ಇಸ್ಲಾಮಾಬಾದ್/ಲಂಡನ್: ಆರ್ಥಿಕವಾಗಿ ದಿವಾಳಿಯಾಗುತ್ತಿರುವ ಪಾಕಿಸ್ತಾನ(Cash-Strapped Pakistan), ಆದಾಯಕ್ಕೆ ಹೊಸ ಹೊಸ ಮಾರ್ಗಗಳನ್ನು ಹುಡುಕುತ್ತಿದೆ. ರಷ್ಯಾದೊಂದಿಗೆ (Russia) ಸೇನಾ ಕಾರ್ಯಾಚರಣೆಯಲ್ಲಿ ನಿರತವಾಗಿರುವ ಉಕ್ರೇನ್‌ಗೆ (Ukraine) ಪಾಕಿಸ್ತಾನವು ತನ್ನ ಶಸ್ತ್ರಾಸ್ತ್ರಗಳನ್ನು (Sale of Weapons) ಮಾರಾಟ ಮಾಡಿ, 36.4 ಕೋಟಿ ಡಾಲರ್ ಹಣವನ್ನು ಗಳಿಸಿದೆ ಎಂದು ಮಾಧ್ಯಮಗಳ ವರದಿ ಮಾಡಿದೆ(Media reports). ಆದರೆ, ಈ ವರದಿಯನ್ನು ಪಾಕಿಸ್ತಾನವು ತಳ್ಳಿ ಹಾಕಿದೆ.
ಬ್ರಿಟಿಷ್ ಮಿಲಿಟರಿ ಸರಕು ಸಾಗಣೆ ವಿಮಾನವು ರಾವಲ್ಪಿಂಡಿಯ ಪಾಕಿಸ್ತಾನದ ವಾಯುನೆಲೆ ನೂರ್ ಖಾನ್‌ನಿಂದ ಸೈಪ್ರಸ್‌ನ ಬ್ರಿಟಿಷ್ ಸೇನಾ ನೆಲೆ ಅಕ್ರೋತಿರಿ ಮತ್ತು ನಂತರ ರೊಮೇನಿಯಾಕ್ಕೆ ಒಟ್ಟು ಐದು ಬಾರಿ ಯುದ್ಧ ಪೀಡಿತ ದೇಶಕ್ಕೆ ಶಸ್ತ್ರಾಸ್ತ್ರಗಳನ್ನು ಪೂರೈಸಲು ಹಾರಾಟ ನಡೆಸಿದೆ ಎಂದು ಬಿಬಿಸಿ ಉರ್ದು ಸೋಮವಾರ ವರದಿ ಮಾಡಿದೆ. ಆದಾಗ್ಯೂ, ರೊಮೇನಿಯಾದ ನೆರೆಯ ರಾಷ್ಟ್ರವಾದ ಉಕ್ರೇನ್‌ಗೆ ತಾನು ಯಾವುದೇ ಮದ್ದುಗುಂಡುಗಳನ್ನು ಒದಗಿಸಿಲ್ಲ ಎಂದು ಇಸ್ಲಾಮಾಬಾದ್ ಸತತವಾಗಿ ನಿರಾಕರಿಸಿದೆ.
ಅಮೆರಿಕನ್ ಫೆಡರಲ್ ಪ್ರೊಕ್ಯೂರ್‌ಮೆಂಟ್ ಡೇಟಾ ಸಿಸ್ಟಮ್‌ನಿಂದ ಒಪ್ಪಂದದ ವಿವರಗಳನ್ನು ಉಲ್ಲೇಖಿಸಿ, 155 ಎಂಎಂ ಶೆಲ್‌ಗಳ ಮಾರಾಟಕ್ಕಾಗಿ ಪಾಕಿಸ್ತಾನವು “ಗ್ಲೋಬಲ್ ಮಿಲಿಟರಿ” ಮತ್ತು “ನಾರ್ಥ್ರಾಪ್ ಗ್ರುಮನ್” ಎಂಬ ಅಮೆರಿಕನ್ ಕಂಪನಿಗಳೊಂದಿಗೆ ಎರಡು ಒಪ್ಪಂದಗಳಿಗೆ ಸಹಿ ಹಾಕಿದೆ ಎಂದು ಬಿಬಿಸಿ ವರದಿ ಮಾಡಿದೆ. ಉಕ್ರೇನ್‌ಗೆ ಶಸ್ತ್ರಾಸ್ತ್ರಗಳನ್ನು ಒದಗಿಸುವ ಈ ಒಪ್ಪಂದಗಳಿಗೆ 2022 ಆಗಸ್ಟ್ 17ರಂದು ಸಹಿ ಮಾಡಲಾಗಿದೆ ಮತ್ತು ನಿರ್ದಿಷ್ಟವಾಗಿ 155 ಎಂಎಂ ಶೆಲ್‌ಗಳ ಖರೀದಿಗೆ ಲಿಂಕ್ ಮಾಡಲಾಗಿದೆ.
