Site icon Vistara News

Pig Kidney: ಹಂದಿಯ ಮೂತ್ರಪಿಂಡ ಕಸಿ ಮಾಡಿಸಿಕೊಂಡಿದ್ದ ವ್ಯಕ್ತಿ 2 ತಿಂಗಳ ಬಳಿಕ ಸಾವು

Pig Kidney

Pig Kidney

ಬೋಸ್ಟನ್: ಆನುವಂಶಿಕವಾಗಿ ಮಾರ್ಪಡಿಸಿದ ಹಂದಿಯ ಮೂತ್ರಪಿಂಡ (Pig Kidney) ಕಸಿ ಪಡೆದ ಮೊದಲ ವ್ಯಕ್ತಿ, ಇಂಗ್ಲೆಂಡ್‌ನ ವೇಮೌತ್‌ನ ನಿವಾಸಿ 62 ವರ್ಷದ ರಿಕ್ ಸ್ಲೇಮನ್ (Rick Slayman) ಶಸ್ತ್ರ ಚಿಕಿತ್ಸೆ ನಡೆದ ಸುಮಾರು ಎರಡು ತಿಂಗಳ ನಂತರ ನಿಧನ ಹೊಂದಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಅಮೆರಿಕದ ಬೋಸ್ಟನ್‌ನ ಮ್ಯಾಸಚೂಸೆಟ್ಸ್ ಜನರಲ್ ಆಸ್ಪತ್ರೆಯಲ್ಲಿ ಈ ವರ್ಷದ ಮಾರ್ಚ್‌ನಲ್ಲಿ ರಿಕ್ ಸ್ಲೇಮನ್ ಅವರಿಗೆ ಹಂದಿಯ ಮೂತ್ರಪಿಂಡ ಕಸಿ ಮಾಡಲಾಗಿತ್ತು. ʼʼಹಂದಿ ಮೂತ್ರಪಿಂಡವು ಕನಿಷ್ಠ ಎರಡು ವರ್ಷಗಳವರೆಗೆ ಕಾರ್ಯ ನಿರ್ವಹಿಸುತ್ತದೆ ಎಂದು ನಂಬಿದ್ದೆವು. ಆದರೆ ರಿಕ್ ಸ್ಲೇಮನ್ ಅವರ ಹಠಾತ್‌ ನಿಧನ ಆಘಾತ ತಂದಿದೆʼʼ ಎಂದು ವೈದ್ಯರು ತಿಳಿಸಿದ್ದಾರೆ.

“ರಿಕ್ ಸ್ಲೇಮನ್ ಅವರ ಹಠಾತ್ ನಿಧನದಿಂದ ತೀವ್ರ ದುಃಖವಾಗಿದೆ. ಕಿಡ್ನಿ ಕಸಿಯ ಪರಿಣಾಮದಿಂದ ಅವರು ನಿಧನ ಹೊಂದಿದ್ದಾರೆ ಎಂಬುದಕ್ಕೆ ನಮಗೆ ಯಾವುದೇ ಸೂಚನೆ ಸಿಕ್ಕಿಲ್ಲ. ಸ್ಲೇಮನ್ ಅವರನ್ನು ವಿಶ್ವಾದ್ಯಂತದ ಕಿಡ್ನಿ ಸಮಸ್ಯೆ ಇರುವವರ ಭರವಸೆ ಎಂದೇ ಪರಿಗಣಿಸಲಾಗುತ್ತದೆ. ಸ್ಲೇಮನ್ ಅವರ ಕುಟುಂಬಕ್ಕೆ ತೀವ್ರ ಸಂತಾಪ ಸೂಚಿಸುತ್ತಿದ್ದೇವೆʼʼ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.

ಅಂತಿಮ ಹಂತದ ಮೂತ್ರಪಿಂಡ ಕಾಯಿಲೆಯಿಂದ ಬಳಲುತ್ತಿದ್ದ ಸ್ಲೇಮನ್ ಅವರಿಗೆ ಮಾರ್ಚ್ 16ರಂದು ಶಸ್ತ್ರಚಿಕಿತ್ಸೆ ನಡೆಸಿ ಆನುವಂಶಿಕವಾಗಿ ಮಾರ್ಪಡಿಸಿದ ಹಂದಿಯ ಮೂತ್ರಪಿಂಡ ಕಸಿ ಮಾಡಲಾಗಿತ್ತು. ಟೈಪ್ 2 ಮಧುಮೇಹಿಯಾಗಿದ್ದ ಅವರು ಈ ಹಿಂದೆ 2018ರಲ್ಲಿ ಮೂತ್ರಪಿಂಡ ಕಸಿ ಮಾಡಿಸಿಕೊಂಡಿದ್ದರು. ಆದಾಗ್ಯೂ ಐದು ವರ್ಷಗಳ ನಂತರ ಕಸಿ ಮಾಡಿಸಿಕೊಂಡಿದ್ದ ಮೂತ್ರಪಿಂಡ ವಿಫಲವಾಗಲು ಪ್ರಾರಂಭಿಸಿತು ಮತ್ತು ಅಂದಿನಿಂದ ಅವರು ಡಯಾಲಿಸಿಸ್‌ನಲ್ಲಿದ್ದರು.

