ಇಸ್ಲಾಮಾಬಾದ್: ಪ್ರತಿಭೆ ಗುಡಿಸಲಿನಲ್ಲಿ ಹುಟ್ಟಿ ಅರಮನೆಯಲ್ಲಿ ಅರಳುತ್ತದೆ ಎಂಬ ಮಾತಿದೆ. ಅದರಲ್ಲೂ, ಸಾಮಾಜಿಕ ಜಾಲತಾಣಗಳ ಯುಗವಾದ ಇಂದಿನ ಜಮಾನದಲ್ಲಿ ಕಲೆ, ನಟನೆ, ಗಾಯನ ಸೇರಿ ಯಾವುದೇ ಪ್ರತಿಭೆ ಇದ್ದವರೂ ರಾತ್ರೋರಾತ್ರಿ ಜನರ ಗಮನ ಸೆಳೆಯುತ್ತಾರೆ. ಅವರಿಗೆ ಹತ್ತಾರು ವೇದಿಕೆಗಳೂ ಸಿಗುತ್ತವೆ. ಇದಕ್ಕೆ ನಿದರ್ಶನ ಎಂಬಂತೆ, ಪಾಕಿಸ್ತಾನದಲ್ಲಿ (Pakistan) 1ನೇ ತರಗತಿ ಓದುವ, ವ್ಲಾಗಿಂಗ್ (Vlogging) ಮೂಲಕವೇ ಗಮನ ಸೆಳೆದ ಮೊಹಮ್ಮದ್ ಶಿರಾಜ್ (Mohammad Shiraz) ಎಂಬ ಪೋರನೀಗ ಪ್ರಧಾನಿ ಶೆಹಬಾಜ್ ಷರೀಫ್ (Shehbaz Sharif) ಅವರನ್ನು ಭೇಟಿಯಾಗಿದ್ದಾನೆ. ಅಷ್ಟೇ ಅಲ್ಲ, ನವಾಜ್ ಷರೀಫ್ ಅವರ ಕುರ್ಚಿ ಮೇಲೆ ಕುಳಿತು ನಗು ಬೀರಿದ್ದಾನೆ.
ಪಾಕಿಸ್ತಾನದ ಅತಿ ಕಿರಿಯ ವ್ಲಾಗರ್ ಎಂದೇ ಖ್ಯಾತಿಯಾಗಿರುವ ಮೊಹಮ್ಮದ್ ಶಿರಾಜ್ ಇತ್ತೀಚೆಗೆ ಶೆಹಬಾಜ್ ಷರೀಫ್ ಅವರನ್ನು ಭೇಟಿಯಾಗಿದ್ದು, ಅವರ ಜತೆ ಕೆಲ ಸಮಯ ಕಳೆದಿದ್ದಾನೆ. ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಜನಮನ್ನಣೆ ಗಳಿಸಿರುವ, ಜೀವನದ ಕುರಿತ ಸರಳ ವಿಡಿಯೊಗಳ ಮೂಲಕವೇ ಮನೆಮಾತಾಗಿರುವ ಮೊಹಮ್ಮದ್ ಶಿರಾಜ್ ಜತೆ ಮಾತನಾಡಿದ ಶೆಹಬಾಜ್ ಷರೀಫ್ ಅವರು ಬಳಿಕ ಆತನನ್ನು ತಮ್ಮ ಕುರ್ಚಿಯ ಮೇಲೆ ಕೂರಿಸಿದ್ದಾರೆ. ಈ ವಿಡಿಯೊ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ.
