ಪಾಕಿಸ್ತಾನದಲ್ಲೀಗ ಹಲ್ಲಿ ಎಣ್ಣೆಗೆ ಭರ್ಜರಿ ಬೇಡಿಕೆ ಹೆಚ್ಚಿದೆ. ಅದರಲ್ಲೂ ರಾವಲ್ಪಿಂಡಿಯಲ್ಲಿ ಪುರುಷರು ಹೆಚ್ಚಿನ ಸಂಖ್ಯೆಯಲ್ಲಿ ಹಲ್ಲಿ ಎಣ್ಣೆ ಖರೀದಿ ಮಾಡುತ್ತಿದ್ದಾರೆ. ಕಾಳಸಂತೆಯಲ್ಲಿ ಹಲ್ಲಿ ತೈಲ ಮಾರಾಟ ಜೋರಾಗಿದೆ. ವ್ಯಾಪಾರಿಗಳು ಎದುರಲ್ಲಿ ಸತ್ತ ಹಲ್ಲಿಗಳನ್ನು ಇಟ್ಟುಕೊಂಡು, ಅಲ್ಲೇ ಒಂದು ಗ್ಯಾಸ್ ಒಲೆ ಇಟ್ಟು, ಎಣ್ಣೆಯನ್ನು ತಯಾರಿಸಿ ಗ್ರಾಹಕರಿಗೆ ಕೊಡುತ್ತಿದ್ದಾರೆ.
ಜೀವಂತ ಹಲ್ಲಿಯೆಂದರೇ ವಿಷ ಎಂದು ಪರಿಗಣಿಸಿ, ಕಂಡರೆ ಸಾಕು ಗಲೀಜು, ಅಪಶಕುನ ಎಂದು ಭಾವಿಸುವವರಿಗೆ ಪಾಕಿಸ್ತಾನದಲ್ಲಿ ಹಲ್ಲಿಗೆ ಬೇಡಿಕೆ ಬಂದಿದೆ ಎಂದರೆ ಅಚ್ಚರಿ-ಕುತೂಹಲ ಎನ್ನಿಸಬಹುದು. ಅಲ್ಲಿನ ಪುರುಷರು ಹಲ್ಲಿ ಎಣ್ಣೆ ಹಿಂದೆ ಬಿದ್ದು ಮತ್ತೇನಕ್ಕೂ ಅಲ್ಲ, ಲೈಂಗಿಕ ಶಕ್ತಿ ಹೆಚ್ಚಿಸಿಕೊಳ್ಳಲು. ಕಾಮ ಉದ್ದೀಪನವಾದ ವಯಾಗ್ರವನ್ನು ಪಾಕಿಸ್ತಾನದಲ್ಲಿ ನಿಷೇಧಿಸಿ ಹಲವು ವರ್ಷಗಳೇ ಕಳೆದು ಹೋಗಿವೆ. ವಯಾಗ್ರಾ, ಅಶ್ಲೀಲ ಸಿನಿಮಾಗಳು, ವಿಡಿಯೊಗಳೆಲ್ಲ ಇಸ್ಲಾಂ ಮೌಲ್ಯಕ್ಕೆ ವಿರೋಧಿ ಎಂಬ ಭಾವನೆ ಮುಸ್ಲಿಮರಲ್ಲಿ ಇದೆ. ವಯಾಗ್ರವನ್ನು ನಿಷೇಧಿಸಿರುವ ಕಾರಣ ಪುರುಷರು ಕಾಮ ಉತ್ತೇಜನಕ್ಕೆ ಪರ್ಯಾಯ ಮಾರ್ಗವಾಗಿ ಈ ಹಲ್ಲಿ ಎಣ್ಣೆಯನ್ನು ಕಂಡುಕೊಂಡಿದ್ದಾರೆ.
