Site icon Vistara News

PM Modi in Egypt: ಈಜಿಪ್ಟ್‌ ಸ್ಮಾರಕದಲ್ಲಿ ನಮನ ಸಲ್ಲಿಸಲಿದ್ದಾರೆ ಮೋದಿ; ಭಾರತಕ್ಕೆ ಇದೆ ಲಿಂಕ್!

Heliopolis war Memorial

ಕೈರೋ: ಅಮೆರಿಕ ಪ್ರವಾಸದ ಬಳಿಕ (PM Modi Us Visit) ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು (Narendra Modi) ಈಜಿಪ್ಟ್‌ ಪ್ರವಾಸಕ್ಕೆ (PM Modi in Egypt) ತೆರಳಿದ್ದಾರೆ. ಈ ಪ್ರವಾಸದಲ್ಲಿ ಅವರು ಈಜಿಪ್ಟ್‌ನ ಕೈರೋದಲ್ಲಿನ ಹೆಲಿಯೊಪೊಲಿಸ್ ಯುದ್ಧ ಸ್ಮಾರಕದಲ್ಲಿ ಯೋಧರಿಗೆ ಗೌರವ ನಮನ ಸಲ್ಲಿಸಲಿದ್ದಾರೆ.

ಹೆಲಿಯೊಪೊಲಿಸ್‌ ಎಂಬುದು ಈಜಿಪ್ಟ್‌ ರಾಜಧಾನಿ ಕೈರೋದಲ್ಲಿರುವ ಭಾರತೀಯ ಯೋಧರ ಒಂದು ಯುದ್ಧ ಸ್ಮಾರಕ. ಇಲ್ಲಿ, ಮೊದಲ ಮಹಾಯುದ್ಧದಲ್ಲಿ ಹೋರಾಡಿ ಮಡಿದ ಸುಮಾರು 4,000 ಭಾರತೀಯ ಸೈನಿಕರ ಹೆಸರನ್ನು ಕೆತ್ತಲಾಗಿದೆ. ಹೆಲಿಯೊಪೊಲಿಸ್ ಕಾಮನ್‌ವೆಲ್ತ್ ಯುದ್ಧ ಸಮಾಧಿಗಳ ಸ್ಮಶಾನದಲ್ಲಿ ಎರಡನೇ ವಿಶ್ವಸಮರದಲ್ಲಿ ಮಡಿದ 1,700 ಕಾಮನ್‌ವೆಲ್ತ್ ಸೈನಿಕರ ಸ್ಮಾರಕವೂ ಇದೆ.

ಹೆಲಿಯೊಪೊಲಿಸ್ ಸ್ಮಾರಕದ ಮಹತ್ವವೇನು?

ಹೆಲಿಯೊಪೊಲಿಸ್ (ಪೋರ್ಟ್ ಟ್ಯೂಫಿಕ್) ಸ್ಮಾರಕ ಕಾಮನ್‌ವೆಲ್ತ್ ಯುದ್ಧ ಸಮಾಧಿಗಳ ಸ್ಮಶಾನದ ಭಾಗ. ಮೊದಲ ವಿಶ್ವಯುದ್ಧದ ವೇಳೆ ಈಜಿಪ್ಟ್ ಮತ್ತು ಪ್ಯಾಲೆಸ್ಟೈನ್‌ನಲ್ಲಿ ವಿವಿಧ ಕಾರ್ಯಾಚರಣೆಗಳಲ್ಲಿ ಹೋರಾಡಿ ಮಡಿದ 3,727 ಭಾರತೀಯ ಸೈನಿಕರ ಸ್ಮರಣೆಗೆ ಇದು ಮೀಸಲು. ಇವರೆಲ್ಲರ ಹೆಸರನ್ನು ಇಲ್ಲಿ ಕೆತ್ತಲಾಗಿದೆ.