ಇಸ್ಲಾಮಾಬಾದ್‌ನಲ್ಲಿರುವ ವಿದೇಶಾಂಗ ಕಚೇರಿಯು ಉಕ್ರೇನ್‌ಗೆ ಯಾವುದೇ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳ ಮಾರಾಟವನ್ನು ನಿರಾಕರಿಸಿದೆ. ಪಾಕಿಸ್ತಾನವು ಉಭಯ ದೇಶಗಳ ನಡುವಿನ ವಿವಾದದಲ್ಲಿ “ಕಟ್ಟುನಿಟ್ಟಾದ ತಟಸ್ಥ” ನೀತಿಯನ್ನು ಉಳಿಸಿಕೊಂಡಿದೆ ಮತ್ತು ಆ ಸಂದರ್ಭದಲ್ಲಿ ಅವರಿಗೆ ಯಾವುದೇ ಶಸ್ತ್ರಾಸ್ತ್ರ ಅಥವಾ ಮದ್ದುಗುಂಡುಗಳನ್ನು ಮಾರಾಟ ಮಾಡಿಲ್ಲ ಎಂದು ಸ್ಪಷ್ಟಪಡಿಸಿದೆ.
ಕಳೆದ ವರ್ಷ ಏಪ್ರಿಲ್‌ನಲ್ಲಿ ಅವಿಶ್ವಾಸ ಮತದ ಮೂಲಕ ಇಮ್ರಾನ್ ಖಾನ್ ನೇತೃತ್ವದ ಸರ್ಕಾರವನ್ನು ಪದಚ್ಯುತಗೊಳಿಸಿದ ಬಹು ಪಕ್ಷಗಳ ಒಕ್ಕೂಟವಾದ ಪಾಕಿಸ್ತಾನ್ ಡೆಮಾಕ್ರಟಿಕ್ ಮೂವ್‌ಮೆಂಟ್ (ಪಿಡಿಎಂ) ಆಡಳಿತದ ಅವಧಿಯಲ್ಲಿ ಈ ಆಪಾದಿತ ಒಪ್ಪಂದಗಳು ನಡೆದಿವೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಅಂದಿನ ಪಾಕಿಸ್ತಾನ ಸೇನಾ ಮುಖ್ಯಸ್ಥ ಜನರಲ್ ಕಮರ್ ಜಾವೇದ್ ಬಾಜ್ವಾ ಅವರು ಪಾಕಿಸ್ತಾನ-ಇಂಗ್ಲೆಂಡ್ ನಡುವಿನ ಸಂಬಂಧಗಳನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುವ ಪ್ರತಿಜ್ಞೆ ಮಾಡಿದ್ದರು.
2022ರ ಆಗಸ್ಟ್‌ನಲ್ಲಿ ಈ ಒಪ್ಪಂದಗಳಿಗೆ ಸಹಿ ಹಾಕಿದಾಗ, ಉಕ್ರೇನ್ ಬಿಕ್ಕಟ್ಟು ಪಾಕಿಸ್ತಾನದಲ್ಲಿ ರಾಜಕೀಯ ಚರ್ಚೆಯ ಒಂದು ಭಾಗವಾಗಿತ್ತು. ವಿಶೇಷವಾಗಿ ಕ್ರಿಕೆಟಿಗ-ರಾಜಕಾರಣಿ ಖಾನ್ ಅವರು ಫೆಬ್ರವರಿ 24 ರಂದು ರಷ್ಯಾಕ್ಕೆ ಭೇಟಿ ನೀಡಿದಾಗ, ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಉಕ್ರೇನ್ ಆಕ್ರಮಣಕ್ಕೆ ಆದೇಶಿಸಿದ್ದರು. ಇದಾದ ಕೆಲವು ತಿಂಗಳ ಬಳಿಕ ಅಂದಿನ ಸೇನಾ ಮುಖ್ಯಸ್ಥ ಬಾಜ್ವಾ ಅವರು ಸಾರ್ವಜನಿಕವಾಗಿ ಖಾನ್ ಅವರಿಂದ ಅಂತರ ಕಾಯ್ದುಕೊಂಡರು ಮಾತ್ರವಲ್ಲದೇ, ಕೂಡಲೇ ರಷ್ಯಾ ತನ್ನ ದಾಳಿಯನ್ನು ನಿಲ್ಲಿಸಬೇಕೆಂದು ಒತ್ತಾಯಿಸಿದರು.
ಈ ಮಧ್ಯೆ ಪಾಕಿಸ್ತಾನದ ಮೂಲಕ ಶಸ್ತ್ರಾಸ್ತ್ರ ಖರೀದಿಯ ಒಪ್ಪಂದವನ್ನು ಯುದ್ಧನಿರತ ಉಕ್ರೇನ ಕೂಡ ತಳ್ಳಿ ಹಾಕಿದೆ.
ಈ ಸುದ್ದಿಯನ್ನೂ ಓದಿ: ಪಾಕಿಸ್ತಾನದ ಕರಾಚಿಯಲ್ಲಿ ಬೀಡುಬಿಟ್ಟ ಚೀನಿ ಜಲಾಂತರ್ಗಾಮಿ, ಯುದ್ಧ ಹಡಗು!