Site icon Vistara News

Iran Attack: ಇರಾನ್‌ ಕ್ಷಿಪಣಿ ದಾಳಿಗೆ ಕಂಗೆಟ್ಟ ಪಾಕಿಸ್ತಾನ; ಬೆಂಬಲಿಸುವುದೇ ಚೀನಾ?

Pakistan Airstrike

Pakistan carries out retaliatory attacks in Iran over earlier airstrikes

ಇಸ್ಲಾಮಾಬಾದ್:‌ ಉಗ್ರರನ್ನು ಒಡಲೊಳಗಿಟ್ಟುಕೊಂಡು ಕಾಪಾಡುವ, ಉಗ್ರರನ್ನು ಸಾಕಿ ಸಲಹುವ, ಹಣಕಾಸು ನೆರವು ನೀಡುವ ಪಾಕಿಸ್ತಾನಕ್ಕೆ ಉಗ್ರರೇ ಈಗ ಮುಳುವಾಗುತ್ತಿದ್ದಾರೆ. ಇದಕ್ಕೆ ನಿದರ್ಶನ ಎಂಬಂತೆ, ಪಾಕಿಸ್ತಾನದಲ್ಲಿರುವ ಜೈಶ್‌ ಅಲ್‌ ಅದ್ಲ್‌ (Jaish al Adl) ಉಗ್ರ ಸಂಘಟನೆಯ ಎರಡು ನೆಲೆಗಳ ಮೇಲೆ ಇರಾನ್‌ ಕ್ಷಿಪಣಿ ದಾಳಿ (Iran Attack) ನಡೆಸಿದೆ. ಆರ್ಥಿಕವಾಗಿ ಕಂಗೆಟ್ಟಿರುವ, ಉಗ್ರ ಪೋಷಣೆಗಾಗಿ ಜಾಗತಿಕವಾಗಿ ವಿರೋಧ ಎದುರಿಸುತ್ತಿರುವ ಪಾಕಿಸ್ತಾನವು (Pakistan) ಇರಾನ್‌ ದಾಳಿಗೆ ತತ್ತರಿಸಿಹೋಗಿದೆ ಎಂದು ತಿಳಿದುಬಂದಿದೆ.

ಪಾಕಿಸ್ತಾನದ ಬಲೂಚಿಸ್ತಾನದಲ್ಲಿರುವ ಎರಡು ಉಗ್ರರ ನೆಲೆಗಳ ಮೇಲೆ ಮಾತ್ರ ಕ್ಷಿಪಣಿ ದಾಳಿ ನಡೆಸಲಾಗಿದೆ ಎಂದು ಇರಾನ್‌ ಸ್ಪಷ್ಟಪಡಿಸಿದೆ. ಆದರೆ, ಇರಾನ್‌ ಅಮಾಯಕರ ಮೇಲೆ ದಾಳಿ ನಡೆಸಿದೆ ಎಂಬಂತೆ ಬಿಂಬಿಸುತ್ತಿರುವ ಪಾಕಿಸ್ತಾನವು, “ಇರಾನ್‌ ಕ್ಷಿಪಣಿ ದಾಳಿಗೆ ಇಬ್ಬರು ಮಕ್ಕಳು ಮೃತಪಟ್ಟಿದ್ದಾರೆ. ಮೂವರು ನಾಗರಿಕರು ಗಾಯಗೊಂಡಿದ್ದಾರೆ. ಕ್ಷಿಪಣಿ ದಾಳಿಯ ಪರಿಣಾಮವನ್ನು ಇರಾನ್‌ ಗಂಭೀರವಾಗಿ ಎದುರಿಸಬೇಕಾಗುತ್ತದೆ” ಎಂದು ಗುಟುರು ಹಾಕಿದೆ. ಆದರೆ, ಇದಾವುದಕ್ಕೂ ಇರಾನ್‌ ಸೊಪ್ಪು ಹಾಕುತ್ತಿಲ್ಲ ಎಂದು ತಿಳಿದುಬಂದಿದೆ.

ಬೆಂಬಲಿಸುವುದೇ ಚೀನಾ?