ಕೊನೆಗೆ ಅವರು ಹಂದಿಯ ಮೂತ್ರಪಿಂಡವನ್ನು ಕಸಿ ಮಾಡಿಸಿಕೊಳ್ಳಲು ಒಪ್ಪಿಗೆ ನೀಡಿದ್ದರು. ಈ ವೇಳೆ ಅವರು ಇದು ತಾನು ಎದುರಿಸುವಂತಹ ಸಮಸ್ಯೆ ಇರುವವರಿಗೆ ಭರವಸೆಯ ಬೆಳಕನ್ನು ಒದಗಿಸಲಿದೆ ಎಂದು ಹೇಳಿದ್ದರು. ಅದರಂತೆ ಶಸ್ತ್ರಚಿಕಿತ್ಸೆ ನಡೆಸಲಾಗಿತ್ತು.

ವೈದ್ಯರ ಪ್ರಯೋಗ ಯಶಸ್ವಿಯಾಗಿತ್ತು. ಆ ಮೂಲಕ ರಿಕ್ ಸ್ಲೇಮನ್ ಹಂದಿ ಮೂತ್ರಪಿಂಡ ಕಸಿ ಸ್ವೀಕರಿಸಿದ ವಿಶ್ವದ ಮೊದಲ ವ್ಯಕ್ತಿ ಎನಿಸಿಕೊಂಡಿದ್ದರು. ಶಸ್ತ್ರಚಿಕಿತ್ಸೆಯ ಬಳಿಕ ಸುಮಾರು ಎರಡು ವಾರಗಳ ಕಾಲ ಆಸ್ಪತ್ರೆಯಲ್ಲಿದ್ದು, ಬಳಿಕ ಮನೆಗೆ ತೆರಳಿದ್ದರು. ಅವರ ಆರೋಗ್ಯದಲ್ಲಿ ಸಾಕಷ್ಟು ಚೇತರಿಕೆ ಕಂಡು ಬಂದಿದೆ. ಮನೆಯಲ್ಲಿ ಚಿಕಿತ್ಸೆ ಮುಂದುವರಿಸುತ್ತಿದ್ದಾರೆ ಎಂದು ಆಸ್ಪತ್ರೆ ವೈದ್ಯರು ತಿಳಿಸಿದ್ದರು. ʼʼಸ್ಲೇಮನ್‌ಗೆ ಕಸಿ ಮಾಡಲಾದ ಹಂದಿಯ ಮೂತ್ರಪಿಂಡವು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ರಕ್ತದಲ್ಲಿನ ತ್ಯಾಜ್ಯವನ್ನು ತೆಗೆದು ಹಾಕುತ್ತಿದ್ದು, ಮೂತ್ರವನ್ನು ಉತ್ಪಾದಿಸುತ್ತದೆ. ದೇಹದ ದ್ರವಗಳನ್ನು ಸಮತೋಲನಗೊಳಿಸುತ್ತದೆʼʼ ಎಂದು ಅಂದು ಮ್ಯಾಸಚೂಸೆಟ್ಸ್ ಜನರಲ್ ಆಸ್ಪತ್ರೆಯ ವೈದ್ಯರು ತಿಳಿಸಿದ್ದರು. ಇದರಿಂದ ಮುಂಬರುವ ದಿನಗಳಲ್ಲಿ ಮಾನವನ ಮೇಲೆ ಪ್ರಾಣಿಗಳ ಅಂಗಾಂಗ ಕಸಿಯ ಪ್ರಯೋಗದ ಹೊಸ ಯುಗವೊಂದು ಪ್ರಾರಂಭವಾಗುವ ಸಾಧ್ಯತೆಯಿದೆ ಎಂದೇ ವಿಶ್ಲೇಷಿಸಲಾಗಿತ್ತು.

ಈ ಹಿಂದೆ ಹಂದಿಯ ಹೃದಯವನ್ನು ಕಸಿ ಮಾಡಿದ ಕೆಲವೇ ವಾರಗಳಲ್ಲಿ ಇಬ್ಬರು ಸಾವನ್ನಪ್ಪಿದ್ದರು. ಹೀಗಾಗಿ ಈ ಪ್ರಯೋಗ ಭರವಸೆ ಮೂಡಿತ್ತು.

ಇದನ್ನೂ ಓದಿ: Pig kidney: ಮನುಷ್ಯನಿಗೆ ಹಂದಿಯ ಕಿಡ್ನಿ ಅಳವಡಿಕೆ ಸಕ್ಸೆಸ್! ರೋಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್

Exit mobile version