿ ಏಕೈಕ ದೊಡ್ಡ ಪಕ್ಷವಾಗಿದೆ. ಈ ದೇಶವನ್ನು ಗೊಂದಲದ ಸುಳಿಯಿಂದ ಹೊರತರುವುದು ನಮ್ಮ ಕರ್ತವ್ಯವಾಗಿದೆ” ಎಂದು ಷರೀಫ್ ಲಾಹೋರ್‌ನಲ್ಲಿರುವ ತಮ್ಮ ಮನೆಯ ಹೊರಗೆ ನೆರೆದಿದ್ದ ಬೆಂಬಲಿಗರ ಗುಂಪಿಗೆ ತಿಳಿಸಿದರು. “ಪಕ್ಷೇತರರಾಗಲಿ, ಯಾರೇ ಆಗಲಿ ಅವರಿಗೆ ಸಿಕ್ಕಿರುವ ಜನಾದೇಶವನ್ನು ಗೌರವಿಸುತ್ತೇವೆ. ನಾವು ಅವರನ್ನು ನಮ್ಮೊಂದಿಗೆ ಕುಳಿತು ಈ ದೇಶ ಮರಳಿ ತನ್ನ ಪಾದಗಳ ಮೇಲೆ ನಿಲ್ಲುವಂತೆ ಸಹಾಯ ಮಾಡಲು ಆಹ್ವಾನಿಸುತ್ತೇವೆ” ಎಂದಿದ್ದಾರೆ.
ಖಾನ್ ಅವರ ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ (ಪಿಟಿಐ) ಪಕ್ಷವು ಕೃತಕ ಬುದ್ಧಿಮತ್ತೆಯನ್ನು ಬಳಸಿಕೊಂಡು ರಚಿಸಲಾದ ಇಮ್ರಾನ್ ಅವರ ಆಡಿಯೊ-ದೃಶ್ಯ ಸಂದೇಶವನ್ನು ಬಿಡುಗಡೆ ಮಾಡಿದೆ ಮತ್ತು ಅವರ X ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಹಂಚಿಕೊಂಡಿದೆ. ತಮ್ಮ ಸಂದೇಶದಲ್ಲಿ ಇಮ್ರಾನ್ ಖಾನ್, ಷರೀಫ್ ಅವರ ಸರ್ಕಾರ ರಚನೆ ಹಕ್ಕನ್ನು ತಿರಸ್ಕರಿಸಿದ್ದಾರೆ. ಚುನಾವಣೆಯಲ್ಲಿ ಗೆದ್ದ ಅವರ ಬೆಂಬಲಿಗರನ್ನು ಅಭಿನಂದಿಸಿದ್ದಾರೆ. ಅವರ ಹಕ್ಕನ್ನು ಜಾರಿಗೆ ತರಲು ಒತ್ತಾಯಿಸಿದ್ದಾರೆ.
ಇದನ್ನೂ ಓದಿ: Pakistan Elections: ಇಂದು ಪಾಕಿಸ್ತಾನ ಚುನಾವಣೆ; ಇಮ್ರಾನ್ ಖಾನ್, ನವಾಜ್ ಷರೀಫ್ ಅದೃಷ್ಟ ಪರೀಕ್ಷೆ
ಮಾಜಿ ಕ್ರಿಕೆಟ್ ಸೂಪರ್‌ಸ್ಟಾರ್ ಖಾನ್ (71) ಅವರು ಆಗಸ್ಟ್‌ನಿಂದ ಜೈಲಿನಲ್ಲಿದ್ದಾರೆ. ಮೂರು ಪ್ರಕರಣಗಳಲ್ಲಿ ಅಪರಾಧಿಯೆಂದು ಘೋಷಿತರಾಗಿದ್ದು, 10, 14 ಮತ್ತು ಏಳು ವರ್ಷಗಳ ಜೈಲು ಶಿಕ್ಷೆಗೆ ಗುರಿಯಾಗಿದ್ದಾರೆ. ಮೂರು ಬಾರಿ ಪ್ರಧಾನಿಯಾಗಿದ್ದ 74ರ ಹರೆಯದ ಷರೀಫ್, ನಾಲ್ಕು ವರ್ಷ ದೇಶಭ್ರಷ್ಟರಾಗಿ ಬ್ರಿಟನ್‌ನಲ್ಲಿದ್ದು ಕಳೆದ ವರ್ಷಾಂತ್ಯದಲ್ಲಿ ಹಿಂದಿರುಗಿದ್ದಾರೆ. ಕಳೆದ ಚುನಾವಣೆಯಲ್ಲಿ ಅವರು ಜೈಲಿನಿಂದಲೇ ಸ್ಪರ್ಧಿಸಿದ್ದರು.
ಷರೀಫ್ ಪ್ರಬಲ ಮಿಲಿಟರಿಯೊಂದಿಗೆ ತಾವು ಹೊಂದಿದ್ದ ದೀರ್ಘಕಾಲದ ದ್ವೇಷವನ್ನು ಕೈಬಿಟ್ಟು ಹೊಂದಾಣಿಕೆ ಮಾಡಿಕೊಂಡಿದ್ದಾರೆ. ಅವರು ದೇಶವನ್ನು ಮುನ್ನಡೆಸಲು ಮುಂಚೂಣಿಯಲ್ಲಿರುವವರು ಎಂದು ಪರಿಗಣಿಸಲ್ಪಟ್ಟಿದ್ದಾರೆ. ಷರೀಫ್ ಅವರು ತಮ್ಮ ಪಕ್ಷವು ತನ್ನದೇ ಆದ ಬಹುಮತವನ್ನು ಹೊಂದಿದೆ. ಅದು ಕಡಿಮೆಯಾದರೆ PPPಯ ಮಾಜಿ ಅಧ್ಯಕ್ಷ ಆಸಿಫ್ ಅಲಿ ಜರ್ದಾರಿ ಸೇರಿದಂತೆ ಇತರರೊಂದಿಗೆ ಸೇರಿ ಮಾತುಕತೆ ನಡೆಸಿ ಸರ್ಕಾರ ರಚಿಸುತ್ತದೆ ಎಂದಿದ್ದಾರೆ.
ಪಾಕಿಸ್ತಾನದ ಸಂಕೀರ್ಣ ಚುನಾವಣಾ ವ್ಯವಸ್ಥೆಯ ಪರಿಣಾಮ, ಸ್ವತಂತ್ರ ಸದಸ್ಯರು ತಮ್ಮದೇ ಆದ ಸರ್ಕಾರವನ್ನು ರಚಿಸಲು ಸಾಧ್ಯವಿಲ್ಲ. ಇದು ಅವರ ಗೆಲುವಿನ ಆಧಾರದ ಮೇಲೆ ಪಕ್ಷಗಳಿಗೆ ಹಂಚಲಾಗುವ ಮೀಸಲು ಸ್ಥಾನಗಳನ್ನು ಒಳಗೊಂಡಿದೆ. ಆದರೆ ಸ್ವತಂತ್ರರು ಚುನಾವಣೆಯ ನಂತರ ಯಾವುದೇ ಪಕ್ಷ ಸೇರುವ ಅವಕಾಶವಿದೆ.
ಇದನ್ನೂ ಓದಿ: Mohammed Shami: ಪಾಕಿಸ್ತಾನವನ್ನು ನಿಂದಿಸುವುದು ನನ್ನ ರಕ್ತದಲ್ಲಿಯೇ ಬಂದಿದೆ ಎಂದ ಮೊಹಮ್ಮದ್ ಶಮಿ