Site icon Vistara News

Pakistan: ಭಾರತ ಸೂಪರ್‌ ಪವರ್‌ ಆಗುತ್ತಿದೆ, ಪಾಕಿಸ್ತಾನ ಮಾತ್ರ ಭಿಕ್ಷೆ ಬೇಡ್ತಿದೆ; ಪಾಕ್ ಸಂಸತ್ ನಲ್ಲೇ ರೋದನ!

ಪಾಕಿಸ್ತಾನ: ಆರ್ಥಿಕ ದಿವಾಳಿತನ(Bankruptcy) ದಿಂದ ತೀರ ಸಂಕಷ್ಟಕ್ಕೆ ಬಿದ್ದಿರುವ ಪಾಕಿಸ್ತಾನ(Pakistan) ಪ್ರಜೆಗಳು ಭಾರತದ ಆಡಳಿತ ವೈಖರಿ ಬಗ್ಗೆ ಹೊಗಳುತ್ತಿರುವ ವಿಡಿಯೋಗಳು ಆಗಾಗ ವೈರಲ್‌ ಆಗುತ್ತಿರುತ್ತವೆ. ಇದೀಗ ಸ್ವತಃ ಅಲ್ಲಿನ ವಿಪಕ್ಷ ನಾಯಕನೇ ಭಾರತದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇಡೀ ಪ್ರಪಂಚದಲ್ಲೇ ಭಾರತ(India) ಬಲಿಷ್ಠ ರಾಷ್ಟ್ರವಾಗಿ ಬೆಳೆಯುತ್ತಿದೆ. ನಾವು ಮಾತ್ರ ಹಣಕಾಸಿನ ಸಹಾಯಕ್ಕಾಗಿ ಭಿಕ್ಷೆ ಬೇಡುತ್ತಿದ್ದೇವೆ ಎಂದು ಪಾಕಿಸ್ತಾನದ ವಿಪಕ್ಷ ನಾಯಕ ಮೌಲಾನ ಫಜ್ಲೂರ್‌ ರೆಹಮಾನ್‌(Maulana Fazlur Rehman) ಹೇಳಿದ್ದಾರೆ. ಅವರು ಪಾಕಿಸ್ತಾನ ಸಂಸತ್‌ನಲ್ಲಿ ಸರ್ಕಾರ ವೈಫಲ್ಯದ ವಿರುದ್ಧ ವಾಗ್ದಾಳಿ ನಡೆಸುತ್ತಾ ಭಾರತದ ವಿಚಾರವನ್ನು ಪ್ರಸ್ತಾಪಿಸಿದರು. ಭಾರತ ಜಾಗತಿಕ ಮಟ್ಟದಲ್ಲಿ ಸೂಪರ್‌ ಪವರ್‌ಫುಲ್‌ ರಾಷ್ಟ್ರವಾಗಿ ಬೆಳೆಯುತ್ತಿದೆ ಪಾಕಿಸ್ತಾನ ಮಾತ್ರ ದಿವಾಳಿತನದ ಸಾಗುತ್ತಿದೆ. 1947ರಲ್ಲಿ ಭಾರತ ಮತ್ತು ಪಾಕಿಸ್ತಾನ ಸ್ವಾತಂತ್ರ್ಯ ಪಡೆದುಕೊಂಡಿತ್ತು. ಇಂದು ಭಾರತದ ಸ್ಥಿತಿ ಎಲ್ಲಿದೆ ಹಾಗೂ ನಮ್ಮ ಸ್ಥಿತಿ ಎಲ್ಲಿದೆ? ಇಷ್ಟಕ್ಕೆಲ್ಲಾ ಯಾರು ಹೊಣೆ ಎಂದು ಜಮಾತ್‌ ಉಲೇಮಾ ಎ-ಇಸ್ಲಾಂನ ಅಧ್ಯಕ್ಷರೂ ಆಗಿರುವ ಫಜ್ಲೂರ್‌ ರೆಹಮಾನ್‌ ಕಟುವಾಗಿ ಪ್ರಶ್ನಿಸಿದ್ದಾರೆ.

ಅವರು ಇತ್ತೀಚೆಗೆ ನಡೆದ ಚುನಾವಣೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದು, ಇದು ಎಂಥಾ ಚುನಾವಣೆ? ಇಲ್ಲಿ ಸೋಲುಂಡವರಿಗೆ ತೃಪ್ತಿಯೇ ಇಲ್ಲ ಮತ್ತು ಗೆದ್ದವರಿಗೆ ಸಂತೋಷವೇ ಇಲ್ಲ. ಪ್ರಸ್ತುತ ಆಡಳಿತ ನಡೆಸುತ್ತಿರುವ ಸರ್ಕಾರದ ಸದಸ್ಯರು ನೈತಿಕತೆಯನ್ನು ಮರೆತು ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನೇ ಮಾರಾಟ ಮಾಡುತ್ತಿದ್ದಾರೆ. ಗೋಡೆಗಳ ಹಿಂದೆ ನಮ್ಮನ್ನು ನಿಯಂತ್ರಿಸುವ ಶಕ್ತಿಗಳಿವೆ, ಮತ್ತು ನಾವು ಕೇವಲ ಕೈಗೊಂಬೆಗಳಾಗಿದ್ದಾಗ ಅವರು ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ ಎಂದು ಫಜ್ಲುರ್ ರೆಹಮಾನ್ ಕಿಡಿ ಕಾರಿದರು.

