ಢಾಕಾ: ಭಾರತದ ಮಿತ್ರರಾಷ್ಟ್ರ ಬಾಂಗ್ಲಾದೇಶದಲ್ಲಿ ಮೀಸಲಾತಿ ವಿರೋಧಿಸಿ ನಡೆಸುತ್ತಿರುವ ಪ್ರತಿಭಟನೆಯಿಂದಾಗಿ ಹಿಂಸಾಚಾರ, ಗಲಭೆ (Bangladesh Protests) ಉಂಟಾಗಿವೆ. ಶೇಖ್ ಹಸೀನಾ (Sheikh Hasina) ಅವರು ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿ ಭಾರತಕ್ಕೆ ಆಗಮಿಸಿದ್ದಾರೆ ಎಂದು ತಿಳಿದುಬಂದಿದೆ. ಇದರ ಮಧ್ಯೆಯೇ, ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐ ಕುತಂತ್ರದಿಂದಾಗಿಯೇ ಬಾಂಗ್ಲಾದೇಶದಲ್ಲಿ ಅರಾಜಕತೆ ಉಂಟಾಗಿದೆ ಎಂದು ತಿಳಿದುಬಂದಿದೆ. ಬಾಂಗ್ಲಾದೇಶದಲ್ಲಿ ಹಿಂಸಾಚಾರಕ್ಕೆ ಪಾಕಿಸ್ತಾನದ ಕೈವಾಡ ಏನು? ಏಕೆ? ಇದಕ್ಕೂ-ಭಾರತಕ್ಕೆ ಏನು ಸಂಬಂಧ ಎಂಬುದರ ವಿವರಣೆ ಇಲ್ಲಿದೆ.
ಪಾಕಿಸ್ತಾನದ ಕೈವಾಡ ಏನು?
ಬಾಂಗ್ಲಾದೇಶದಲ್ಲಿ ಜಮಾತ್-ಎ-ಇಸ್ಲಾಮಿ ಎಂಬ ನಿಷೇಧಿತ ಸಂಘಟನೆಯ ವಿದ್ಯಾರ್ಥಿ ಘಟಕವಾಗಿರುವ ಛತ್ರಾ ಶಿಬಿರ್ ಎಂಬ ಸಂಘಟನೆಗೆ ಪಾಕಿಸ್ತಾನದ ಐಎಸ್‌ಐ ಬೆಂಬಲ ಇದೆ ಎಂದು ತಿಳಿದುಬಂದಿದೆ. ಬಾಂಗ್ಲಾದೇಶ ವಿಮೋಚನೆ ಹೋರಾಟದ ವೇಳೆ ಭಾಗಿಯಾದವರ ಕುಟುಂಬಸ್ಥರಿಗೆ ನೀಡುವ ಮೀಸಲಾತಿಯನ್ನು ಶೇ.5ಕ್ಕೆ ಇಳಿಸಿದರೂ ಪ್ರತಿಭಟನೆ ನಡೆಸಲಾಗುತ್ತಿದೆ. ಪ್ರತಿಭಟನೆಯ ಹಿಂದಿರುವ ಪ್ರಮುಖ ವಿದ್ಯಾರ್ಥಿ ಸಂಘಟನೆಗಳಲ್ಲಿ ಛತ್ರಾ ಶಿಬಿರ್ ಎಂಬ ಸಂಘಟನೆಯ ಪಾತ್ರ ಪ್ರಮುಖವಾಗಿದೆ. ಇದಕ್ಕೆ ಪಾಕಿಸ್ತಾನವು ಹಣಕಾಸು ನೆರವು ಕೂಡ ನೀಡುತ್ತಿದೆ ಎಂದು ತಿಳಿದುಬಂದಿದೆ.
ಶೇಖ್ ಹಸೀನಾ ವಿರುದ್ಧ ಪಾಕ್ ಆಕ್ರೋಶವೇಕೆ?
