ಕರಾಚಿ, ಪಾಕಿಸ್ತಾನ: ಅದೃಷ್ಟ ಖುಲಾಯಿಸಿದರೆ ಸಾಕು, ರಾತ್ರೋತಾತ್ರಿ ಎಂಥಾ ಸಾಮಾನ್ಯ ವ್ಯಕ್ತಿ ಕೂಡ ಶ್ರೀಮಂತನಾಗಿ ಬಿಡಬಲ್ಲ. ಇದಕ್ಕೆ ಮತ್ತೊಂದು ತಾಜಾ ಉದಾಹರಣೆ ದೊರೆತಿದೆ. ಪಾಕಿಸ್ತಾನದ ಕರಾಚಿಯ ಮೀನುಗಾರನೊಬ್ಬ (Pakistan Fisherman) ರಾತ್ರೋರಾತ್ರಿ ಕೋಟ್ಯಧೀಶನಾಗಿದ್ದಾನೆ(Millionaire). ಬಡ ಇಬ್ರಾಹಿಂ ಹೈದರಿ ಮೀನುಗಾರಿಕಾ ಗ್ರಾಮದಲ್ಲಿ ವಾಸಿಸುವ ಹಾಜಿ ಬಲೋಚ್ ಮತ್ತು ಅವರ ಕೆಲಸಗಾರರು ಸೋಮವಾರ ಅರಬ್ಬಿ ಸಮುದ್ರದಿಂದ (Arabian Sea) ಸ್ಥಳೀಯ ಆಡುಭಾಷೆಯಲ್ಲಿ ಗೋಲ್ಡನ್ ಫಿಶ್ ಅಥವಾ “ಸೋವಾ” (Sowa Fish) ಎಂದು ಕರೆಯಲ್ಪಡುವ ಮೀನುಗಳನ್ನು ಹಿಡಿದಿದ್ದಾರೆ. ಈ ಮೀನುಗಳು ಹಲವು ಔಷಧೀಯ ಗುಣಗಳನ್ನು ಹೊಂದಿರುವ ಅಪರೂಪದ ಮೀನುಗಳಾಗಿವೆ. ಈ ಮೀನುಗಳ ಹರಾಜಿನಿಂದಾಗಿ ಅವರು ದಿನ ಬೆಳಗಾಗುವುದರಲ್ಲೇ ಕೋಟ್ಯಧಿಪತಿಯಾಗಿದ್ದಾರೆ.
ಶುಕ್ರವಾರ ಬೆಳಗ್ಗೆ ಕರಾಚಿ ಬಂದರಿನಲ್ಲಿ ಮೀನುಗಾರರು ತಮ್ಮ ಮೀನುಗಳನ್ನು ಹರಾಜು ಹಾಕಿದಾಗ ಸಂಪೂರ್ಣವಾಗಿ ಎಲ್ಲ ಮೀನುಗಳು ಸುಮಾರು 70 ದಶಲಕ್ಷ ರೂಪಾಯಿಗಳಿಗೆ ಮಾರಾಟವಾಯಿತು ಎಂದು ಪಾಕಿಸ್ತಾನದ ಮೀನುಗಾರರ ಜಾನಪದ ವೇದಿಕೆಯ ಮುಬಾರಕ್ ಖಾನ್ ಹೇಳಿದ್ದಾರೆ.
ಸೋವಾ ಮೀನನ್ನು ಬೆಲೆಬಾಳುವ ಮತ್ತು ಅಪರೂಪವೆಂದು ಪರಿಗಣಿಸಲಾಗುತ್ತದೆ. ಏಕೆಂದರೆ ಅದರ ಹೊಟ್ಟೆಯಲ್ಲಿರುವ ಪದಾರ್ಥಗಳು ಉತ್ತಮ ಗುಣಪಡಿಸುವ ಮತ್ತು ಔಷಧೀಯ ಗುಣಗಳನ್ನು ಹೊಂದಿವೆ ಎಂದು ಹೇಳಲಾಗುತ್ತದೆ. ಮೀನಿನ ದಾರದಂತಹ ವಸ್ತುವನ್ನು ಶಸ್ತ್ರಚಿಕಿತ್ಸಾ ವಿಧಾನಗಳಲ್ಲಿಯೂ ಬಳಸಲಾಗುತ್ತದೆ. ಹರಾಜಿನಲ್ಲಿ ಒಂದು ಮೀನು ಸುಮಾರು 7 ದಶಲಕ್ಷ ರೂಪಾಯಿ ಪಡೆದಿದೆ ಎಂದು ಬಲೋಚ್ ಹೇಳಿದರು.