ಮೂಲ ಪೋರ್ಟ್ ಟ್ಯೂಫಿಕ್ ಸ್ಮಾರಕವನ್ನು 1926ರಲ್ಲಿ ಅನಾವರಣಗೊಳಿಸಲಾಯಿತು. ಅದು ಸೂಯೆಜ್ ಕಾಲುವೆಯ ಪ್ರವೇಶದ್ವಾರದಲ್ಲಿತ್ತು. ಪೋರ್ಟ್ ಟ್ಯೂಫಿಕ್ ಅನ್ನು ಈಗ ಪೋರ್ಟ್ ಸೂಯೆಜ್ ಎಂದು ಕರೆಯಲಾಗುತ್ತದೆ. 1967ರ ಇಸ್ರೇಲ್‌- ಈಜಿಪ್ಟ್ ಯುದ್ಧದ ಸಂದರ್ಭ ಈಜಿಪ್ಟ್ ಸೈನಿಕರು ಸೋತ ಪರಿಣಾಮ ಈ ಸ್ಮಾರಕ ನಾಶವಾಗಿತ್ತು. ನಂತರ ಹೊಸ ಸ್ಮಾರಕವನ್ನು 1980ರಲ್ಲಿ ಹೆಲಿಯೊಪೊಲಿಸ್ ಕಾಮನ್‌ವೆಲ್ತ್ ವಾರ್ ಗ್ರೇವ್ ಸ್ಮಶಾನದಲ್ಲಿ ನಿರ್ಮಿಸಲಾಯಿತು. ಮೂಲ ಸ್ಮಾರಕದಲ್ಲಿ ಒಂದು ಸ್ತಂಭ ಹಾಗೂ ಎರಡು ಘರ್ಜಿಸುವ ಸಿಂಹಗಳು ಇದ್ದವು. ಹೊಸ ಸ್ಮಾರಕದಲ್ಲಿ ಯೋಧರ ಹೆಸರುಗಳು ಮಾತ್ರ ಇವೆ.

ಸೂಯೆಝ್‌ನಲ್ಲಿದ್ದ ಮೂಲ ಸ್ಮಾರಕ

ಭಾರತೀಯ ಸೇನೆಯ ಪಾತ್ರ

ಮೊದಲ ಮಹಾಯುದ್ಧದ ವೇಳೆ ಭಾರತದಿಂದ ಕಳುಹಿಸಲಾದ ಸೇನಾಯೋಧರು ಪಶ್ಚಿಮ ಏಷ್ಯಾದಲ್ಲಿ ನಡೆದ ಕಾಳಗದಲ್ಲಿ ಪ್ರಮುಖ ಪಾತ್ರ ವಹಿಸಿದವು. ಮೊದಲನೆಯ ಮಹಾಯುದ್ಧದಲ್ಲಿ ಭಾರತೀಯ ಸೈನಿಕರ ಪಾತ್ರದ ಕುರಿತು ಪುಸ್ತಕವನ್ನು ಬರೆದಿರುವ ಸಂಶೋಧಕಿ ವೇದಿಕಾ ಕಾಂತ್ ಅವರ ಪ್ರಕಾರ, ಈಜಿಪ್ಟ್ ಮತ್ತು ಪ್ಯಾಲೆಸ್ಟೈನ್‌ ನಡುವಿನ ಸೂಯೆಜ್ ಕಾಲುವೆಯ ಸುರಕ್ಷತೆಯಲ್ಲಿ ಭಾರತೀಯ ಪಡೆಗಳು ಪ್ರಮುಖ ಪಾತ್ರ ವಹಿಸಿದವು. ಅಲ್ಲಿ ನಡೆದ ಹೈಫಾ ಕದನದಲ್ಲಿ ಭಾರತೀಯ ಅಶ್ವಸೈನ್ಯ ಭಾಗವಹಿಸಿತು. ಮೆಸೊಪಟೋಮಿಯಾದಲ್ಲಿ ಕೂಡ ಯುದ್ಧದಲ್ಲಿ ಭಾರತೀಯ ಸೈನಿಕರು ಪ್ರಮುಖ ಪಾತ್ರ ವಹಿಸಿದ್ದರು.

