ನವದೆಹಲಿ: ಪಾಕಿಸ್ತಾನದ ಮಾಜಿ ಅಧ್ಯಕ್ಷ ಪರ್ವೇಜ್ ಮುಷರಫ್ (Pervez Musharraf Died) ಅವರು ದುಬೈ ಆಸ್ಪತ್ರೆಯಲ್ಲಿ ಭಾನುವಾರ ನಿಧನರಾಗಿದ್ದಾರೆ. ಅವರಿಗೆ 79 ವರ್ಷ ವಯಸ್ಸಾಗಿತ್ತು. ದೀರ್ಘ ಕಾಲದಿಂದಲೂ ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನು ದುಬೈ ಆಸ್ಪತ್ರೆ ದಾಖಲಿಸಲಾಗಿತ್ತು. ಅವರ ಪಾರ್ಥಿವ ಶರೀರವನ್ನು ದುಬೈನಿಂದ ಪಾಕಿಸ್ತಾನಕ್ಕೆ ತರುವ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಇಲ್ಲ. ಪಾಕಿಸ್ತಾನದಿಂದ ಹೊರಗಿದ್ದ ಅವರನ್ನು ವಾಪಸ್ ಸ್ವದೇಶಕ್ಕೆ ಕರೆ ತರುವ ಪ್ರಯತ್ನವು ಕಳೆದ ಒಂದು ವರ್ಷದಿಂದ ನಡೆದಿತ್ತು. ಅಮಿಲೋಯ್ಡೋಸಿಸ್ (Amyloidosis) ಎಂಬ ಕಾಯಿಲೆಯಿಂದ ಪರ್ವೇಜ್ ಅವರು ಬಳಲುತ್ತಿದ್ದರು.
2007ರಲ್ಲಿ ನಡೆದ ಮಾಜಿ ಪ್ರಧಾನಿ ಬೆನಜೀರ್ ಭುಟ್ಟೋ ಹತ್ಯೆಯ ಆರೋಪ ಎದುರಿಸುತ್ತಿರುವ ಮುಷರಫ್ ಕಳೆದ ಆರು ವರ್ಷಗಳಿಂದ ದುಬೈನಲ್ಲಿ ವಾಸಿಸುತ್ತಿದ್ದಾರೆ. ವಾಜಪೇಯಿ ಪ್ರಧಾನಿಯಾಗಿದ್ದಾಗ ಮುಷರಫ್ ಅವರು, ಉಭಯ ರಾಷ್ಟ್ರಗಳ ನಡುವಿನ ಆಗ್ರಾ ಶೃಂಗ ಸಭೆಯಲ್ಲಿ ಪಾಲ್ಗೊಳ್ಳಲು ಭಾರತಕ್ಕೆ ಆಗಮಿಸಿದ್ದರು. ಆದರೆ, ಈ ಸಭೆ ವಿಫಲವಾಗಿತ್ತು.
ಇದನ್ನೂ ಓದಿ: ಮುಷರಫ್‌ಗೆ ಕಾಡುತ್ತಿದೆ ಅಪರೂಪದ ಆರೋಗ್ಯ ಸಮಸ್ಯೆ, ಏನಿದು Amyloidosis?
ಸೇನಾ ಮುಖ್ಯಸ್ಥರಾಗಿದ್ದ ಪರ್ವೇಜ್ ಮುಷರಪ್ ಅವರು 1999ರಲ್ಲಿ ಕ್ಷಿಪ್ರ ಕ್ರಾಂತಿ ನಡೆಸಿ, ಪ್ರಧಾನಿ ನವಾಜ್ ಷರೀಫ್ ಅವರನ್ನು ಅಧಿಕಾರದಿಂದ ಕೆಳಗಿಳಿಸಿದರು. ಆಡಳಿತವನ್ನು ತಮ್ಮ ಕೈಗೆ ತೆಗೆದುಕೊಂಡರು. ಮುಂದೆ 2001ರಲ್ಲಿ ಪಾಕಿಸ್ತಾನದ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿದ್ದರು. 2008ರಲ್ಲಿ ಅಧಿಕಾರದಿಂದ ಕೆಳಗಿಳಿದರು. ಬೆನಜೀರ್ ಭುಟ್ಟೋ ಹತ್ಯೆಯ ಆರೋಪದ ಹಿನ್ನೆಲೆಯಲ್ಲಿ ದೇಶವನ್ನು ಅವರು ತೊರೆದಿದ್ದರು.