Site icon Vistara News

#BoycottCNN | ಜೋರಾಯಿತು ಸಿಎನ್ಎನ್ ನ್ಯೂಸ್ ಚಾನೆಲ್ ಬಹಿಷ್ಕಾರ ಅಭಿಯಾನ, ಕಾರಣ ಏನು?

CNN

ವಾಷಿಂಗ್ಟನ್: ಅಮೆರಿಕದ ಪ್ರಮುಖ ಚಾನೆಲ್ ಆಗಿರುವ ಸಿಎನ್ಎನ್ ವಿರುದ್ಧ ವೀಕ್ಷಕರು ತಿರುಗಿ ಬಿದ್ದಿದ್ದಾರೆ. ಸೋಷಿಯಲ್ ಮೀಡಿಯಾಗಳಲ್ಲಿ#BoycottCNN ಎಂದು ಅಭಿಯಾನ ಮಾಡುತ್ತಿದ್ದಾರೆ. ಅವರ ಈ ಆಕ್ರೋಶಕ್ಕೆ ಕಾರಣವೇನು? ಸಿಎನ್ಎನ್ ಇತ್ತೀಚಿನ ದಿನಗಳಲ್ಲಿ ನಿಧಾನವಾಗಿ ಅಮೆರಿಕದ ಮಾಜಿ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಪರವಾಗಿ ಇರುವಂತೆ ತೋರುತ್ತಿದೆ. ರಷ್ಯಾ ಹಾಗೂ ಫ್ಯಾಸಿಸ್ಟ್ ಶಕ್ತಿಗಳಿಗೆ ಇಂಬು ನೀಡುತ್ತಿದೆ ಎಂದು ನೆಟ್ಟಿಗರು ತಮ್ಮ ಆಕ್ರೋಶವನ್ನು ಹೊರ ಹಾಕಿದ್ದಾರೆ.

ಸಿಎನ್ಎನ್ ಮಾಲೀಕತ್ವ ಬದಲಾಗಿದ್ದು, ಅದರ ಕಾರ್ಯವೈಖರಿಯಲ್ಲಿ ಎದ್ದು ಕಾಣುತ್ತಿದೆ. ಪರಿಣಾಮವಾಗಿ ಕಳೆದ ಒಂದು ತಿಂಗಳಲ್ಲಿ ಸಿಎನ್ಎನ್ ಜನಪ್ರಿಯ ಇಬ್ಬರು ಪತ್ರಕರ್ತರು ಸಂಸ್ಥೆಯನ್ನು ತೊರೆದಿದ್ದಾರೆ. ಸೆಂಟರಿಕ್ ಆಗಿದ್ದ ಚಾನೆಲ್ ನಿಧಾನವಾಗಿ ರೈಟಿಸ್ಟ್ ಧೋರಣೆಯನ್ನು ತಳೆಯುತ್ತಿದೆ ಎಂಬ ಆರೋಪವು ಕೇಳಿ ಬರುತ್ತಿದ್ದು, ಕೆಲವು ಪ್ರೋಗ್ರಾಮ್‌ಗಳನ್ನು ಕೂಡ ರದ್ದು ಮಾಡಲಾಗಿದೆ. ಈ ಘಟನೆಗಳು, ನಿರ್ಧಾರಗಳು ವೀಕ್ಷಕರಿಗೆ ಅರಿವಿಗೆ ಬರುತ್ತಿದ್ದಂತೆ ಸೋಷಿಯಲ್ ಮೀಡಿಯಾಗಳಲ್ಲಿ #BoycottCNN ಎಂಬ ಅಭಿಯಾನ ಜೋರಾಗಿದೆ.

