ಪಾಕಿಸ್ತಾನದ ನಟಿ ಉಷ್ನಾ ಶಾ (Ushna Shah) ಅವರು ಇತ್ತೀಚೆಗೆ ಗಾಲ್ಫ್ ಆಟಗಾರ ಹಮ್ಜಾ ಅಮಿನ್ ಅವರನ್ನು ವಿವಾಹವಾಗಿದ್ದಾರೆ. ಕುಟುಂಬದವರು, ಸ್ನೇಹಿತರು, ಆತ್ಮೀಯರ ಸಮ್ಮುಖದಲ್ಲಿ ಇವರ ಮದುವೆ ಸಂಭ್ರಮದಿಂದ ನೆರವೇರಿತು. ಅದರ ಫೋಟೋಗಳು, ವಿಡಿಯೊಗಳು ವೈರಲ್ ಆದವು. ಜತೆಗೇ ಉಷ್ನಾ ಶಾ ಟ್ರೋಲ್ ಆದರು. ತಮ್ಮದೇ ದೇಶದ ಇಸ್ಲಾಂ ಮುಖಂಡರ, ಪ್ರಮುಖ ಧಾರ್ಮಿಕ ನಾಯಕರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಉಷ್ನಾ ಶಾ ಪಾಕಿಸ್ತಾನದವರಾಗಿದ್ದರೂ, ತಮ್ಮ ಮದವೆಯಲ್ಲಿ ಭಾರತೀಯ ಸಂಸ್ಕೃತಿಯನ್ನು ಬಿಂಬಿಸುವ ಉಡುಪು ಧರಿಸಿದ್ದರು. ಕೆಂಪು ಬಣ್ಣದ ಲೆಹಂಗಾ ಧರಿಸಿದ್ದರು. ಇಂಥ ಉಡುಪನ್ನು ಭಾರತದಲ್ಲಿ, ಅದರಲ್ಲೂ ರಾಜಸ್ಥಾನದಲ್ಲಿ ಹುಡುಗಿಯರು ಮದುವೆ ವೇಳೆ ಧರಿಸುತ್ತಾರೆ ಎಂಬ ವಿಷಯ ಇಟ್ಟುಕೊಂಡು ಪಾಕಿಸ್ತಾನದ ನೆಟ್ಟಿಗರು ಉಷ್ನಾ ಷಾರನ್ನು ಟಾರ್ಗೆಟ್ ಮಾಡಿದ್ದಾರೆ. ಪಾಕಿಸ್ತಾನಕ್ಕೆ ಅದರದ್ದೇ ಆದ ಪರಂಪರೆಯಿದೆ. ಇಲ್ಲಿನ ಉಡುಪಿನ ಶೈಲಿ ಬೇರೆ. ಇಲ್ಲಿನ ಹುಡುಗಿಯರು ಈ ದೇಶದ ಸಂಸ್ಕೃತಿಯಂತೆ ಉಡುಪು ಧರಿಸಿ, ಮದುವೆಯಾಗಬೇಕು ಎಂದು ಇಸ್ಲಾಂ ಮುಖಂಡರು ಕಿಡಿ ಕಾರಿದ್ದಾರೆ.
ಇದನ್ನೂ ಓದಿ: Viral Video : ನಾಟು ನಾಟು ಹಾಡಿಗೆ ನೃತ್ಯ ಮಾಡಿದ ಪಾಕಿಸ್ತಾನಿ ನಟಿ; ಅಬ್ಬಬ್ಬಾ ಎನ್ನಲಾರಂಭಿಸಿದ್ದಾರೆ ನೆಟ್ಟಿಗರು
ನೆಟ್ಟಿಗರಂತೂ ಉಷ್ನಾರನ್ನು ಉದ್ದೇಶಿಸಿ ಹಲವು ಕಮೆಂಟ್ಗಳನ್ನು ಮಾಡಿದ್ದಾರೆ. ‘ಭಾರತದ ಸಂಸ್ಕೃತಿಯನ್ನು ಪಾಕಿಸ್ತಾನದಲ್ಲಿ ಏಕೆ ಪ್ರಸ್ತುತ ಪಡಿಸುತ್ತೀರಿ?’ ನಾವು ಮುಸ್ಲಿಮರು, ನಮ್ಮ ಧರ್ಮದಲ್ಲಿ ಇಂಥ ಉಡುಪುಗಳನ್ನು ಧರಿಸುವುದು ನಿಷಿದ್ಧ’, ‘ಪಾಕಿಸ್ತಾನದವರಾದ ನೀವು ಭಾರತೀಯ ವಧುವಿನಂತೆ ತಯಾರಾಗಿದ್ದು ಏಕೆ?, ಇದು ನಮ್ಮ ಸಂಸ್ಕೃತಿಯೇ ಅಲ್ಲ’, ‘ಪಾಕಿಸ್ತಾನದ ಸಂಸ್ಕೃತಿ ಹೆಸರಲ್ಲಿ, ಭಾರತೀಯ ಸಂಸ್ಕೃತಿಯನ್ನು ಪ್ರಚಾರ ಮಾಡುತ್ತ, ಇಲ್ಲಿನ ಜನರನ್ನು ಏಕೆ ಮೂರ್ಖರನ್ನಾಗಿಸುತ್ತಿದ್ದೀರಿ?, ಇಂಥದ್ದನ್ನೆಲ್ಲ ನಾವು ಸಹಿಸಿಕೊಳ್ಳುವುದಿಲ್ಲ’ ಎಂಬಂಥ ಅನೇಕಾನೇಕ ವ್ಯಂಗ್ಯ, ಬೈಗುಳಗಳು ಉಷ್ನಾ ಪಾಲಾಗಿವೆ. ಈ ಮಧ್ಯೆ ತಮ್ಮ ಫೋಟೋಗಳನ್ನು/ವಿಡಿಯೊಗಳನ್ನು ವೈರಲ್ ಮಾಡದಂತೆ ಫೋಟೋಗ್ರಾಫರ್, ಫ್ಯಾಶನಲ್ ಬ್ಲಾಗರ್ಗೆ ಹೇಳಿದ್ದರೂ, ಅವರು ನಿಯಮ ಉಲ್ಲಂಘಿಸಿದ್ದಾರೆ ಎಂದು ಉಷ್ನಾ ಆರೋಪಿಸಿದ್ದಾರೆ.