Site icon Vistara News

Pakistan: ಪಾಕಿಸ್ತಾನದಲ್ಲಿ ಪೆಟ್ರೋಲ್ 10 ರೂ. ದರ ಹೆಚ್ಚಳ, ಈಗ ಲೀಟರ್‌ಗೆ 282 ರೂಪಾಯಿ!

Petrol rate hike in Pakistan by rs 10 per liter

ನವದೆಹಲಿ: ಆರ್ಥಿಕ ದಿವಾಳಿಯತ್ತ ಸಾಗುತ್ತಿರುವ ಪಾಕಿಸ್ತಾನದಲ್ಲಿ (Pakistan) ಪ್ರತಿ ಲೀಟರ್ ಪೆಟ್ರೋಲ್ ದರವನ್ನು 10 ರೂ. ಹೆಚ್ಚಿಸಲಾಗಿದೆ. ಈಗಾಗಲೇ ಹಣದುಬ್ಬರದಿಂದ ಬೆಲೆಗಳು ಗಗನಮುಖಿಯಾಗಿವೆ. ಇದರಿಂದ ಜನರು ತತ್ತರಿಸಿದ್ದಾರೆ. ಗಾಯದ ಮೇಲೆ ಬರೆ ಎಳೆದಂತೆ ಅಲ್ಲಿನ ಸರ್ಕಾರವು ಮತ್ತೆ ಪೆಟ್ರೋಲ್ ದರ ಹೆಚ್ಚಿಸಿದೆ.

10 ರೂ. ಏರಿಕೆಯಿಂದ ಈಗ ಪಾಕಿಸ್ತಾನದಲ್ಲಿ ಲೀಟರ್ ಪೆಟ್ರೋಲ್ ದರ 282 ರೂ.ಗೆ ಏರಿಕೆಯಾಗಿದೆ. ಕಳೆದ ಮಧ್ಯ ರಾತ್ರಿ ಪಾಕಿಸ್ತಾನದ ವಿತ್ತ ಸಚಿವ ಇಶಾಕ್ ದಾರ್ ಅವರು ದರ ಏರಿಕೆಯನ್ನು ಪ್ರಕಟಿಸಿದರು. ಈ ವೇಳೆ, ಮಾತನಾಡಿದ ಅವರು ಡಿಸೇಲ್ ಮತ್ತು ಲೈಟ್ ಡಿಸೇಲ್ ದರದಲ್ಲಿ ಯಾವುದೇ ಬದಲಾವಣೆ ಇಲ್ಲ. ಅವು ಕ್ರಮವಾಗಿ 293 ಮತ್ತು 174.68 ರೂ. ಇರಲಿವೆ. ಸೀಮೆ ಎಣ್ಣೆ ದರವನ್ನೂ 5.78 ರೂ. ಹೆಚ್ಚಿಲಾಗಿದ್ದು, ಅದೀಗ 186.07 ರೂ.ಗೆ ತಲುಪಿದೆ ಎಂದು ಅವರು ತಿಳಿಸಿದರು.

ಕಳೆದ 15 ವರ್ಷಗಳಲ್ಲಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರ ಏರಿಕೆಯಾಗುತ್ತಿರುವುದರಿಂದರ ಪೆಟ್ರೋಲ್ ಉತ್ಪನ್ನಗಳ ದರ ಪರಿಷ್ಕರಣೆ ಅಗತ್ಯವಾಗಿದೆ ಎಂದು ಅವರು ದಾರ್ ಅವರು, ಬೆಲೆ ಏರಿಕೆಯನ್ನು ಸಮರ್ಥಿಸಿಕೊಂಡರು. ಈ ತಿಂಗಳ ಆದಿಯಲ್ಲಿ ಒಪೆಕ್ ಪ್ಲಸ್ ರಾಷ್ಟ್ರಗಳು ತಮ್ಮ ತೈಲ ಉತ್ಪಾದನೆಯನ್ನು ಕಡಿತಗೊಳಿಸುವುದಾಗಿ ಘೋಷಿಸಿದ್ದವು. ಅದರ ಪರಿಣಾಮ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ದರ ಒಮ್ಮಿಂದೊಮ್ಮಿಗೆ ಏರಿಕೆಯಾಗುತ್ತಿದೆ.

ಸಾಲದ ಸುಳಿಯಲ್ಲಿ ಸಿಲುಕಿರುವ ಪಾಕಿಸ್ತಾನ ಮತ್ತು ಅಂತಾರಾಷ್ಟ್ರೀಯ ಹಣಕಾಸು ನಿಧಿ(IMF) ಸಂಸ್ಥೆಗಳು 1.1 ಬಿಲಿಯನ್ ಡಾಲರ್ ಪ್ಯಾಕೇಜ್ ನೀಡುವ ಸಂಬಂಧ ಒಮ್ಮತಕ್ಕೆ ಬರಲು ಇನ್ನೂ ಸಾಧ್ಯವಾಗಿಲ್ಲ. ಪಾಕಿಸ್ತಾನವು ಸಂಪೂರ್ಣವಾಗಿ ಆರ್ಥಿಕ ದಿವಾಳಿಯಾಗುವುದನ್ನು ತಪ್ಪಿಸಲು ಐಎಂಎಫ್ ನೀಡುವ ಸಾಲವು ಅತ್ಯಗತ್ಯವಾಗಿದೆ.

ಇದನ್ನೂ ಓದಿ: 10 ದಿನಗಳಲ್ಲಿ 9 ಬಾರಿ ಪೆಟ್ರೋಲ್‌, ಡೀಸೆಲ್‌ ಬೆಲೆ ಹೆಚ್ಚಳ: ತೈಲ ದರ ಏರಿಕೆ ವಿರುದ್ಧ ʻಕೈʼ ಪ್ರತಿಭಟನೆ

2019ರಲ್ಲಿ ಐಎಂಎಫ್ ಅನುಮೋದಿಸಿದ 6.5 ಬಿಲಿಯನ್ ಡಾಲರ್ ಬೇಲ್‌ಔಟ್ ಪ್ಯಾಕೇಜ್‌ನ ಭಾಗವಾಗಿ 1.1 ಶತಕೋಟಿ ಡಾಲರ್ ಸಾಲ ನೀಡಲಾಗುತ್ತಿದೆ. ಪಾಕಿಸ್ತಾನವು ಬಾಹ್ಯ ಸಾಲದ ಬಾಧ್ಯತೆಗಳಲ್ಲಿ ಸುಸ್ತಿದಾರ ಆಗುವುದನ್ನು ತಪ್ಪಿಸಲು ಇದು ನಿರ್ಣಾಯಕವಾಗಿದೆ ಎನ್ನಲಾಗಿದೆ. ಸೌದಿ ಅರೇಬಿಯಾ ಮತ್ತು ಯುಎಇಯಿಂದ ಹಣವನ್ನು ಪಡೆದುಕೊಳ್ಳುವಲ್ಲಿ ಸೇನಾ ಮುಖ್ಯಸ್ಥ ಜನರಲ್ ಅಸಿಮ್ ಮುನೀರ್ ಪಾತ್ರ ವಹಿಸಿದ್ದಾರೆ ಎಂದು ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಶನಿವಾರ ಬಹಿರಂಗಪಡಿಸಿದ್ದಾರೆ.

Exit mobile version