Site icon Vistara News

PM Modi Russia Visit: ಭಾರತ-ರಷ್ಯಾ ಜಂಟಿ ಹೇಳಿಕೆ ಬಿಡುಗಡೆ; ಜಮ್ಮು & ಕಾಶ್ಮೀರದ ಭಯೋತ್ಪಾದಕ ದಾಳಿಗೆ ಖಂಡನೆ

PM Modi Russia Visit

PM Modi Russia Visit

ಮಾಸ್ಕೋ: ಪ್ರಧಾನಿ ನರೇಂದ್ರ ಮೋದಿ ಅವರು ರಷ್ಯಾ ಪ್ರವಾಸದಲ್ಲಿದ್ದಾರೆ (PM Modi Russia Visit). ಈ ವೇಳೆ ಉಭಯ ರಾಷ್ಟ್ರಗಳ ಸಂಬಂಧದ ಬಲ ವರ್ಧನೆಗೆ ಬಹುಮುಖ್ಯ ತೀರ್ಮಾನಗಳನ್ನು ಕೈಗೊಳ್ಳಲಾಗಿದೆ. ಈ ಮಧ್ಯೆ ಭಾರತ ಮತ್ತು ರಷ್ಯಾ ಜಂಟಿ ಹೇಳಿಕೆ ಬಿಡುಗಡೆ ಮಾಡಿ, ಜಮ್ಮು ಮತ್ತು ಕಾಶ್ಮೀರ, ರಷ್ಯಾದ ದಗೆಸ್ತಾನ್ ಮತ್ತು ಮಾಸ್ಕೋದಲ್ಲಿ ನಡೆದ ಭಯೋತ್ಪಾದಕ ದಾಳಿಯನ್ನು ಖಂಡಿಸಿವೆ. ಜತೆಗೆ 2030ರ ವೇಳೆಗೆ 100 ಬಿಲಿಯನ್ ಡಾಲರ್ (83,48,25,00,00,000 ರೂ.) ಮೊತ್ತದ ದ್ವಿಪಕ್ಷೀಯ ವ್ಯಾಪಾರದ ಗುರಿಯನ್ನು ಹೊಂದುವ ಬಗ್ಗೆಯೂ ಉಲ್ಲೇಖಿಸಲಾಗಿದೆ.

ಎರಡು ಕಡೆಯವರೂ ಸಮಕಾಲೀನ, ಸಮತೋಲಿತ, ಪರಸ್ಪರ ಪ್ರಯೋಜನಕಾರಿ, ಸುಸ್ಥಿರ ಮತ್ತು ದೀರ್ಘಕಾಲೀನ ಪಾಲುದಾರಿಕೆಯನ್ನು ರೂಪಿಸಲು ಶ್ರಮಿಸಿದ್ದಾರೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ಜಂಟಿ ಹೇಳಿಕೆಯಲ್ಲಿ ಏನಿದೆ?

ಪ್ರಧಾನಿ ನರೇಂದ್ರ ಮೋದಿ ಮತ್ತು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ನಡುವಿನ ಜಂಟಿ ಹೇಳಿಕೆಯು “2024ರ ಜುಲೈ 8ರಂದು ಜಮ್ಮು ಮತ್ತು ಕಾಶ್ಮೀರದ ಕಥುವಾದಲ್ಲಿ, ಜೂನ್ 23ರಂದು ರಷ್ಯಾದ ದಗೆಸ್ತಾನದಲ್ಲಿ ಮತ್ತು ಮಾರ್ಚ್ 22ರಂದು ಮಾಸ್ಕೋದ ಕ್ರೋಕಸ್ ಸಿಟಿ ಹಾಲ್‌ನಲ್ಲಿ ಸೇನಾ ಬೆಂಗಾವಲು ಪಡೆ ಮೇಲೆ ನಡೆದ ಭೀಕರ ಭಯೋತ್ಪಾದಕ ದಾಳಿಯನ್ನು ಬಲವಾಗಿ ಖಂಡಿಸುತ್ತೇವೆ. ಈ ದಾಳಿಗಳು ಭಯೋತ್ಪಾದನೆಯ ವಿರುದ್ದ ಇನ್ನಷ್ಟು ಕಠಿಣ ಕ್ರಮ ಕೈಗೊಳ್ಳಬೇಕು ಎನ್ನುವುದನ್ನು ಜ್ಞಾಪಿಸುತ್ತದೆʼʼ ಎಂದು ತಿಳಿಸಿದೆ.