ಆಗ ಬ್ರಿಟಿಷರಿಗೆ ಸೇರಿದ ಭಾರತೀಯ ಸೈನ್ಯದಲ್ಲಿದ್ದ ಭಾರತೀಯರು ಹಾಗೂ ಭಾರತದೊಳಗಿನ ರಾಜ್ಯಗಳಿಗೆ ಸೇರಿದ ಸೈನ್ಯಗಳ ಯೋಧರು ಯುದ್ಧದಲ್ಲಿ ಪ್ರಮುಖ ಪಾತ್ರ ವಹಿಸಿದವು. ಹೆಲಿಯೊಪೊಲಿಸ್ ಸ್ಮಾರಕದಲ್ಲಿ ಪಟ್ಟಿ ಮಾಡಲಾದ ರೆಜಿಮೆಂಟ್‌ಗಳಲ್ಲಿ 42ನೇ ಡಿಯೋಲಿ ರೆಜಿಮೆಂಟ್, 58ನೇ ವಾನ್ ರೈಫಲ್ಸ್ (ಫ್ರಾಂಟಿಯರ್ ಫೋರ್ಸ್), 2ನೇ ಬೆಟಾಲಿಯನ್, 3ನೇ ಕ್ವೀನ್ ಅಲೆಕ್ಸಾಂಡ್ರಾ ಅವರ ಗೂರ್ಖಾ ರೈಫಲ್ಸ್, 51ನೇ ಸಿಖ್ಸ್ (ಫ್ರಾಂಟಿಯರ್ ಫೋರ್ಸ್) 1ನೇ ಬೆಟಾಲಿಯನ್‌ 50 ಕುಮಾವುನ್‌ ರೈಫಲ್ಸ್‌, ಜೋಧಪುರ್‌ ಲ್ಯಾನ್ಸರ್ಸ್, 3ನೇ ಸ್ಯಾಪರ್ಸ್ ಮತ್ತು ಮೈನರ್ಸ್ ಮತ್ತು ಇನ್ನೂ ಅನೇಕ ದಳಗಳು ಭಾಗವಹಿಸಿದ್ದವು.

ಬ್ರಿಟಿಷ್ ಯುದ್ಧಕಾಲದ ಅತ್ಯುನ್ನತ ಶೌರ್ಯ ಪ್ರಶಸ್ತಿಯಾದ ವಿಕ್ಟೋರಿಯಾ ಕ್ರಾಸ್ ಅನ್ನು ಈ ಯುದ್ಧದಲ್ಲಿ ಬಲಿದಾನ ಮಾಡಿದ ರಿಸಾಲ್ದಾರ್ ಬದ್ಲು ಸಿಂಗ್ ಅವರಿಗೆ ಮರಣೋತ್ತರವಾಗಿ ನೀಡಲಾಯಿತು.
ರಿಸಾಲ್ದಾರ್ ಬದ್ಲು ರಾಮ್ ಅವರು 14ನೇ (ಮುರ್ರೆಸ್) ಜಾಟ್ ಲ್ಯಾನ್ಸರ್ಸ್‌ಗೆ ಸೇರಿದ್ದರು. 29ನೇ ಲ್ಯಾನ್ಸರ್‌ಗಳೊಂದಿಗೆ (ಡೆಕ್ಕನ್ ಹಾರ್ಸ್) ಸೇರಿಕೊಂಡು 1918ರ ಸೆಪ್ಟೆಂಬರ್ 13ರಂದು ಹೋರಾಡಿ ಮರಣ ಹೊಂದಿದರು. ಇವರ ಮೂಲ ಪಂಜಾಬ್‌ನ ರೋಹ್ಟಕ್‌ನ ಜಜ್ಜರ್‌ನ ಧಕ್ಲಾ ಎಂಬ ಊರು ಎಂದು ಸ್ಮಾರಕ ಹೇಳುತ್ತದೆ.

ಇದನ್ನೂ ಓದಿ: Video Viral: ವೇದಿಕೆ ಮೇಲೆ ಪ್ರಧಾನಿ ಮೋದಿ ಪಾದ ಸ್ಪರ್ಶಿಸಿ ನಮಿಸಿದ ಅಮೆರಿಕ ಗಾಯಕಿ; ತಲೆಬಾಗಿದ ನಮೋ

Exit mobile version