Site icon Vistara News

Pakistan Passport: ಲ್ಯಾಮಿನೇಷನ್‌ ಪೇಪರ್‌ಗೂ ಗತಿ ಇಲ್ಲದ ಪಾಕ್‌; ಸಿಗುತ್ತಿಲ್ಲ ಪಾಸ್‌ಪೋರ್ಟ್‌!

Pakistan Passport

Pakistani citizens are not getting passports amid lamination paper shortage

ಇಸ್ಲಾಮಾಬಾದ್:‌ ಉಗ್ರರಿಗೆ ಹಣಕಾಸು ನೆರವು, ಭಯೋತ್ಪಾದಕರ ಪೋಷಣೆ, ಮಿತಿಮೀರಿದ ಭ್ರಷ್ಟಾಚಾರ, ದೂರದೃಷ್ಟಿ ಇಲ್ಲದ ಯೋಜನೆಗಳು, ಅಸಮರ್ಥ ನಾಯಕತ್ವದ ಕೊರತೆಯಿಂದ ಆರ್ಥಿಕವಾಗಿ ಪಾಕಿಸ್ತಾನ ಕಂಗೆಟ್ಟಿದೆ. ದೇಶದ ಜನರಿಗೆ ಮೂಲ ಸೌಕರ್ಯಗಳನ್ನೂ ಒದಗಿಸದಷ್ಟು ದಿವಾಳಿಯಾಗಿದೆ. ಹಣಕಾಸು ನೆರವು ನೀಡಿ ಎಂದು ಜಾಗತಿಕ ಸಂಸ್ಥೆಗಳ ಎದುರು ಭಿಕ್ಷಾಪಾತ್ರೆ ಹಿಡಿದು ನಿಲ್ಲುವಷ್ಟು ಪಾಕಿಸ್ತಾನ ಆರ್ಥಿಕವಾಗಿ ಮುಗ್ಗರಿಸಿಹೋಗಿದೆ. ಇಂತಹ ಹೀನ ಸ್ಥಿತಿಗೆ ತಲುಪಿರುವ ಪಾಕಿಸ್ತಾನದಲ್ಲಿ ಮತ್ತೊಂದು ಸಮಸ್ಯೆ ತಲೆದೋರಿದೆ. ಲ್ಯಾಮಿನೇಷನ್‌ ಪೇಪರ್‌ (Lamination Paper) ಇಲ್ಲದ ಕಾರಣ ತನ್ನ ನಾಗರಿಕರಿಗೆ ಪಾಸ್‌ಪೋರ್ಟ್‌ (Pakistan Passport) ವಿತರಿಸಲು ಕೂಡ ಆಗದ ಸ್ಥಿತಿಗೆ ನೆರೆ ರಾಷ್ಟ್ರ ತಲುಪಿದೆ.

ಹೌದು, ಪಾಕಿಸ್ತಾನದಲ್ಲಿ ಸಾವಿರಾರು ಜನರಿಗೆ ಹೊಸ ಪಾಸ್‌ಪೋರ್ಟ್‌ ವಿತರಣೆಯಾಗುತ್ತಿಲ್ಲ. ಪ್ರವಾಸ ಕೈಗೊಳ್ಳಲು, ಅಧ್ಯಯನ, ವ್ಯಾಪಾರ ಸೇರಿ ಹಲವು ಕಾರಣಗಳಿಗಾಗಿ ಬೇರೆ ದೇಶಗಳಿಗೆ ತೆರಳಲು ಹೊಸಬರಿಗೆ ಪಾಸ್‌ಪೋರ್ಟ್‌ ಸಿಗುತ್ತಿಲ್ಲ. ಲ್ಯಾಮಿನೇಷನ್‌ ಮಾಡುವ ಪೇಪರ್‌ ಸಿಗದ ಕಾರಣದಿಂದಾಗಿ ಸಾವಿರಾರು ಜನರಿಗೆ ಪಾಸ್‌ಪೋರ್ಟ್‌ ನೀಡಲು ಪಾಕ್‌ ಸರ್ಕಾರಕ್ಕೆ ಆಗುತ್ತಿಲ್ಲ ಎಂದು ತಿಳಿದುಬಂದಿದೆ. ಅದರಲ್ಲೂ, ಬೇರೆ ದೇಶಗಳಲ್ಲಿ ಅಧ್ಯಯನ ಮಾಡಬೇಕು ಎನ್ನುವ ಯುವಕರಿಗೆ ಇದು ನುಂಗಲಾರದ ತುತ್ತಾಗಿದೆ ಎಂದು ಹೇಳಲಾಗುತ್ತಿದೆ.