ಶೇಖ್ ಹಸೀನಾ ಅವರು ಕಳೆದ 15 ವರ್ಷಗಳಿಂದ ಬಾಂಗ್ಲಾದೇಶದಲ್ಲಿ ಆಡಳಿತ ನಡೆಸುತ್ತಿದ್ದಾರೆ. ಅವರು ರಾಷ್ಟ್ರೀಯವಾದದಲ್ಲಿ ನಂಬಿಕೆ ಇರಿಸಿರುವುದರ ಜತೆಗೆ ಜನರ ಬೆಂಬಲ ಗಳಿಸಿದ್ದಾರೆ. ಬಡತನ ಪ್ರಮಾಣವನ್ನು ಶೇ.5ಕ್ಕೆ ಇಳಿಸಿದ್ದಾರೆ. ಇದರ ಜತೆಗೆ ಭಾರತದ ಜತೆ ಉತ್ತಮ ದ್ವಿಪಕ್ಷೀಯ ಸಂಬಂಧ ಹೊಂದಿದ್ದಾರೆ. ಮೇಲಾಗಿ, ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಇದನ್ನು ಸಹಿಸದ ಪಾಕಿಸ್ತಾನವು, ಬಾಂಗ್ಲಾದೇಶದಲ್ಲಿ ಭಾರತ ವಿರೋಧಿ ಬಾಂಗ್ಲಾದೇಶ ನ್ಯಾಷನಲಿಸ್ಟ್ ಪಾರ್ಟಿಯು ಅಧಿಕಾರಕ್ಕೆ ಬರಬೇಕು ಎಂಬುದು ಪಾಕಿಸ್ತಾನದ ಕುತಂತ್ರವಾಗಿದೆ. ಇದಕ್ಕಾಗಿ ಹಿಂಸೆಗೆ ಪ್ರಚೋದನೆ ನೀಡುತ್ತಿದೆ ಎಂದು ಹೇಳಲಾಗುತ್ತಿದೆ.
ಪಾಕಿಸ್ತಾನವು ಕಾಶ್ಮೀರದಲ್ಲಿ ಅಶಾಂತಿ ಸೃಷ್ಟಿಸಲು ಕುತಂತ್ರ ಮಾಡುತ್ತದೆ. ಬಾಂಗ್ಲಾದೇಶ ಭಾರತದ ಗಡಿ ಪ್ರದೇಶವಾಗಿರುವ ಕಾರಣ, ಬಾಂಗ್ಲಾದೇಶದಲ್ಲಿ ಭಾರತ ವಿರೋಧಿ ಪಕ್ಷವು ಆಡಳಿತಕ್ಕೆ ಬಂದರೆ, ಬಾಂಗ್ಲಾ ಮೂಲಕವೂ ಭಾರತದಲ್ಲಿ ಉಗ್ರರನ್ನು ಛೂಬಿಟ್ಟು ಅಂಶಾತಿ ಸೃಷ್ಟಿಸಬಹುದು ಎಂಬುದು ಐಎಸ್‌ಐ ಲೆಕ್ಕಾಚಾರವಾಗಿದೆ. ಪಾಕಿಸ್ತಾನದ ಐಎಸ್‌ಐ ಜತೆಗೆ ವಿದೇಶಿ ಎನ್‌ಜಿಒಗಳು ಕೂಡ ಬಾಂಗ್ಲಾದೇಶದ ಗಲಭೆಯ ಹಿಂದಿವೆ ಎಂದು ಗುಪ್ತಚರ ಮೂಲಗಳು ತಿಳಿಸಿವೆ.
ಇದನ್ನೂ ಓದಿ: Bangladesh Protests: ಬಾಂಗ್ಲಾದೇಶದಲ್ಲಿ ಭುಗಿಲೆದ್ದ ಹಿಂಸಾಚಾರ; ಮೃತರ ಸಂಖ್ಯೆ 98ಕ್ಕೆ ಏರಿಕೆ: ಭಾರತೀಯರಿಗೆ ಮುನ್ನೆಚ್ಚರಿಕೆ