ಈ ಸೋವಾ ಮೀನು ಸಾಮಾನ್ಯವಾಗಿ 20ರಿಂದ 49 ಕೆಜಿ ತೂಗುತ್ತದೆ ಮತ್ತು 1.5 ಮೀಟರ್‌ವರೆಗೂ ಬೆಳೆಯಬಲ್ಲದು. ಈ ಮೀನಿಗೆ ಪೂರ್ವ ಏಷ್ಯಾ ರಾಷ್ಟ್ರಗಳಲ್ಲಿ ವಿಶೇಷವಾದ ಬೇಡಿಕೆ ಇದೆ ಎಂದು ಅವರು ತಿಳಿಸಿದ್ದಾರೆ. ಎಲ್ಲಕ್ಕಿಂತ ಹೆಚ್ಚಾಗಿ ಸೋವಾ ಮೀನು, ಸಾಂಸ್ಕೃತಿಕ ಮತ್ತು ಸಾಂಪ್ರದಾಯಿಕ ಪ್ರಾಮುಖ್ಯತೆಯನ್ನು ಹೊಂದಿದೆ. ಸಾಂಪ್ರದಾಯಿಕ ಔಷಧಗಳು ಮತ್ತು ಸ್ಥಳೀಯ ಪಾಕಪದ್ಧತಿಯಲ್ಲಿ ಈ ಮೀನನ್ನು ವ್ಯಾಪಕವಾಗಿ ಬಳಸಲಾಗುತ್ತದೆ.
ನಾವು ಕರಾಚಿಯ ತೆರೆದ ಸಮುದ್ರದಲ್ಲಿ ಮೀನುಗಾರಿಕೆ ಮಾಡುತ್ತಿದ್ದೆವು … ಈ ಬೃಹತ್ ಗೋಲ್ಡನ್ ಮೀನಿನ ಸಂಗ್ರಹವನ್ನು ನಾವು ಕಂಡಾಗ ಮತ್ತು ಅದು ನಮಗೆ ಅದೃಷ್ಟು ಎಂಬಂತೆ ಭಾಸವಾಯಿತು ಎಂದು ಹಾಜಿ ಹೇಳಿದ್ದಾರೆ. ಈ ಮೀನು ಹರಾಜು ಮೂಲಕ ಬಂದಿರುವ ಹಣವನ್ನು ತಮ್ಮ ಏಳು ಜನ ಸಿಬ್ಬಂದಿಯ ಜತೆ ಹಂಚಿಕೊಳ್ಳುವುದಾಗಿ ಹಾಜಿ ಹೇಳಿಕೊಂಡಿದ್ದಾರೆ. ತಜ್ಞರ ಪ್ರಕಾರ, ಸಂತಾನೋತ್ಪತ್ತಿ ಅವಧಿಯಲ್ಲಿ ಮಾತ್ರ ಮೀನುಗಳು ಕರಾವಳಿಯ ಸಮೀಪಕ್ಕೆ ಬರುತ್ತವೆ.
ಈ ಸುದ್ದಿಯನ್ನೂ ಓದಿ: Indian fishermen: 198 ಭಾರತೀಯ ಮೀನುಗಾರರನ್ನು ಬಿಡುಗಡೆ ಮಾಡಿದ ಪಾಕಿಸ್ತಾನ, ಇನ್ನಿಬ್ಬರು ಅಲ್ಲೇ ಉಳಿದಿದ್ದೇಕೆ?