ಲ್ಯಾಮಿನೇಷನ್‌ ಪೇಪರ್‌ ಕೊರತೆ ಏಕೆ?

ಪಾಕಿಸ್ತಾನದಲ್ಲಿ ಪಾಸ್‌ಪೋರ್ಟ್‌ ಲ್ಯಾಮಿನೇಷನ್‌ಗೂ ಪೇಪರ್‌ ಕೊರತೆ ಉಂಟಾಗಿದೆ. ಪಾಕಿಸ್ತಾನವು ಫ್ರಾನ್ಸ್‌ನಿಂದ ಲ್ಯಾಮಿನೇಷನ್‌ ಪೇಪರ್‌ ಆಮದು ಮಾಡಿಕೊಳ್ಳುತ್ತದೆ. ಆದರೆ, ಕೆಲವು ತಿಂಗಳುಗಳಿಂದ ಪಾಕಿಸ್ತಾನವು ಆಮದು ಮಾಡಿಕೊಂಡ ಲ್ಯಾಮಿನೇಷನ್‌ ಪೇಪರ್‌ನ ಬಾಕಿ ಮೊತ್ತವನ್ನು ಪಾವತಿಸಿಲ್ಲ. ಇದರಿಂದಾಗಿ ಈಗ ಲ್ಯಾಮಿನೇಷನ್‌ ಪೇಪರ್‌ ರಫ್ತು ಮಾಡಲು ಫ್ರಾನ್ಸ್‌ ಒಪ್ಪುತ್ತಿಲ್ಲ. ಇತ್ತ ಹಳೆಯ ಬಾಕಿಯನ್ನು ಕೊಡಲು ಪಾಕ್‌ ಸರ್ಕಾರದ ಬಳಿ ದುಡ್ಡಿಲ್ಲ. ಹಾಗಾಗಿ, ಲ್ಯಾಮಿನೇಷನ್‌ ಇಲ್ಲದೆಯೇ ಸಾವಿರಾರು ಜನರಿಗೆ ಪಾಸ್‌ಪೋರ್ಟ್‌ ಸಿಗುತ್ತಿಲ್ಲ ಎಂದು ತಿಳಿದುಬಂದಿದೆ.

ಇದನ್ನೂ ಓದಿ: Pakistan Economy Crisis: ಪಾಕ್‌ನಲ್ಲಿ ಲೀಟರ್‌ ಹಾಲಿಗೆ 210 ರೂ., ಕೆ.ಜಿ ಚಿಕನ್‌ಗೆ 900 ರೂ., ಆರ್ಥಿಕ ದಿವಾಳಿಯತ್ತ ನೆರೆ ರಾಷ್ಟ್ರ

ಹೆಚ್ಚಾಯ್ತು ಜನಾಕ್ರೋಶ

ಪಾಸ್‌ಪೋರ್ಟ್‌ ಸಿಗದ ಕಾರಣ ಪಾಕ್‌ ನಾಗರಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. “ನಾನು ತುಂಬ ದಿನಗಳಿಂದ ಬ್ರಿಟನ್‌ನಲ್ಲಿ ಉನ್ನತ ವಿದ್ಯಾಭ್ಯಾಸ ಕೈಗೊಳ್ಳುವ ಕನಸು ಕಂಡಿದ್ದೆ. ಹಲವು ವರ್ಷಗಳ ಪರಿಶ್ರಮದ ಫಲವಾಗಿ ನನಗೆ ಬ್ರಿಟನ್‌ ವಿವಿಯಲ್ಲಿ ಪ್ರವೇಶಾತಿ ಸಿಕ್ಕಿದೆ. ಆದರೆ, ನನಗೆ ಪಾಸ್‌ಪಾರ್ಟ್‌ ಸಿಗುತ್ತಿಲ್ಲ. ಇದರಿಂದ ನನ್ನ ಕನಸು ಕಮರಿ ಹೋಗುತ್ತಿದೆ” ಎಂದು ಜೈನ್‌ ಇಜಾಜ್‌ ಎಂಬುವರು ಹೇಳಿದ್ದಾರೆ. ಹೀಗೆ ಬೇರೆ ದೇಶಗಳಲ್ಲಿರುವ ಕುಟುಂಬಸ್ಥರನ್ನು ಭೇಟಿಯಾಗುವವರು, ವ್ಯಾಪಾರಕ್ಕಾಗಿ ವಿದೇಶಗಳಿಗೆ ಹೋಗುವವರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

Exit mobile version