ರಾವಲ್ಪಿಂಡಿಯ ರಾಜಾ ಬಜಾರ್ ಎಂಬಲ್ಲಿ ಒಟ್ಟು ನಾಲ್ವರು ವ್ಯಾಪಾರಿಗಳು ಇದೇ ಕಾಯಕ ಮಾಡಿಕೊಂಡಿದ್ದಾರೆ. ಹಲ್ಲಿ ಎಣ್ಣೆಯ ಬಾಟಲಿ, ಸತ್ತ ಹಲ್ಲಿಗಳು ಜತೆಗೊಂದು ಗ್ಯಾಸ್ ಸ್ಟವ್ ಇಟ್ಟುಕೊಂಡು ಕುಳಿತಿರುತ್ತಾರೆ. ಆ ವ್ಯಾಪಾರಿಗಳನ್ನು ಮಾಧ್ಯಮವೊಂದು ಪ್ರಶ್ನಿಸಿದಾಗ ಯಾಸಿರ್ ಅಲಿ ಎಂಬಾತ ಉತ್ತರಿಸಿ ‘ಹಲ್ಲಿ ಎಣ್ಣೆಯ ನಾಲ್ಕೇನಾಲ್ಕು ಹನಿಗಳನ್ನು ಅಗತ್ಯ ಸ್ಥಳಕ್ಕೆ ಹಾಕಿ, ಮಸಾಜ್ ಮಾಡಿದರೆ ಸಾಕು. ಇದು ಮ್ಯಾಜಿಕ್ ಮಾಡುತ್ತದೆ. ಖಂಡಿತವಾಗಿಯೂ ಲೈಂಗಿಕ ಶಕ್ತಿಯನ್ನು ಹೆಚ್ಚಿಸುತ್ತದೆ’ ಎಂದು ಹೇಳಿದ್ದಾನೆ.
ಇದನ್ನೂ ಓದಿ: ಸ್ನೇಹಿತೆಯೊಂದಿಗೆ ಹೋಟೆಲ್ನಲ್ಲಿ ತಂಗಿದ್ದವ, ಮದ್ಯ ದೊಂದಿಗೆ ವಯಾಗ್ರ ಮಾತ್ರೆ ಸೇವಿಸಿ ಸಾವು; ವೈದ್ಯರು ನೀಡಿದ ಎಚ್ಚರಿಕೆ ಏನು?
ಪಾಕಿಸ್ತಾನದ ಸಿಂಧ್ ಮತ್ತು ಪಂಜಾಬ್ ಪ್ರಾಂತ್ಯಗಳಲ್ಲಿ ಇದೇ ಕಾರಣಕ್ಕೆ ಹಲ್ಲಿ ಬೇಟೆ ಹೆಚ್ಚಾಗಿದೆ. ತಮ್ಮ ಬಿಲದಿಂದ ಹೊರಬಂದ ಸರೀಸೃಪಗಳನ್ನು ಮುಲಾಜಿಲ್ಲದೆ ಕೊಂದು ಕಾಳಸಂತೆಗೆ ತರಲಾಗುತ್ತಿದೆ ಎಂದೂ ವರದಿಯಾಗಿದೆ. ಇನ್ನೂ ಕೆಲವರು ಈಗಾಗಲೇ ಖರೀದಿಸಿ ಹೋದವರು ತಿರುಗಿಬಿದ್ದಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ನಾವು ಬಳಕೆ ಮಾಡಿದ್ದೇವೆ. ಇದೊಂದು ಉಪಯೋಗವಿಲ್ಲದ ಎಣ್ಣೆ. ಬ್ಯಾಕ್ಟೀರಿಯಾದಿಂದ ತುಂಬಿದೆ. ಇನ್ಫೆಕ್ಷನ್ ಆಗುತ್ತದೆ ಎಂದೂ ಹೇಳಿದ್ದಾರೆ.
(ವಿ.ಸೂ.: ಹಲ್ಲಿ ಎಣ್ಣೆ ಕಾಮೋತ್ತೇಜಕ ಎಂಬುದು ಇದುವರೆಗೂ ವೈಜ್ಞಾನಿಕವಾಗಿ ಸಾಬೀತಾಗಿಲ್ಲ. ಇದು ಕಾಳಸಂತೆಯಲ್ಲಿ ಮಾರಾಟವಾಗುತ್ತಿರುವುದು ಹೊರತು ವೈದ್ಯಕೀಯ ಕ್ಷೇತ್ರದಿಂದ ಅನುಮೋದನೆಯನ್ನೂ ಪಡೆದಿಲ್ಲ. ನಾವಿಲ್ಲಿ ಪ್ರಕಟಿಸಿದ್ದು ಸುದ್ದಿಯನ್ನು ಮಾತ್ರ)