ಗ್ರಾಮೀಣ ಜೀವನ, ಸೊಗಡನ್ನು ವಿಡಿಯೊಗಳ ಮೂಲವೇ ಮೊಹಮ್ಮದ್ ಶಿರಾಜ್ ಜನರ ಗಮನ ಸೆಳೆದಿದ್ದಾನೆ. ಮಕ್ಕಳು ಮಾತ್ರವಲ್ಲದೆ ಹಿರಿಯರು ಕೂಡ ಈತನ ವಿಡಿಯೊಗಳನ್ನು ವೀಕ್ಷಿಸುತ್ತಾರೆ. ಗಿಲ್ಗಿಟ್ ಬಾಲ್ಟಿಸ್ತಾನದ ಸ್ಕರ್ದು ಜಿಲ್ಲೆಯಲ್ಲಿ 1ನೇ ತರಗತಿ ಓದುತ್ತಿರುವ ಮೊಹಮ್ಮದ್ ಶಿರಾಜ್ ಈಗ ಯುಟ್ಯೂಬ್, ಇನ್‌ಸ್ಟಾಗ್ರಾಂ, ಫೇಸ್‌ಬುಕ್ ಸೇರಿ ಹಲವು ಜಾಲತಾಣಗಳಲ್ಲಿ ಸ್ಟಾರ್ ಆಗಿದ್ದಾನೆ. ಇದು ಶೆಹಬಾಜ್ ಷರೀಫ್ ಅವರ ಗಮನಕ್ಕೂ ಬಂದಿದ್ದು, ಇಸ್ಲಾಮಾಬಾದ್‌ನಲ್ಲಿರುವ ತಮ್ಮ ನಿವಾಸಕ್ಕೆ ಈತನನ್ನು ಕರೆಸಿದ್ದಾರೆ.
ಇದನ್ನೂ ಓದಿ: Indian Navy: ಇರಾನ್ ಹಡಗು, 23 ಪಾಕಿಸ್ತಾನಿಗಳನ್ನು ಕಡಲ್ಗಳ್ಳರಿಂದ ರಕ್ಷಿಸಿದ ಭಾರತೀಯ ನೌಕಾಪಡೆ
ಮೊಹಮ್ಮದ್ ಶಿರಾಜ್ ತನ್ನ ತಂಗಿ ಮುಸ್ಕಾನ್ ಜತೆ ಪ್ರಧಾನಿ ನಿವಾಸಕ್ಕೆ ತೆರಳಿ, ಅವರೊಂದಿಗೆ ಮಾತುಕತೆ ನಡೆಸಿದ್ದಾನೆ. ಯಾವಾಗಲೂ ಕಾರ್ಯಕ್ರಮ ಸೇರಿ ಹಲವು ಚಟುವಟಿಕೆಗಳಲ್ಲಿ ಬ್ಯುಸಿ ಆಗಿರುವ ಶೆಹಬಾಜ್ ಷರೀಫ್, ಎಲ್ಲದಕ್ಕೂ ವಿರಾಮ ನೀಡಿ ಮಕ್ಕಳ ಜತೆ ಕಾಲ ಕಳೆದಿದ್ದಾರೆ. ಅಲ್ಲದೆ, ಮೊಹಮ್ಮದ್ ಶಿರಾಜ್‌ನನ್ನು ತಮ್ಮ ಕುರ್ಚಿಯಲ್ಲಿ ಕೂರಿಸಿ, ಆತನ ಖುಷಿಗೆ ಕಾರಣವಾಗಿರುವ ಶೆಹಬಾಜ್ ಷರೀಫ್ ಅವರ ಗುಣವನ್ನು ಸಾಮಾಜಿಕ ಜಾಲತಾಣಗಲ್ಲಿ ಜನ ಮೆಚ್ಚಿದ್ದಾರೆ. ಅಂದಹಾಗೆ, ಕೆಲ ದಿನಗಳ ಹಿಂದಷ್ಟೇ ಮೊಹಮ್ಮದ್ ಶಿರಾಜ್ ಯುಟ್ಯೂಬ್ ಖಾತೆಯ ಸಬ್‌ಸ್ಕ್ರೈಬರ್‌ಗಳ ಸಂಖ್ಯೆ 10 ಲಕ್ಷ (ಒಂದು ಮಿಲಿಯನ್) ದಾಟಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