Site icon Vistara News

PM Modi Ukraine Visit: ಜಗತ್ತಿಗೆ ಶಾಂತಿ ಸಂದೇಶ ಸಾರಲು ಭಾರತ ಬದ್ಧ; ಉಕ್ರೇನ್‌ ಭೇಟಿ ಮೂಲಕ ನಿಲುವು ಸ್ಪಷ್ಟಪಡಿಸಿದ ಮೋದಿ

PM Modi Ukraine Visit

ಕೀವ್‌: ರಷ್ಯಾಕ್ಕೆ ಭೇಟಿ ನೀಡಿದ ಸುಮಾರು 6 ವಾರಗಳ ನಂತರ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಯುದ್ಧ ಪೀಡಿತ ಉಕ್ರೇನ್‌ಗೆ ಶುಕ್ರವಾರ (ಆಗಸ್ಟ್‌ 23) ತೆರಳಿದ್ದು, ಈ ಮೂಲಕ ಭಾರತ ಯಾವುದೇ ಒಂದು ದೇಶ ಪರವಾಗಿಲ್ಲ, ಬದಲಾಗಿ ಸಂಘರ್ಷ ನಿಲ್ಲಿಸಿ ಶಾಂತಿ ಕಾಪಾಡಲು ಎಂದಿಗೂ ಬದ್ಧವಾಗಿದೆ ಎನ್ನುವ ಸಂದೇಶ ಸಾರಿದ್ದಾರೆ. ರಷ್ಯಾ-ಉಕ್ರೇನ್‌ ಯುದ್ಧದ (Russia-Ukraine War) ವೇಳೆ ಎರಡೂ ದೇಶಗಳಿಗೆ ಭೇಟಿ ನೀಡಿದ ಕೆಲವೇ ಕೆಲವು ಜಾಗತಿಕ ನಾಯಕರ ಸಾಲಿಗೆ ಇದೀಗ ಮೋದಿ ಅವರೂ ಸೇರಿದ್ದಾರೆ (PM Modi Ukraine Visit).

ಉಕ್ರೇನ್‌ ಅಧ್ಯಕ್ಷ ವೊಲೊಡಿಮಿರ್​ ಝೆಲೆನ್ಸ್ಕಿ (Volodymyr Zelensky) ಅವರೊಂದಿಗೆ, ರಷ್ಯಾ-ಉಕ್ರೇನ್ ಸಂಘರ್ಷವನ್ನು ಕೊನೆಗಾಣಿಸಲು ಅಗತ್ಯವಾದ ಶಾಂತಿಯುತ ಪರಿಹಾರದ ದೃಷ್ಟಿಕೋನಗಳನ್ನು ಹಂಚಿಕೊಳ್ಳುವ ಅವಕಾಶವನ್ನು ನಾನು ಎದುರು ನೋಡುತ್ತಿದ್ದೇನೆ ಎಂದು ದಿಲ್ಲಿಯಿಂದ ಹೊರಡುವಾg ಮೋದಿ ತಿಳಿಸಿದ್ದರು. ಅಲ್ಲದೆ ಪೋಲೆಂಡ್‌ನಲ್ಲಿ ಅವರು ಬುಧವಾರ, ʼʼಯುದ್ಧಭೂಮಿಯಲ್ಲಿ ಯಾವುದೇ ಸಮಸ್ಯೆಯನ್ನು ಪರಿಹರಿಸಲು ಸಾಧ್ಯವಿಲ್ಲ ಎಂದು ಭಾರತ ದೃಢವಾಗಿ ನಂಬುತ್ತದೆ. ಯಾವುದೇ ಬಿಕ್ಕಟ್ಟಿನಲ್ಲಿ ಅಮಾಯಕರ ಜೀವಗಳನ್ನು ಕಳೆದುಕೊಳ್ಳುವುದು ಇಡೀ ಮಾನವಕುಲಕ್ಕೆ ದೊಡ್ಡ ಸವಾಲಾಗಿದೆ. ಶಾಂತಿ ಮತ್ತು ಸ್ಥಿರತೆಯ ಆರಂಭಿಕ ಮರುಸ್ಥಾಪನೆಗಾಗಿ ನಾವು ಸಂಭಾಷಣೆ ಮತ್ತು ರಾಜತಾಂತ್ರಿಕತೆಯನ್ನು ಬೆಂಬಲಿಸುತ್ತೇವೆʼʼ ಎಂದು ಪುನರುಚ್ಚರಿಸಿದ್ದರು.

ಇದೇ ಮೊದಲಲ್ಲ

ಯುದ್ಧ ಬಿಟ್ಟು ಶಾಂತಿಯುತ ಮಾತುಕತೆ ಮೂಲಕ ಸಮಸ್ಯೆ ಪರಿಹರಿಸಬೇಕು ಎನ್ನುವ ನಿಲುವನ್ನು ಭಾರತ ಈ ಹಿಂದಿನಿಂದಲೇ ಪ್ರತಿಪಾದಿಸುತ್ತ ಬಂದಿದೆ. 2022ರಲ್ಲಿ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರಿಗೆ, 2023ರಲ್ಲಿ ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ ಮತ್ತು 6 ವಾರಗಳ ಹಿಂದೆ ರಷ್ಯಾದಲ್ಲಿ ಮೋದಿ ಅವರು ಇದನ್ನೇ ಹೇಳಿದ್ದರು. ಆ ಮೂಲಕ ಯುದ್ಧದ ಬಗ್ಗೆ ಭಾರತದ ನಿಲುವನ್ನು ವಿಶ್ವ ನಾಯಕರಿಗೆ ಸ್ಪಷ್ಟಪಡಿಸಿದ್ದರು.