ಸಿಎನ್ಎನ್ ಜನಪ್ರಿಯ ಕಾರ್ಯಕ್ರಮವಾಗಿದ್ದ ಬ್ರೈನ್ ಸ್ಟೆಲ್ಟರ್ ಅವರ ರಿಲಾಯಬಲ್ ಸೋರ್ಸಸ್ ಪ್ರಸಾರವನ್ನು ರದ್ದುಪಡಿಸಲಾಗಿದೆ. ಇದಕ್ಕೆ ಸಂಸ್ಥೆಯ ಬದಲಾದ ನಾಯಕತ್ವ ಕಾರಣ ಎಂದು ಆರೋಪಿಸಲಾಗಿದೆ. ಇದಾದ ಬಳಿಕ ಮತ್ತೊಬ್ಬ ಜನಪ್ರಿಯ ಪತ್ರಕರ್ತ, ವೈಟ್ ಹೌಸ್ ರಿಪೋರ್ಟಿಂಗ್ ಮಾಡುತ್ತಿದ್ದ ಜಾನ್ ಹಾರ್ವುಡ್ ಕೂಡ ಸಿಎನ್ಎನ್ ತೊರೆದಿದ್ದಾರೆ.

ಅಮೆರಿಕದ ಮೊದಲ ನ್ಯೂಸ್ ಚಾನೆಲ್ ಎನಿಸಿರುವ ಸಿಎನ್ಎನ್‌ನಲ್ಲಿ ಸಿಕ್ಕಾಪಟ್ಟೆ ಬದಲಾವಣೆಗಳಾಗುತ್ತಿವೆ. ಸಾಕಷ್ಟು ಪತ್ರಕರ್ತರನ್ನು ಕೆಲಸದಿಂದ ತೆಗೆದು ಹಾಕಲಾಗುತ್ತಿದೆ. ಜತೆಗೆ ಸೈದ್ಧಾಂತಿಕವಾಗಿ ಸಿಎನ್ಎನ್ ಸೆಂಟರಿಕ್ ಪಾಲಿಸಿಯಿಂದ ಪ್ರಪಗಂಡಾ ಜರ್ನಲಿಸಮ್ ಕಡೆ ವಾಲುತ್ತಿದೆ ಎಂಬ ಆರೋಪವು ಕೇಳಿ ಬರುತ್ತಿದೆ.

ಬದಲಾದ ಕಂಪನಿಯ ನಾಯಕತ್ವ
ಈಗ ಸಿಎನ್ಎನ್ ಮಾಲೀಕತ್ವ ಬದಲಾಗಿದೆ. ಸಿಎನ್ಎನ್ ಚಾನೆಲ್ ಒಡೆತನವನ್ನು ಹೊಂದಿರುವ ಸಿಎನ್ಎನ್ ಗ್ಲೋಬಲ್ ಕಂಪನಿಯು ಈ ಮೊದಲು ಎಟಿ ಆ್ಯಂಡ್ ಟಿ ಒಡೆತನದಲ್ಲಿತ್ತು. ಈ ಕಂಪನಿಯನ್ನು ಇದೀಗ ವಾರ್ನರ್ ಬ್ರದರ್ಸ್. ಡಿಸ್ಕವರಿ ಕಂಪನಿ ಖರೀದಿಸಿದೆ. ವಾರ್ನರ್ ಬ್ರದರ್ಸ್ ಕಂಪನಿಯಲ್ಲಿ ಹೆಚ್ಚಿನ ಷೇರುಗಳನ್ನು ಹೊಂದಿರುವ ಮಿಲಿಯೇನರ್ ಹಾಗೂ ಮಾಧ್ಯಮ ದೈತ್ಯ ಜಾನ್ ಮಲೋನ್ ಅವರು ಟ್ರಂಪ್ ಅವರನ್ನು ಬೆಂಬಲಿಸಿದ್ದರು. ಹಾಗಾಗಿ, ಸಿಎನ್ಎನ್ ಕಾರ್ಯವೈಖರಿಯಲ್ಲಿ ಬದಲಾವಣೆ ಕಂಡು ಬರುತ್ತಿದೆ ಎಂದು ಆರೋಪಿಸಲಾಗಿದೆ.

ಇದನ್ನೂ ಓದಿ | ಅಮೆರಿಕದ ಡ್ರೋನ್‌ ದಾಳಿಗೆ ಅಲ್‌ ಖೈದಾ ನಾಯಕ ಜವಾಹಿರಿ ಹತ್ಯೆ

Exit mobile version