ಅಂತಾರಾಷ್ಟ್ರೀಯ ಭಯೋತ್ಪಾದನೆಯ ವಿರುದ್ಧ ಎಲ್ಲ ರೂಪಗಳಲ್ಲಿನ ಹೋರಾಟಕ್ಕೆ ಉಭಯ ನಾಯಕರು ಕರೆ ನೀಡಿದರು. ಅಂತಾರಾಷ್ಟ್ರೀಯ ಕಾನೂನು ಮತ್ತು ಯುಎನ್ ಚಾರ್ಟರ್‌ನ ಅಧಾರದ ಮೇಲೆ ಈ ಕ್ಷೇತ್ರದಲ್ಲಿ ಇನ್ನಷ್ಟು ಸಹಕಾರದಿಂದ ಕಾರ್ಯ ನಿರ್ವಹಿಸಬೇಕಾದ ಪ್ರಧಾನ್ಯತೆಯನ್ನು ಇಬ್ಬರು ನಾಯಕರು ಅನುಮೋದಿಸಿದರು. ಇದಲ್ಲದೆ ಯುಎನ್ ಭದ್ರತಾ ಮಂಡಳಿ, ಯುಎನ್ ಜನರಲ್ ಅಸೆಂಬ್ಲಿಯ ಭಯೋತ್ಪಾದನಾ ವಿರೋಧಿ ನಿರ್ಣಯಗಳನ್ನು ದೃಢವಾಗಿ ಜಾರಿಗೆ ತರುವ ಅಗತ್ಯವನ್ನು ಒತ್ತಿ ಹೇಳಿದರು. ಇದರಿಂದ ಪಾಕಿಸ್ತಾನ ಮೂಲದ ಭಯೋತ್ಪಾದಕರ ಪಟ್ಟಿಯನ್ನು ತಡೆಯುವ ಚೀನಾದ ಪ್ರಯತ್ನಗಳಿಗೆ ಹಿನ್ನಡೆಯಾಗಲಿದೆ ಎಂದೇ ವಿಶ್ಲೇಷಿಸಲಾಗುತ್ತಿದೆ.

ದೀರ್ಘಾವಧಿಯಲ್ಲಿ ಸಮತೋಲಿತ ಮತ್ತು ಸುಸ್ಥಿರ ದ್ವಿಪಕ್ಷೀಯ ವ್ಯಾಪಾರ ಸಂಬಂಧವನ್ನು ಸಾಧಿಸಲು ಕೈಗಾರಿಕಾ ಸಹಕಾರವನ್ನು ಬಲಪಡಿಸಲು ನಿರ್ಣಯಿಸಲಾಯಿತು. ವಿಶೇಷವಾಗಿ ಹೊಸ ತಾಂತ್ರಿಕ ಮತ್ತು ಹೂಡಿಕೆ ಪಾಲುದಾರಿಕೆಗಳನ್ನು ರೂಪಿಸಲು ರಷ್ಯಾಕ್ಕೆ ಭಾರತೀಯ ರಫ್ತು ಪ್ರಮಾಣ ಹೆಚ್ಚಿಸುವ ಅಗತ್ಯವನ್ನು ನಾಯಕರು ಒತ್ತಿ ಹೇಳಿದರು. ದ್ವಿಪಕ್ಷೀಯ ವ್ಯಾಪಾರದ ಬೆಳವಣಿಗೆಯನ್ನು ಮತ್ತಷ್ಟು ವೇಗಗೊಳಿಸುವ ಗುರಿಯೊಂದಿಗೆ 2030ರ ವೇಳೆಗೆ 100 ಬಿಲಿಯನ್ ಡಾಲರ್ ವ್ಯವಹಾರ ನಡೆಸಲು ನಾಯಕರು ಒಪ್ಪಿಕೊಂಡರು.

ಇದನ್ನೂ ಓದಿ: PM Modi Russia Visit : ಭಾರತ-ರಷ್ಯಾ ಇಂಧನ ಪಾಲುದಾರಿಕೆಯನ್ನು ಶ್ಲಾಘಿಸಿದ ಪ್ರಧಾನಿ ಮೋದಿ

ಉತ್ತರ-ದಕ್ಷಿಣ ಅಂತಾರಾಷ್ಟ್ರೀಯ ಸಾರಿಗೆ ಕಾರಿಡಾರ್, ಉತ್ತರ ಸಮುದ್ರ ಮಾರ್ಗ ಮತ್ತು ಚೆನ್ನೈ-ವ್ಲಾಡಿವೋಸ್ಟಾಕ್‌ ನಡುವೆ ಹೊಸ ಸಮುದ್ರ ಮಾರ್ಗಗಳನ್ನು ಪ್ರಾರಂಭಿಸುವ ಮೂಲಕ ಭಾರತದೊಂದಿಗೆ ಸರಕು ವಹಿವಾಟು ಹೆಚ್ಚಿಸಲು ರಷ್ಯಾ ಒಪ್ಪಿಕೊಂಡಿದೆ. ಮಾತ್ರವಲ್ಲ ಕೃಷಿ ಉತ್ಪನ್ನಗಳು, ಆಹಾರ ಮತ್ತು ರಸಗೊಬ್ಬರಗಳಲ್ಲಿ ದ್ವಿಪಕ್ಷೀಯ ವ್ಯಾಪಾರದ ಪ್ರಮಾಣವನ್ನು ಹೆಚ್ಚಿಸಲು ಉಭಯ ದೇಶಗಳ ನಾಯಕರು ಸಮ್ಮತಿ ಸೂಚಿಸಿದ್ದಾರೆ. ಪರಮಾಣು ಇಂಧನ, ತೈಲ ಸಂಸ್ಕರಣೆ ಮತ್ತು ಪೆಟ್ರೋಕೆಮಿಕಲ್ಸ್ ಸೇರಿದಂತೆ ಪ್ರಮುಖ ಇಂಧನ ಕ್ಷೇತ್ರಗಳಲ್ಲಿನ ಸಹಕಾರಕ್ಕೆ ಭಾರತ-ರಷ್ಯಾ ಒಪ್ಪಿಕೊಂಡಿದೆ.

Exit mobile version