ಅರಮನೆಗಳಲ್ಲಿ ಸರ್ಕಾರಗಳು ರಚನೆಯಾಗುತ್ತವೆ, ಮತ್ತು ಅಧಿಕಾರಶಾಹಿಗಳು ಪ್ರಧಾನ ಮಂತ್ರಿ ಯಾರು ಎಂದು ನಿರ್ಧರಿಸುತ್ತಾರೆ – ನಾವು ಎಷ್ಟು ದಿನ ರಾಜಿ ಮಾಡಿಕೊಳ್ಳಬೇಕಿದೆ? ಎಷ್ಟು ದಿನ ನಾವು ಶಾಸಕರಾಗಿ ಆಯ್ಕೆಯಾಗಲು ಬಾಹ್ಯ ಶಕ್ತಿಗಳಿಂದ ಸಹಾಯ ಪಡೆಯಬೇಕಿದೆ? ಪಾಕಿಸ್ತಾನ ಮುಸ್ಲಿಂ ಲೀಗ್ (ನವಾಜ್) ಮತ್ತು ಪಾಕಿಸ್ತಾನ್ ಪೀಪಲ್ಸ್ ಪಕ್ಷ ಅಧಿಕಾರದಿಂದ ಕೆಳಗಿಳಿದು ಪಿಟಿಐಗೆ ಸರ್ಕಾರ ರಚಿಸಲು ಅವಕಾಶ ನೀಡಬೇಕೆಂದು ರೆಹಮಾನ್ ಒತ್ತಾಯಿಸಿದ್ದಾರೆ. ಈ ಅಧಿಕಾರವನ್ನು ಬಿಟ್ಟುಬಿಡಿ. ಬಂದು ಇಲ್ಲಿ [ವಿರೋಧ ಪಕ್ಷದ ಬೆಂಚುಗಳಲ್ಲಿ] ಕುಳಿತುಕೊಳ್ಳಿ, ಮತ್ತು ಪಿಟಿಐ ಬಹುಮತ ಸಾಬೀತುಪಡಿಸುವಲ್ಲಿ ಯಶಸಿಯಾದರೆ ಅವರಿಗೆ ಸರ್ಕಾರವನ್ನು ಬಿಟ್ಟುಕೊಡಿ ಎಂದು ಅವರು ಒತ್ತಾಯಿಸಿದ್ದಾರೆ.

ಇದನ್ನೂ ಓದಿ: ಸಿಎಂ ಹುದ್ದೆ ಅಲಂಕಾರಿಕ ಅಲ್ಲ; 24×7 ಜನರಿಗೆ ಲಭ್ಯ ಇರಬೇಕು; ರಾಜೀನಾಮೆ ನೀಡದ ಕೇಜ್ರಿವಾಲ್‌ಗೆ ಕೋರ್ಟ್‌ ಚಾಟಿ

ಈ ವರ್ಷದ ಫೆಬ್ರುವರಿಯಲ್ಲಿ ಸಂಸತ್ತಿನ ಚುನಾವಣೆಯನ್ನು ನಡೆಸಿದ ಪಾಕಿಸ್ತಾನದಲ್ಲಿ ಯಾವುದೇ ಪಕ್ಷವು ಬಹುಮತವನ್ನು ಗಳಿಸಲಿಲ್ಲ. ಮಾಜಿ ಪ್ರಧಾನಿ ನವಾಜ್ ಷರೀಫ್ ಅವರ ಪಿಎಂಎಲ್-ಎನ್ ಸರ್ಕಾರ ರಚಿಸಲು ಪಿಪಿಪಿಯೊಂದಿಗೆ ಮೈತ್ರಿ ರಚಿಸಿ ಶೆಹಬಾಜ್ ಷರೀಫ್ ಅಧಿಕಾರದ ಚುಕ್ಕಾಣಿ ಹಿಡಿದಿದ್ದರು. ಪ್ರಸ್ತುತ ಪಾಕಿಸ್ತಾನ ಬಹುದೊಡ್ಡ ಮಟ್ಟದಲ್ಲಿ ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿದೆ. ಆದಾಗ್ಯೂ, IMF ನಿಧಿಯ ಸಹಾಯದಿಂದ, ಆರ್ಥಿಕ ಸ್ಥಿರತೆಯನ್ನು ಶೀಘ್ರದಲ್ಲೇ ಸಾಧಿಸಬಹುದು ಎಂದು ಸರ್ಕಾರ ಆಶಿಸಿದೆ.

Exit mobile version