ಕಳೆದ ತಿಂಗಳು ವೊಲೊಡಿಮಿರ್​ ಝೆಲೆನ್ಸ್ಕಿ ಮೋದಿ ಅವರ ರಷ್ಯಾ ಭೇಟಿಯನ್ನು ತೀವ್ರವಾಗಿ ಟೀಕಿಸಿದ್ದರು ಮತ್ತು “ಮಾಸ್ಕೋದಲ್ಲಿ ವಿಶ್ವದ ಅತ್ಯಂತ ರಕ್ತಸಿಕ್ತ ಅಪರಾಧಿ” (ಪುಟಿನ್‌)ಯನ್ನು ತಬ್ಬಿಕೊಂಡ ನಂತರ ಮೋದಿ ಅವರ ಬಗ್ಗೆ ದಿಗ್ಭ್ರಮೆ ವ್ಯಕ್ತಪಡಿಸಿದ್ದರು. “ಯುದ್ಧಭೂಮಿಯಿಂದ ಯಾವುದೇ ಪರಿಹಾರವನ್ನು ಕಂಡುಹಿಡಿಯಲಾಗುವುದಿಲ್ಲ” ಎಂದು ಮೋದಿ ಈ ಜುಲೈನಲ್ಲಿ ಪುಟಿನ್‌ಗೆ ನೀಡಿದ ಅದೇ ಸಂದೇಶವನ್ನು ಝೆಲೆನ್ಸ್ಕಿ ಬಳಿಯೂ ಮೋದಿ ಪುನರುಚ್ಚರಿಸುವ ನಿರೀಕ್ಷೆಯಿದೆ. ಮುಂದಿನ ತಿಂಗಳು ಮೋದಿ ಅವರು ಅಮೆರಿಕ ಪ್ರವಾಸ ಕೈಗೊಳ್ಳುವ ಮುನ್ನ ರಷ್ಯಾ ಮತ್ತು ಉಕ್ರೇನ್‌ಗೆ ಭೇಟಿ ನೀಡಿದ್ದು ಮಹತ್ವದ ಬೆಳವಣಿಗೆ ಎನಿಸಿಕೊಂಡಿದೆ.

ಇದನ್ನೂ ಓದಿ: PM Modi Poland Visit: ಯುದ್ಧಭೂಮಿಯಲ್ಲಿ ಯಾವ ಸಮಸ್ಯೆಯೂ ಬಗೆಹರಿಯಲ್ಲ; ರಷ್ಯಾ-ಉಕ್ರೇನ್‌ ಸಂಘರ್ಷದ ಬಗ್ಗೆ ಪ್ರಧಾನಿ ಮೋದಿ ರಿಯಾಕ್ಟ್‌

ಭಾರತದ ಪ್ರಧಾನಿಯೊಬ್ಬರು ಸುಮಾರು 3 ದಶಕಗಳ ಬಳಿಕ ಉಕ್ರೇನ್‌ಗೆ ಭೇಟಿ ನೀಡಿದ್ದಾರೆ ಎನ್ನುವುದು ಕೂಡ ವಿಶೇಷ. ಅದಾಗ್ಯೂ ಮೋದಿ ಮತ್ತು ಝೆಲೆನ್ಸ್ಕಿ ಮೂರು ವರ್ಷಗಳಲ್ಲಿ ಮೂರು ಬಾರಿ ಭೇಟಿಯಾಗಿದ್ದಾರೆ. ಈ ವರ್ಷ ಮತ್ತು ಕಳೆದ ವರ್ಷ ನಡೆದ ಜಿ7 ಶೃಂಗಸಭೆಯಲ್ಲಿ ಭೇಟಿಯಾಗಿದ್ದರು ಮತ್ತು 2021ರಲ್ಲಿ ಈ ನಾಯಕರು ಪರಸ್ಪರ ಮಾತುಕತೆ ನಡೆಸಿದ್ದರು. ಅಲ್ಲದೆ 2020ರಲ್ಲಿ ಇವರು ಫೋನ್‌ ಮೂಲಕ ಚರ್ಚೆ ನಡೆಸಿದ್ದರು. ಈ ವರ್ಷ ಮಾರ್ಚ್‌ನಲ್ಲಿ ಉಕ್ರೇನ್‌ ವಿದೇಶಾಂಗ ಸಚಿವ ಡಿಮಿಟ್ರೊ ಕುಲೆಬಾ ಭಾರತಕ್ಕೆ ಆಗಮಿಸಿದ್ದರು. ಹೀಗೆ ಭಾರತ-ಉಕ್ರೇನ್‌ ನಿರಂತರ ಸಂಪರ್ಕದಲ್ಲಿದೆ.

Exit mobile version