ಪಾಕಿಸ್ತಾನ ಉಗ್ರ ಪೋಷಣೆ ಮಾಡಲಿ, ಉಗ್ರರಿಗೆ ಹಣಕಾಸು ನೆರವು ನೀಡಲಿ, ಗಡಿ ಭಯೋತ್ಪಾದನೆಗೆ ಎಷ್ಟೇ ಬೆಂಬಲ ನೀಡಿದರೂ ವೈಯಕ್ತಿಕವಾಗಿ ಹಾಗೂ ಜಾಗತಿಕ ವೇದಿಕೆಗಳಲ್ಲಿ ಪಾಕಿಸ್ತಾನದ ಪರ ಚೀನಾ ನಿಲ್ಲುತ್ತದೆ. ಈಗ ಆರ್ಥಿಕವಾಗಿ ದಿವಾಳಿಯಾಗಿರುವ, ರಾಜಕೀಯವಾಗಿ ಅರಾಜಕತೆ ತಲೆದೋರಿರುವ ಪಾಕಿಸ್ತಾನಕ್ಕೆ ಚೀನಾ ಬೆಂಬಲ ನೀಡುವುದೇ ಎಂಬ ಪ್ರಶ್ನೆ ಮೂಡಿದೆ. ಚೀನಾದ ಬೆಂಬಲ ಇರುವ ಕಾರಣದಿಂದಲೇ ಇರಾನ್‌ಗೆ ಪಾಕಿಸ್ತಾನವು ಗಂಭೀರ ಪರಿಣಾಮದ ಎಚ್ಚರಿಕೆ ನೀಡಿದೆ ಎನ್ನಲಾಗುತ್ತಿದೆ.

“ಇರಾನ್ ಕ್ಷಿಪಣಿ ಹಾಗೂ ಡ್ರೋನ್‌ಗಳ ದಾಳಿಗೆ ಪಾಕಿಸ್ತಾನ ತತ್ತರಿಸಿಹೋಗಿದೆ. ಜೈಶ್‌ ಅಲ್‌ ಅದ್ಲ್‌ ಉಗ್ರ ಸಂಘಟನೆಯ ಎರಡೂ ನೆಲೆಗಳನ್ನು ಸಂಪೂರ್ಣವಾಗಿ ಧ್ವಂಸಗೊಂಡಿವೆ” ಎಂದಷ್ಟೇ ಇರಾನ್‌ ಮಾಧ್ಯಮಗಳು ವರದಿ ಮಾಡಿವೆ. ಆದರೆ, ಸಾವು-ನೋವಿನ ಕುರಿತು ವರದಿಯಲ್ಲಿ ಉಲ್ಲೇಖಿಸಿಲ್ಲ. ಗಡಿಯಲ್ಲಿ ಈಗಾಗಲೇ ಇರಾನ್‌ ಜೈಶ್‌ ಅಲ್‌ ಅದ್ಲ್‌ ಉಗ್ರ ಸಂಘಟನೆಯ ಜತೆ ಸಂಘರ್ಷಕ್ಕೆ ಇಳಿದಿತ್ತು. ಈಗ ವಾಯುದಾಳಿ ಮೂಲಕ ಎರಡು ನೆಲೆಗಳನ್ನು ಧ್ವಂಸಗೊಳಿಸಿದೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: Iran: ಪಾಕಿಸ್ತಾನದಲ್ಲಿರುವ ಉಗ್ರ ನೆಲೆಗಳ ಮೇಲೆ ಇರಾನ್ ಕ್ಷಿಪಣಿ ದಾಳಿ

ಜನವರಿಯ ಆರಂಭದಲ್ಲಿ ಇರಾನ್‌ನಲ್ಲಿ ಎರಡು ಆತ್ಮಾಹುತಿ ಬಾಂಬ್‌ ದಾಳಿ ನಡೆದಿದ್ದವು. ಇದರಿಂದ ಇರಾನ್‌ನ 80ಕ್ಕೂ ಅಧಿಕ ನಾಗರಿಕರು ಮೃತಪಟ್ಟಿದ್ದರು. ದಾಳಿಯನ್ನು ಹೊಣೆಯನ್ನು ಐಸಿಸ್‌ ಹೊತ್ತುಕೊಂಡ ಕಾರಣ ಇರಾಕ್‌ ಹಾಗೂ ಸಿರಿಯಾ ಮೇಲೆ ಇರಾನ್‌ ಕ್ಷಿಪಣಿ ದಾಳಿ ನಡೆಸಿತ್ತು. ಇದರ ಬೆನ್ನಲ್ಲೇ ಪಾಕಿಸ್ತಾನದ ಮೇಲೂ ಕ್ರಿಪಣಿ ಹಾಗೂ ಡ್ರೋನ್‌ಗಳ ಮೂಲಕ ದಾಳಿ ನಡೆಸಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version